ಐಎಎಸ್ ಅಧಿಕಾರಿಯ ಪುತ್ರಿಗೆ ಕಿರುಕುಳ ಆರೋಪ: ಹರ್ಯಾಣ ಬಿಜೆಪಿ ಮುಖಂಡನ ಪುತ್ರನ ಬಂಧನ
ಚಂಡೀಗಡ, ಆ.5: ಹಿರಿಯ ಐಎಎಸ್ ಅಧಿಕಾರಿಯೋರ್ವರ ಪುತ್ರಿಯನ್ನು ಹಿಂಬಾಲಿಸಿ ಆಕೆಗೆ ಕಿರುಕುಳ ನೀಡಿದ ಆರೋಪದಡಿ ಹರ್ಯಾಣ ಬಿಜೆಪಿ ಅಧ್ಯಕ್ಷರ ಪುತ್ರ ಹಾಗೂ ಮತ್ತೋರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹರ್ಯಾಣ ಬಿಜೆಪಿ ಘಟಕಾಧ್ಯಕ್ಷ ಸುಭಾಷ್ ಬರಾಲ ಅವರ ಪುತ್ರ ವಿಕಾಸ್ ಬರಾಲ ಮತ್ತು ಆತನ ಸಹಚರ ಆಶಿಷ್ ಮದ್ಯದ ಅಮಲಿನಲ್ಲಿ ಈ ಕೃತ್ಯ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇವರ ವಿರುದ್ಧ ಜಾಮೀನು ದೊರೆಯಬಲ್ಲ ಪ್ರಕರಣ ದಾಖಲಿಸಿದ್ದ ಕಾರಣ ಇವರು ಕೂಡಲೇ ಜಾಮೀನು ಪಡೆದು ಹೊರಬಂದಿದ್ದಾರೆ.
ಶುಕ್ರವಾರ ರಾತ್ರಿ 12 ಗಂಟೆಯ ಬಳಿಕ ತಾನು ಹರ್ಯಾಣದ ಸೆಕ್ಟರ್ 7 ಪ್ರದೇಶದಿಂದ ಪಂಚಕುಲ ನಗರಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಆರೋಪಿಗಳು ತಮ್ಮ ಟಾಟಾ ಸಫಾರಿ ಕಾರಿನಲ್ಲಿ ಹಿಂಬಾಲಿಸಿದರು. ತಾನು ಡ್ರೈವ್ ಮಾಡುತ್ತಿದ್ದ ಕಾರಿಗೆ ತಾಗುವಂತೆ ಆರೋಪಿಗಳು ಕಾರನ್ನು ಚಲಾಯಿಸಿಕೊಂಡು ಬಂದಿದ್ದು ತನ್ನ ಕಾರನ್ನು ಅಡ್ಡಗಟ್ಟಿ ಬೇರೊಂದು ದಾರಿಯಲ್ಲಿ ತಾನು ಪ್ರಯಾಣ ಬೆಳೆಸಬೇಕೆಂದು ಪ್ರಯತ್ನಿಸಿದ್ದರು ಎಂದು ಯುವತಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.