ಬಿಡುಗಡೆಗೆ ಸಿದ್ಧವಾದ 'ಜಾನಿ'

Update: 2017-08-04 16:16 GMT

ಕನ್ನಡ ಮಾತ್ರವಲ್ಲ, ಪರಭಾಷಾ ಚಿತ್ರಗಳ ಮೂಲಕವೂ ಹೆಸರು ಮಾಡಿದವರು ಛಾಯಾಗ್ರಾಹಕ ಪಿಕೆ ಎಚ್ ದಾಸ್.‌ ಇದೀಗ ಪ್ರಥಮ ಬಾರಿಗೆ ಅವರು ನಿರ್ದೇಶಿಸಿರುವ ಚಿತ್ರವೊಂದು ತೆರೆಕಾಣಲು ಸಿದ್ಧವಾಗಿದೆ. 'ಜಾನಿ' ಹೆಸರಿನ ಚಿತ್ರದ ಬಿಡುಗಡೆಯ ಪೂರ್ವಭಾವಿಯಾಗಿ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡಿರುವ ವಿಚಾರಗಳು ಇಲ್ಲಿವೆ.

ಚಿತ್ರದ ನಾಯಕನಾಗಿ ನಟಿಸಿರುವ ವಿಜಯರಾಘವೇಂದ್ರ ಚಿತ್ರ ತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ನಿರ್ದೇಶಕ ದಾಸಣ್ಣ ಗುರುಗಳಿದ್ದ ಹಾಗೆ. ನಿರ್ಮಾಪಕರು ಕೂಡ ತುಂಬಾ ಉತ್ಸಾಹಿಗಳು. ಎಲ್ಲರ ಪ್ರಯತ್ನ ಯಶಸ್ಸು ತಂದುಕೊಡುವ ನಿರೀಕ್ಷೆ ಇದೆ ಎಂದರು.

ರಘುವಿನ ಅಚ್ಚರಿ

ಜನಪ್ರಿಯ ಪೋಷಕನಟ ರಂಗಾಯಣ ರಘು ಮಾತನಾಡಿ, "ನಿರ್ದೇಶಕರು ಹಾಸ್ಯದ ಸನ್ನಿವೇಶಗಳಲ್ಲಿ ನಮಗೆ ಸ್ವಾತಂತ್ರ್ಯ ನೀಡುತ್ತಿದ್ದರು. ಆದರೆ ಎಮೋಷನಲ್ ಸನ್ನಿವೇಶ ಬಂದಾಗ ದುಃಖ ಎಷ್ಟಿರಬೇಕೆಂಬ ಬಗ್ಗೆ ಅವರಿಗೆ ಪಕ್ಕಾ ಲೆಕ್ಕಾಚಾರ ಇರುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದಲ್ಲೊಂದು ಪಾತ್ರ ನಿರ್ವಹಿಸಿರುವ ಮೂಗೂರು ಸುಂದರ್ ಸರ್ ನೃತ್ಯದ ಸಂದರ್ಭ ಬಂದಾಗ ಅವರ 82ವರ್ಷದ ಈ ವಯಸ್ಸಿನಲ್ಲಿಯೂ ನಮಗೆ ಸವಾಲಾಗುವಂತರ ಭಾಗಿಯಾಗುತ್ತಿದ್ದರು" ಎಂದು ಅಚ್ಚರಿ ವ್ಯಕ್ತಪಡಿಸಿದರು.

