ವಿವೇಗಂ ರಿಲೀಸ್‌ಗೆ ರೆಡಿ

Update: 2017-08-05 10:59 GMT

‘ತಲ’ ಅಜಿತ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ವಿವೇಗಂ’, ಸೆನ್ಸಾರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಯುಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಇದರಿಂದಾಗಿ ಪೂರ್ವನಿಗದಿಯಂತೆ ಆಗಸ್ಟ್ 24ರಂದು ‘ವಿವೇಗಂ’ ಜಗತ್ತಿನಾದ್ಯಂತ ರಿಲೀಸ್ ಆಗುವುದು ಖಚಿತವಾಗಿದೆ. ಗೂಢಚರ್ಯೆ ಹಿನ್ನೆಲೆಯ ಥ್ರಿಲ್ಲರ್ ಕಥಾವಸ್ತುವನ್ನು ಹೊಂದಿರುವ ಈ ಅದ್ದೂರಿ ಚಿತ್ರವನ್ನು ಶಿವಾ ನಿರ್ದೇಶಿಸಿದ್ದಾರೆ. ಈ ಮೊದಲು ಶಿವಾ -ಅಜಿತ್ ಕಾಂಬಿನೇಶನ್‌ನ ‘ವೇದಾಲಂ’, ‘ವೀರಂ’ ಚಿತ್ರಗಳು ಸೂಪರ್‌ಹಿಟ್ ಆಗಿದ್ದವು.

ಹಾಲಿವುಡ್ ಚಿತ್ರಗಳಿಗೆ ಸರಿಸಾಟಿಯಾದಂತಹ ಮೈನವಿರೇಳಿಸುವಂತಹ ಆ್ಯಕ್ಷನ್ ದೃಶ್ಯಗಳು, ‘ವಿವೇಗಂ’ನ ಹೈಲೈಟ್ ಆಗಲಿದೆ ಎಂದು ಚಿತ್ರತಂಡ ಹೆಮ್ಮೆಯಿಂದ ಹೇಳಿಕೊಂಡಿದೆ.

100 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಈ ಚಿತ್ರದ ಬಗ್ಗೆ ಅಜಿತ್ ಅಪಾರವಾದ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಚಿತ್ರದ ಬಹುತೇಕ ಭಾಗಗಳು ಯುರೋಪ್‌ನ ವಿವಿಧೆಡೆ ಚಿತ್ರೀಕರಣಗೊಂಡಿದೆ. ಈ ಚಿತ್ರಕ್ಕಾಗಿ ಅಜಿತ್ ತನ್ನ ದೇಹದಾರ್ಢ್ಯವನ್ನು ಕೂಡಾ ಹೆಚ್ಚಿಸಿದ್ದಾರೆ. ಅವರು ಇಂಟರ್‌ಪೋಲ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಹಲವಾರು ಆ್ಯಕ್ಷನ್ ದೃಶ್ಯಗಳನ್ನು ಡ್ಯೂಪ್ ಇಲ್ಲದೆ ತಾನಾಗಿಯೇ ನಿರ್ವಹಿಸಿದ್ದಾರೆ.

‘ವಿವೇಗಂ’ ಮೂಲಕ ಬಾಲಿವುಡ್ ನಟ ವಿವೇಕ್ ಒಬೆರಾಯ್ ಪ್ರಪ್ರಥಮ ಬಾರಿಗೆ ತಮಿಳು ಚಿತ್ರರಂಗ ಪ್ರವೇಶಿಸಿದ್ದಾರೆ. ಕಮಲ್‌ಹಾಸನ್ ಕಿರಿಯ ಪುತ್ರಿ ಅಕ್ಷರಾ ಹಾಸನ್‌ಗೂ ಇದು ಮೊದಲ ತಮಿಳು ಚಿತ್ರವಾಗಿದೆ. ಚಿತ್ರದ ನಾಯಕಿಯಾಗಿ ಕಾಜಲ್ ಅಗರ್‌ವಾಲ್ ಕಾಣಿಸಿ ಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News