ಸೀಕ್ರೆಟ್ ಸಿಂಗರ್ ಝೈರಾ ವಾಸಿಂ

Update: 2017-08-05 11:17 GMT

ಧಂಗಲ್ ಹುಡುಗಿ ಝೈರಾ ವಾಸಿಂ, ಇದೀಗ ಮತ್ತೆ ಚಿತ್ರರಸಿಕರನ್ನು ಮೋಡಿ ಮಾಡಲು ಬರುತ್ತಿದ್ದಾಳೆ. ಮಿಸ್ಟರ್ ಪರ್‌ಫೆಕ್ಟ್ ಆಮಿರ್‌ಖಾನ್ ನಿರ್ಮಿಸಿರುವ ಸೀಕ್ರೆಟ್ ಸೂಪರ್‌ಸ್ಟಾರ್ ಚಿತ್ರದಲ್ಲಿ ಝೈರಾ, ಗಾಯಕಿಯಾಗುವ ಮಹತ್ವಾಕಾಂಕ್ಷೆ ಹೊತ್ತ ಬಾಲಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಂದೆಯ ವಿರೋಧದ ನಡುವೆಯೂ ಬಾಲಕಿ ತನ್ನ ಗಾಯನಪ್ರತಿಭೆಯನ್ನು ಅಭಿವ್ಯಕ್ತಗೊಳಿಸಲು ಸಾಧ್ಯವಾಗದೇ ಇದ್ದಾಗ, ಇಂಟರ್‌ನೆಟ್ ಆಕೆಯ ರಕ್ಷಣೆಗೆ ಬರುತ್ತದೆ.

ತನ್ನ ನಿಜಗುರುತನ್ನು ಬಹಿರಂಗಪಡಿಸದೆ ಬಾಲಕಿಯು ತನ್ನ ಹಾಡಿನ ವೀಡಿಯೊಗಳನ್ನು ಯೂಟ್ಯೂಬ್‌ಗಳಲ್ಲಿ ಪ್ರಸಾರ ಮಾಡುತ್ತಲೇ. ಕೆಲವೇ ದಿನಗಳಲ್ಲಿ ಆಕೆ ಇಂಟರ್‌ನೆಟ್‌ನ ಸೂಪರ್‌ಸ್ಟಾರ್ ಎನಿಸಿಬಿಡುತ್ತಾಳೆ. ಇದೊಂದು ನೈಜಘಟನೆಗಳಿಂದ ಪ್ರೇರಿತವಾಗಿ ನಿರ್ಮಿತವಾದ ಚಿತ್ರವೆಂದು ಹೇಳಲಾಗುತ್ತಿದೆ. ಕಳೆದ ವಾರ ಸೀಕ್ರೆಟ್ ಸೂಪರ್‌ಸ್ಟಾರ್‌ನ ಟ್ರೇಲರ್ ಬಿಡುಗಡೆಯಾಗಿದ್ದು ಅಂತರ್ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಅಂದಹಾಗೆ ಈ ಚಿತ್ರದಲ್ಲಿ ಆಮಿರ್, ರಾಕ್‌ಸ್ಟಾರ್ ಆಗಿ ಅಭಿನಯಿಸಿದ್ದಾರೆ. ಧಂಗಲ್ ಬಳಿಕ ಮತ್ತೊಮ್ಮೆ ಒಟ್ಟಾಗಿ ಅಭಿನಯಿಸುತ್ತಿರುವ ಆಮಿರ್ ಹಾಗೂ ಝೈರಾ ವಾಸಿಂ ಸೀಕ್ರೆಟ್ ಸೂಪರ್‌ಸ್ಟಾರ್ ಮತ್ತೊಮ್ಮೆ ಜಯಭೇರಿ ಬಾರಿಸುವುದರಲ್ಲಿ ಸಂಶಯವಿಲ್ಲವೆಂದು ಚಿತ್ರದ ಟ್ರೇಲರ್ ವೀಕ್ಷಿಸಿದವರು ಭರವಸೆಯಿಂದ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News