ಪ್ರಭುದೇವ್ ತಂದೆಯ ಮಾತು

ಮೂಲತಃ ಕರ್ನಾಟಕದವರಾದ ಮೂಗೂರು ಸುಂದರ್ ಸುಂದರಂ ಮಾಸ್ಟರ್ ಆಗಿದ್ದು ತಮಿಳುನಾಡು ಸೇರಿಕೊಂಡ ಮೇಲೆ. ಆದರೆ ಹಾಗೆ ನೃತ್ಯ ನಿರ್ದೇಶಕನಾಗುವುದಕ್ಕೂ ಮೊದಲು ನಾಯಕನಾಗಬೇಕೆಂಬ ಆಸೆ ತಮ್ಮದಾಗಿತ್ತು ಎಂದು ಅವರು ತಿಳಿಸಿದರು. ಎನ್ ಟಿ ಆರ್ ಅಭಿಮಾನಿಯಾಗಿದ್ದ ತಮಗೆ ಮೊದಲ ಅವಕಾಶ ದೊರಕಿದ್ದು 1957ರ ಎಂಜಿಆರ್ ಚಿತ್ರದಲ್ಲಿ. 'ಆದರೆ ಅಂದು ಕ್ಯಾಮೆರಾ ಮುಂದೆ ಸಂಭಾಷಣೆ ಹೇಳಲು ಸೋತು‌ ಹಿಂದೆ ಸೇರಿಕೊಂಡ ನಾನು ಬಳಿಕ ನಟನೆಯ ಆಸಕ್ತಿಯನ್ನೇ ಬಿಟ್ಟುಬಿಟ್ಟೆ. ಆದರೆ ಅಂದು ಕಂಠಪಾಠ ಮಾಡಿಕೊಂಡ ಆ ಸಂಭಾಷಣೆ ಇಂದಿಗೂ ನೆನಪಿದೆ' ಎನ್ನುತ್ತಾ ಒಂದು ಪ್ಯಾರ ತಮಿಳು ಡೈಲಾಗ್ ಹೇಳಿ ಬೆಚ್ಚಿ ಬೀಳಿಸಿದರು! ಅದರ ಬಳಿಕ ಪ್ರಕಾಶ್ ರೈಯವರು ಕೂಡ ತಮ್ಮ ಚಿತ್ರವೊಂದರಲ್ಲಿ ನಟಿಸಲು ಆಹ್ವಾನಿಸಿದ್ದರು. ನಾನು ಒಪ್ಪಿರಲಿಲ್ಲ. ಆದರೆ ಈಗ ಪಿಕೆಎಚ್ ದಾಸ್ ಸ್ನೇಹಕ್ಕೆ ಸೋತು ನಟಿಸಿದ್ದೇನೆ ಎಂದರು.

ದಾಸ ವಾಣಿ

ನಿರ್ದೇಶಕ ಪಿಕೆಎಚ್ ದಾಸ್ ಛಾಯಾಗ್ರಾಹಕರಾಗಿ ಕನ್ನಡದಲ್ಲಿ ತಾವು ಕಾರ್ಯನಿರ್ವಹಿಸಿದ ಕೊನೆಯ ಚಿತ್ರ ಶಿವಲಿಂಗ ಎಂಬುದನ್ನು ನೆನಪಿಸಿಕೊಳ್ಳುತ್ತಾ, ಅದೇ ಸಂದರ್ಭದಲ್ಲಿ ನಿರ್ದೇಶನದ ಕನಸು ಮೂಡಿದ್ದಾಗಿ ಹೇಳಿದರು.

ಚಿತ್ರದ ನಿರ್ಮಾಪಕರಾಗಿರುವ ಜಾನಕಿರಾಮ್ ಹೆಸರನ್ನೇ ಚಿಕ್ಕದಾಗಿಸಿ ಜಾನಿ ಎಂಬ ಹೆಸರನ್ನು ಚಿತ್ರಕ್ಕೆ, ನಾಯಕನಿಗೆ ನೀಡಿರುವುದನ್ನು ತಿಳಿಸಿದ ಅವರು, ಸಹನಿರ್ಮಾಪಕರಾದ ಪುರುಷೋತ್ತಮ್  ಮತ್ತು ಅರವಿಂದ್ ರನ್ನು ಪರಿಚಯಿಸಿದರು. ಹಲವಾರು ವರ್ಷಗಳಿಂದ ತಮ್ಮ ಸಹಾಯಕರಾಗಿರುವ ಕುಮಾರ ಚಕ್ರವರ್ತಿ ಚಿತ್ರದಲ್ಲಿ ಛಾಯಾಗ್ರಹಣ ನಿರ್ವಹಿಸಿದ್ದಾರೆಂದು ದಾಸ್ ತಿಳಿಸಿದರು‌. ನಟ ಡ್ಯಾನಿ ಕುಟ್ಟಪ್ಪ ಸೇರಿದಂತೆ ಚಿತ್ರತಂಡದ ಹೆಚ್ಚಿನ ಮಂದಿ ಉಪಸ್ಥಿತರಿದ್ದರು. ಮುಂದಿನವಾರ ಚಿತ್ರ ಬಿಡುಗಡೆಗೊಳಿಸುವ ಯೋಜನೆ ಹಾಕಲಾಗಿದೆ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News