ಭ್ರಷ್ಟಾಚಾರ ಆರೋಪ: ಮಹಾರಾಷ್ಟ್ರ ವಸತಿ ಸಚಿವರ ರಾಜೀನಾಮೆಗೆ ಆಗ್ರಹ
ಮುಂಬೈ, ಆ.5: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ವಸತಿ ಸಚಿವ ಪ್ರಕಾಶ್ ಮೆಹ್ತ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ವಿಪಕ್ಷ ಕಾಂಗ್ರೆಸ್ ಸದಸ್ಯರು ಮೆಹ್ತ ನಿವಾಸದ ಎದುರು ಪ್ರತಿಭಟನಾ ರ‍್ಯಾಲಿ ನಡೆಸಿದರು. ಈ ಸಂದರ್ಭ ಕಾಂಗ್ರೆಸ್ ಮುಂಬೈ ಘಟಕದ ಅಧ್ಯಕ್ಷ ಸಂಜಯ್ ನಿರುಪಮ್ ಅವರು ರಾಜೀನಾಮೆ ಪತ್ರವೊಂದನ್ನು ಸಿದ್ದಪಡಿಸಿಕೊಂಡು ಬಂದಿದ್ದು ಸಚಿವ ಪ್ರಕಾಶ್ ಮೆಹ್ತ ಈ ಪತ್ರಕ್ಕೆ ಸಹಿ ಹಾಕಬೇಕೆಂದು ಆಗ್ರಹಿಸಿದರು.
ಎಸ್‌ಎಆರ್ ಯೋಜನೆಯಲ್ಲಿ ನಡೆದ ಅವ್ಯವಹಾರದಲ್ಲಿ ಮೆಹ್ತ ಪಾತ್ರ ಇರುವುದು ಸ್ಪಷ್ಟವಾಗಿದೆ. ಭ್ರಷ್ಟಾಚಾರ ಆರೋಪ ಕೇಳಿ ಬಂದ ತಕ್ಷಣ ಎಸ್‌ಎಆರ್ ಮುಖ್ಯಸ್ಥ ಪಾಟೀಲ್ ವಿರುದ್ಧ ತನಿಖೆಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಅಲ್ಲದೆ ಅಧಿಕಾರಿಯೋರ್ವರನ್ನು ವಜಾಗೊಳಿಸಲಾಗಿದೆ. ಹೀಗಿರುವಾಗ ಪ್ರಕಾಶ್ ಮೆಹ್ತಾರನ್ನೂ ಯಾಕೆ ಸಚಿವ ಸಂಪುಟದಿಂದ ವಜಾಗೊಳಿಸುವುದಿಲ್ಲ ಎಂದು ಪ್ರತಿಭಟನಾ ರ‍್ಯಾಲಿಯಲ್ಲಿ ಸಂಜಯ್ ನಿರುಪಮ್ ಪ್ರಶ್ನಿಸಿದರು.
ಕಳೆದ ಎರಡು ದಿನಗಳಿಂದ ಈ ಪ್ರಕರಣ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದರೂ ಮೆಹ್ತಾರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂಬುದು ವಿಪಕ್ಷಗಳ ಒತ್ತಾಯವಾಗಿದೆ. ಈ ಮಧ್ಯೆ, ಮುಖ್ಯಮಂತ್ರಿ ಸೂಚಿಸಿದರೆ ಮಾತ್ರ ರಾಜೀನಾಮೆ ನೀಡುವುದಾಗಿ ಪ್ರಕಾಶ್ ಮೆಹ್ತ ಹೇಳಿಕೆ ನೀಡಿದ್ದಾರೆ.
ಮೆಹ್ತ ಅವರ ಪುತ್ರ ಹರ್ಷ ಮೆಹ್ತ ಮತ್ತು ಇತರ ಕೆಲವು ಸಂಬಂಧಿಕರನ್ನು ಗೇಣಿದಾರರು ಎಂದು ಉಲ್ಲೇಖಿಸಿ ಘಾಟ್‌ಕೊಪರ್ ಪ್ರದೇಶದಲ್ಲಿ ಜಮೀನು ಮಂಜೂರುಗೊಳಿಸಲಾಗಿದೆ ಎಂದು ವಿರೋಧ ಪಕ್ಷದ ಮುಖಂಡ ರಾಧಾಕೃಷ್ಣ ವಿಖೆ ಪಾಟೀಲ್ ಆರೋಪಿಸಿದ್ದಾರೆ. ಅಲ್ಲದೆ ಇವರು ಕೊಳೆಗೇರಿ ಪುನರುದ್ದಾರ ಯೋಜನೆಯಡಿ ಫ್ಲಾಟ್‌ಗಳನ್ನು ಪಡೆದಿದ್ದಾರೆ ಎಂದು ದೂರಿದ್ದಾರೆ.