'ಮುನಿರತ್ನ ಕುರುಕ್ಷೇತ್ರ'ಕ್ಕೆ ಅದ್ದೂರಿ ಮುಹೂರ್ತ

Update: 2017-08-07 10:31 GMT

ಕನ್ನಡದ ಬಹುನಿರೀಕ್ಷಿತ ಚಿತ್ರವಾದ 'ಮುನಿರತ್ನ ಕುರುಕ್ಷೇತ್ರ'ದ ಮುಹೂರ್ತದ ದೃಶ್ಯ ಚಿತ್ರೀಕರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಲ್ಯಾಪ್ ಹೊಡೆದು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ರಸಮಂಜರಿಯನ್ನು ಹೊರತುಪಡಿಸಿ ಯಾವುದೇ ಭಾಷಣಗಳು ಇರಲಿಲ್ಲ ಎನ್ನುವುದು ವಿಶೇಷವಾಗಿತ್ತು.

ಚಿತ್ರದ ನಿರ್ಮಾಪಕ ಮತ್ತು ಸ್ವಯಂಘೋಷಿತ ಕತೆಗಾರ ಮುನಿರತ್ನರವರು  ಸ್ವಾಗತದೊಂದಿಗೆ ಆರಂಭಿಸಿದ ತಮ್ಮ‌ಮಾತುಗಳನ್ನು ಧನ್ಯವಾದಗಳೊಂದಿಗೆ ಕೊನೆಗೊಳಿಸಿದರು. "ಕನ್ನಡ ಚಿತ್ರರಂಗದಲ್ಲಿ ಇದುವರೆಗೆ ಮಹಾಭಾರತದ ಸನ್ನಿವೇಶಗಳು ಒಂದು ಬಾರಿಯೂ ಚಿತ್ರಿಸಲ್ಪಟ್ಟಿಲ್ಲ. ಇದು ಮಹಾಭಾರತದ ಕತೆಯಾದರೂ ಕೂಡ ಯಾವ ಭಾಗಕತ ಹೆಚ್ಚು ಒತ್ತು ನೀಡಲಾಗುತ್ತದೆ ಎನ್ನುವುದನ್ನು ನೀವು ಪರದೆಯ ಮೇಲೆ ನೋಡಬೇಕು. ಚಿತ್ರದಲ್ಲಿ ಭೀಷ್ಮನಾಗಿ ಅಂಬರೀಶ್, ದ್ರೋಣಾಚಾರ್ಯನಾಗಿ ಶದರೀನಿವಾಸ ಮೂರ್ತಿ, ದೃತರಾಷ್ಟ್ರನಾಗಿ ಶ್ರೀನಾಥ್,  ಶ್ರೀಕೃಷ್ಣನಾಗಿ ರವಿಚಂದ್ರನ್, ದುರ್ಯೋಧನನಾಗಿ‌ ದರ್ಶನ್, ದುಶ್ಯಾಸನನಾಗಿ ರವಿಚೇತನ್, ಕರ್ಣನಾಗಿ ಅರ್ಜುನ್ ಸರ್ಜ, ಧರ್ಮರಾಯನಾಗಿ ಶಶಿಕುಮಾರ್, ಭೀಮನಾಗಿ ಡ್ಯಾನಿಶ್ ಅಖ್ತರ್, ನಕುಲ ಸಹದೇವರಾಗಿ ಚಂದನ್ ಮತ್ತು ಯಶಸ್, ದ್ರೌಪದಿಯಾಗಿ ಸ್ನೇಹ, ಅಭಿಮನ್ಯುವಾಗಿ ನಿಖಿಲ್ ಕುಮಾರ್, ಗಾಂಧಾರ ರಾಜನಾಗಿ ಅನಂತನಾಗ್ ವಿಶೇಷ ರಾಜನರ್ತಕಿಯಾಗಿ ಹರಿಪ್ರಿಯ ಕಾಣಿಸಿಕೊಳ್ಳಲಿರುವುದಾಗಿ" ಮುನಿರತ್ನ ತಿಳಿಸಿದರು.

ಸಾಧ್ಯವಾದಷ್ಟು ಕನ್ನಡ ಕಲಾವಿದರನ್ನೇ ಬಳಸಲು ಯತ್ನಿಸಿದ್ದೇನೆ. ಶಿವರಾಜ್ ಕುಮಾರ್, ಪುನೀತ್ ಮತ್ತು ಸುದೀಪ್ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಅವರನ್ನು ಬಳಸಲು ಸಾಧ್ಯವಾಗಿಲ್ಲ. ಇಂಥದೊಂದು ದೊಡ್ಡ ಪ್ರಾಜೆಕ್ಟ್ ಗೆ ಕೈ ಹಾಕುವಾಗ ಅವರನ್ನು ವರ್ಷಗಳ ಮೊದಲೇ ಸಂಪರ್ಕಿಸಿ , ಇಂಥದೊಂದು ಚಿತ್ರದ ಬಗ್ಗೆ ಸೂಚಿಸಿದ್ದರೆ ಅವರು ಖಂಡಿತ ಒಪ್ಪುತ್ತಿದ್ದರು. ಆದರೆ ಮುಂಚಿತವಾಗಿ ಕಾಲ್ ಶೀಟ್ ಪಡೆಯದಿರುವುದು ನನ್ನದೇ ತಪ್ಪು ಎಂದರು.

