ಅಮೆರಿಕ ಜೊತೆ ಸೇನಾ ಸಂಬಂಧ ಹೊಂದಲು ರಾಜೀವ್ ಉತ್ಸುಕರಾಗಿದ್ದರು: ಸಿಐಎ ಗುಪ್ತ ವರದಿ
ವಾಶಿಂಗ್ಟನ್, ಆ. 4: ಅಮೆರಿಕದೊಂದಿಗೆ ಸೇನಾ ಸಂಬಂಧವನ್ನು ಬೆಳೆಸಲು ಮಾಜಿ ಪ್ರಧಾನಿ ರಾಜೀವ್ ಗಾಂಧಿ ‘ಪ್ರಾಮಾಣಿಕ ಆಸಕ್ತಿ’ ಹೊಂದಿದ್ದರು ಹಾಗೂ ಭಾರತದ ವಿದೇಶ ನೀತಿಯನ್ನು ನೂತನ ದಿಕ್ಕಿನತ್ತ ಕೊಂಡೊಯ್ಯುವ ಬಗ್ಗೆ ಉತ್ಸುಕರಾಗಿದ್ದರು ಎಂದು ರಹಸ್ಯ ಮುಕ್ತಗೊಂಡ ಸಿಐಎಯ ದಾಖಲೆಯೊಂದು ತಿಳಿಸಿದೆ.
ಪ್ರಮಾಣವಚನ ಸ್ವೀಕರಿಸಿದ ಸುಮಾರು ಏಳು ತಿಂಗಳುಗಳ ಬಳಿಕ, 1985 ಮೇ ತಿಂಗಳಿಂದ ರಾಜೀವ್ ಗಾಂಧಿ ಸೋವಿಯತ್ ಯೂನಿಯನ್, ಮಧ್ಯಪ್ರಾಚ್ಯ, ಫ್ರಾನ್ಸ್ ಮತ್ತು ಅಮೆರಿಕಗಳಿಗೆ ಪ್ರವಾಸ ಮಾಡಿದರು. ಇದು ಭಾರತೀಯ ವಿದೇಶ ನೀತಿಯನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯಲು ಹಾಗೂ ಅದನ್ನು ಹೆಚ್ಚು ವೈಚಾರಿಕವಾಗಿ ಹಾಗೂ ತನ್ನ ಪೂರ್ವಾಧಿಕಾರಿಗಳಿಗಿಂತ ಕಡಿಮೆ ಭಾವನಾತ್ಮಕವಾಗಿ ಮಾಡಲು ಅವರು ಸಮರ್ಥರಾಗಿದ್ದಾರೆ ಎಂಬುದನ್ನು ಅದು ತೋರಿಸಿದೆ ಅಮೆರಿಕ ಗುಪ್ತಚಾರ ನಿರ್ದೇಶನಾಲಯ ದಾಖಲೆಯೊಂದರಲ್ಲಿ ಹೇಳಿದೆ.
11 ಪುಟಗಳ ರಹಸ್ಯ ವರದಿಯ ಸುರಕ್ಷಿತ ಪ್ರತಿಯನ್ನು ಸಿಐಎ 2016 ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿದೆ.
ಅಮೆರಿಕ ಮತ್ತು ಪಶ್ಚಿಮ ಯುರೋಪ್ ಜೊತೆಗಿನ ತನ್ನ ಆರ್ಥಿಕ, ಅದರಲ್ಲೂ ಮುಖ್ಯವಾಗಿ ತಾಂತ್ರಿಕ ಸಂಬಂದಗಳನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಭಾರತ ಸಿದ್ಧವಾಗಿದೆ ಎಂಬ ಸಂದೇಶವನ್ನು ರಾಜೀವ್ ಗಾಂಧಿ ನೀಡಿದರು ಎಂದು ದಾಖಲೆ ತಿಳಿಸಿದೆ.