ಜಬ್ ಹ್ಯಾರಿ ವೆುಟ್ ಸೇಜಲ್: ಮತ್ತೊಂದು ಪ್ರಬುದ್ಧ ಪ್ರೇಮಕತೆ

Update: 2017-08-05 18:32 GMT

ಶಾರುಖ್ ಖಾನ್‌ಗೀಗ ಐವತ್ತೊಂದು ವರ್ಷ. ರೊಮ್ಯಾಂಟಿಕ್ ಹೀರೋ ಆಗಿ ಜನ ತಮ್ಮನ್ನು ಇನ್ನೂ ಒಪ್ಪಿಕೊಳ್ಳುತ್ತಾರೆಯೇ ಎನ್ನುವ ಗೊಂದಲ ಅವರಲ್ಲಿದೆ. ಈ ಚಿತ್ರದಲ್ಲಿ ನಿರ್ದೇಶಕ ಇಮ್ತಿಯಾಝ್ ಅಲಿ ಶಾರುಖ್‌ಗೆಂದೇ ಪ್ರಬುದ್ಧ ಪ್ರೇಮಕತೆಯೊಂದನ್ನು ಹೆಣೆದಿದ್ದಾರೆ. ರೊಮ್ಯಾಂಟಿಕ್ ಹೀರೋ ಆಗಿ ತಾವಿನ್ನೂ ತಾಜಾ ಆಗಿ ಕಾಣಿಸಿಕೊಳ್ಳಬಲ್ಲೆ ಎಂದು ಶಾರುಖ್ ಕೂಡ ಸಾಬೀತು ಮಾಡಿದ್ದಾರೆ. ಅನುಷ್ಕಾ ಶರ್ಮ ಉತ್ತಮ ನಟನೆಯೊಂದಿಗೆ ಅವರಿಗೆ ಸಾಥ್ ಕೊಟ್ಟಿದ್ದು, ಚಿತ್ರ ಪ್ರಬುದ್ಧ ಪ್ರೇಮಕತೆಗೆ ಸಾಕ್ಷಿಯಾಗುತ್ತದೆ. ಆದರೆ ನಿಧಾನಗತಿಯ ನಿರೂಪಣೆ ಮತ್ತು ಹೆಚ್ಚಿನ ಸಂಖ್ಯೆಯ ಹಾಡುಗಳು ಚಿತ್ರಕ್ಕೆ ಕೊಂಚ ಭಾರವಾಗಿರುವುದು ಹೌದು.

ಯೂರೋಪ್ ದೇಶಗಳ ಪ್ರವಾಸಿ ತಾಣಗಳಲ್ಲಿ ಹ್ಯಾರಿ ಟೂರಿಸ್ಟ್ ಗೈಡ್. ವಿದೇಶದಲ್ಲಿ ಅಲೆಯುತ್ತಿರುವ ಆತನಿಗೆ ಹುಟ್ಟೂರು ಪಂಜಾಬ್‌ನ ಮೋಹ ಕಾಡುತ್ತಲೇ ಇರುತ್ತದೆ. ಮತ್ತೊಂದೆಡೆ ಯೂರೋಪ್‌ನ ಪ್ರವಾಸಿ ತಾಣವೊಂದರ ರೆಸ್ಟೋರೆಂಟ್‌ನಲ್ಲಿ ಪಂಜಾಬ್‌ನ ಯುವತಿ ಸೇಜಲ್ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿರುತ್ತಾಳೆ. ನಿಶ್ಚಿತಾರ್ಥದ ಉಂಗುರ ಕಳೆದುಕೊಂಡು ಅಲೆದಾಡುವ ಆಕೆಗೆ ಹ್ಯಾರಿ ಜೊತೆಯಾಗುತ್ತಾನೆ. ಏಕಾಂಗಿಯಾಗಿ ಅಲೆದಾಡುವ ಹ್ಯಾರಿ ಬದುಕಿಗೆ ಬಣ್ಣ ತುಂಬುತ್ತಾಳೆ ಸೇಜೆಲ್. ತನಗೇ ಅರಿವಿಲ್ಲದಂತೆ ಹ್ಯಾರಿಗೆ ಮನಸೋಲುತ್ತಾಳೆ. ಮುಂದೆ ಯೂರೋಪ್‌ನಿಂದ ಭಾರತಕ್ಕೆ ಮರಳುವ ಸೇಜೆಲ್‌ಗೆ ನಿಶ್ಚಿತಾರ್ಥ ಮಾಡಿಕೊಂಡ ಯುವಕನೊಂದಿಗೆ ಮದುವೆ ನೆರವೇರುತ್ತದೆಯೇ? ಹ್ಯಾರಿ-ಸೇಜಲ್ ಪ್ರೇಮಕತೆಯ ಅಂತ್ಯವೇನು ಎನ್ನುವುದನ್ನು ತೆರೆಯ ಮೇಲೆ ನೋಡಿ.

ನಿರ್ದೇಶಕ ಇಮ್ತಿಯಾಝ್ ಅಲಿ ಈ ಚಿತ್ರಕಥೆಯನ್ನು ಶಾರುಖ್‌ಗಾಗಿಯೇ ಮಾಡಿಕೊಂಡಿದ್ದಾರೆ. ಪ್ರಬುದ್ಧ ಪ್ರೇಮಕತೆ ಶಾರುಖ್ ಇಮೇಜ್ ಮತ್ತು ವಯಸ್ಸಿಗೆ ಸೂಕ್ತವಾಗಿ ಹೊಂದಿಕೆಯಾಗಿದೆ ಎನ್ನುವುದು ವಿಶೇಷ. ಮತ್ತೊಂದೆಡೆ ಅನುಷ್ಕಾ ಕೂಡ ಪಾತ್ರಕ್ಕೆ ಹೊಂದಿಕೆಯಾಗಿದ್ದಾರೆ. ನಿಧಾನಗತಿಯ ನಿರೂಪಣೆಯೇ ಚಿತ್ರಕ್ಕೆ ಅಡ್ಡಿಯಾಗುತ್ತದೆ. ಶಾರುಖ್ ಸಿನೆಮಾಗಳನ್ನು ನೋಡಿಕೊಂಡು ಬಂದಿರುವ ಅವರ ಅಭಿಮಾನಿಗಳಿಗೆ ಲವಲವಿಕೆಯೇ ಇಲ್ಲವಲ್ಲ ಎನಿಸಿದರೆ ಆಶ್ಚರ್ಯವೇನಿಲ್ಲ. ಆದರೆ ಇಮ್ತಿಯಾಝ್ ಇದಕ್ಕೆಲ್ಲಾ ತಲೆಕೆಡಿಸಿಕೊಂಡಂತಿಲ್ಲ. ಪ್ರಬುದ್ಧ ಲವ್‌ಸ್ಟೋರಿಯನ್ನು ಘನತೆಯಿಂದಲೇ ಹೇಳಬೇಕೆಂದು ಪಣತೊಟ್ಟಂತೆ ಸಾವಧಾನವಾಗಿ ನಿರೂಪಿಸುತ್ತಾ ಹೋಗಿದ್ದಾರೆ. ಛಾಯಾಗ್ರಾಹಕ ಮೋಹನನ್ ಯೂರೋಪ್‌ನ ಸುಂದರ ಪ್ರವಾಸಿ ತಾಣಗಳನ್ನು ಸೊಗಸಾಗಿ ಸೆರೆಹಿಡಿದಿದ್ದು, ನಿಧಾನಗತಿಯ ನಿರೂಪಣೆಯನ್ನು ಸರಿದೂಗಿಸಿದ್ದಾರೆ.

ತಮಗಾಗಿ ಕಟ್ಟಿರುವ ಪಾತ್ರವನ್ನು ಶಾರುಖ್ ಉತ್ತಮವಾಗಿ ನಿಭಾಯಿಸಿದ್ದಾರೆ. ಅಗತ್ಯವಿದ್ದೆಡೆ ಸಂಯಮ ಮೊೆದಿದ್ದು, ಫೈಟ್ ಮಾಡಲು ಅವರಿಗಿಲ್ಲಿ ಅವಕಾಶ ಸಿಕ್ಕಿಲ್ಲ. ನಿಶ್ಚಿತಾರ್ಥ ಮಾಡಿಕೊಂಡ ಯುವಕನಂತೆ ನಟಿಸು ಎಂದು ಹ್ಯಾರಿಗೆ ಸೇಜಲ್ ಹೇಳುತ್ತಾಳೆ. ನಾಲ್ಕೈದು ನಿಮಿಷಗಳ ಆ ಸನ್ನಿವೇಶದಲ್ಲಿ ತಮ್ಮನ್ನೇಕೆ ಸಿನಿಪ್ರೇಮಿಗಳು ರೊಮ್ಯಾಂಟಿಕ್ ಹೀರೋ ಎಂದು ಕರೆಯುತ್ತಾರೆ ಎನ್ನುವುದನ್ನು ಸಾಬೀತು ಮಾಡುತ್ತಾರೆ ಶಾರುಖ್! ಅನುಷ್ಕಾ ಶರ್ಮಾಗೆ ನಟನೆಗೆ ಇಲ್ಲಿ ಹೆಚ್ಚು ಸ್ಕೋಪ್ ಇದ್ದು, ಅವರು ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಶಾರುಖ್‌ರೊಂದಿಗೆ ಇದು ಅವರ ಮೂರನೆ ಸಿನೆಮಾ. ಪ್ರೀತಂ ಸಂಗೀತ ಸಂಯೋಜನೆಯಲ್ಲಿನ ಹಾಡುಗಳು ಹೆಚ್ಚೇನೂ ಕಾಡುವುದಿಲ್ಲ. ಲವ್‌ಸ್ಟೋರಿ ನೋಡುತ್ತಲೇ ಯೂರೋಪ್‌ನ ಸುಂದರ ತಾಣಗಳನ್ನೂ ಕಣ್ತುಂಬಿಕೊಳ್ಳಬಹುದು. ಶಾರುಖ್ ಮತ್ತು ಅನುಷ್ಕಾ ಶರ್ಮ ಅಭಿಮಾನಿಗಳು ಮಿಸ್ ಮಾಡಿಕೊಳ್ಳದೆ ನೋಡಬೇಕಾದ ಸಿನೆಮಾ.

ನಿರ್ದೇಶನ: ಇಮ್ತಿಯಾಝ್ ಅಲಿ, ನಿರ್ಮಾಣ: ಗೌರಿ ಖಾನ್, ಸಂಗೀತ: ಪ್ರೀತಂ, ಹಿನ್ನೆಲೆ ಸಂಗೀತ: ಹಿತೇಷ್ ಸೋನಿಕ್, ಸಂಕಲನ: ಆರತಿ ಬಜಾಜ್, ಛಾಯಾಗ್ರಹಣ: ಕೆ.ಯು.ಮೋಹನನ್, ತಾರಾಗಣ: ಶಾರುಖ್ ಖಾನ್, ಅನುಷ್ಕಾ ಶರ್ಮಾ, ಸಯ್ಯಾನಿ ಗುಪ್ತ, ಎವ್ಲಿನ್ ಶರ್ಮ, ಚಂದನ್ ರಾಯ್ ಸನ್ಯಾಲ್, ಪರಸ್ ಅರೋರಾ ಮತ್ತಿತರರು.

ರೇಟಿಂಗ್ - ** 1/3

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News