ಕನ್ನಡಿಗರಿಗೇ ಪ್ರಾಶಸ್ತ್ಯ: ದರ್ಶನ್ ದುರ್ಯೋಧನನಾಗಿ ನಟಿಸುವಾಗ ಆತನೆದರು ನಿಲ್ಲಬೇಕಾದಂಥ ಪಾತ್ರಕ್ಕೆ ತಕ್ಕ ಕಲಾವಿದರು ಬೇಕಾಗಿತ್ತು. ಅಂಥವರನ್ನು ಕಾಣದ ಕಾರಣ ಮುಂಬೈನಿಂದ ಡ್ಯಾನಿಶ್ ಅಖ್ತರ್ ನನ್ನು ಕರೆಸಿದೆವು. ಒಂದುವೇಳೆ ತಿಪ್ಪಗೊಂಡನಹಳ್ಳಿಯಲ್ಲಿ ಆ ದುರಂತ ನಡೆದಿರದಿದ್ದರೆ, ಅಂದು ಮಡಿದ ಇಬ್ಬರಲ್ಲಿ ಒಬ್ಬರಿಗೆ ಖಂಡಿತ ಭೀಮನ ಪಾತ್ರ ನೀಡುತ್ತಿದ್ದೆ ಎಂದು ಮುನಿರತ್ನ ತಿಳಿಸಿದರು. ಕುಂತಿಗಾಗಿ ಲಕ್ಷ್ಮೀ ಮತ್ತು ಅರ್ಜುನನಿಗಾಗಿ ಬೇರೆ ಕಲಾವಿದರ ಹುಡುಕಾಟ ನಡೆಸಲಾಗುತ್ತಿದ್ದು, ಫೈನಲಾದ ತಕ್ಷಣ ತಿಳಿಸುವುದಾಗಿ ಹೇಳಿದ್ದಾರೆ.

ನಿರ್ದೇಶಕ ನಾಗಣ್ಣ ಮಾತನಾಡಿ, ಒಂದೇ ಶೆಡ್ಯೂಲ್ ನಲ್ಲಿ ನೂರು ದಿನಗಳ‌‌ ಕಾಲ ಚಿತ್ರೀಕರಿಸಲಿದ್ದು, ಹೆಚ್ಚಿನ ‌ಭಾಗವನ್ನು ರಾಮೋಜಿ‌ಫಿಲ್ಮ್ ಸಿಟಿಯಲ್ಲಿ ಶೂಟ್ ಮಾಡುವ ಯೋಜನೆ ಹಾಕಲಾಗಿದೆ. ಕಿರಣ್ ಕುಮಾರ್ ಕಲಾ ನಿರ್ದೇಶನದಲ್ಲಿ 15 ಸೆಟ್ ಗಳನ್ನು ಹಾಕಲಾಗುತ್ತದೆ. ಹರಿಕೃಷ್ಣ ಸಂಗೀತ ನೀಡಲಿದ್ದು, ನಾಗೇಂದ್ರ ಪ್ರಸಾದ್ ಹಾಡುಗಳನ್ನು ರಚಿಸಲಿದ್ದಾರೆ ಎಂದು ನಾಗಣ್ಣ ತಿಳಿಸಿದರು. ಒಟ್ಟಿನಲ್ಲಿ ಚಿತ್ರವನ್ನು ಮುಂದಿನ ಸಂಕ್ರಾಂತಿಗೆ ತೆರೆಗೆ ತರಲು ಪ್ರುತ್ನ ನಡೆಸಲಾಗಿದೆ.

ಪೌರಾಣಿಕ ಚಿತ್ರಗಳ ಸಂಭಾಷಣೆಗಳಿಂದ ಜನಪ್ರಿಯರಾಗಿರುವ ಭಾರವಿ, ಛಾಯಾಗ್ರಾಹಕ ವಿನ್ಸೆಂಟ್, ನಟ ಡ್ಯಾನಿಶ್ ಅಖ್ತರ್, ಬಾಹುಬಲಿ ಖ್ಯಾತಿಯ ಸಾಹಸ ಸಂಯೋಜಕ ಕಿಂಗ್ ಸಾಲೊಮನ್, ಸಂಕಲನಕಾರ ಜಾನಿ ಹರ್ಷ ಈ‌ ಸಂದರ್ಭದಲ್ಲಿ ಉಪಸ್ಥಿತರಿದ್ದು, ಮಾಧ್ಯಮದ ಜೊತೆಗೆ ಮಾತನಾಡಿದರು‌. ನಿರ್ಮಾಣ ನಿರ್ವಹಣೆ ಮಾಡುವುದಾಗಿ ತಿಳಿಸಿರುವ ಜಯಶ್ರೀದೇವಿ ಈ‌ ಸಂದರ್ಭದಲ್ಲಿ ಮುನಿರತ್ನರಿಗೆ ಹಾರಹಾಕಿ ಸನ್ಮಾನಿಸಿದರು.

ರಾಜಧಾನಿಯ ಗೊರಗುಂಟೆ ಪಾಳ್ಯದ ಕೋರೆ ಸಭಾ ಭವನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಅಂಬರೀಶ್, ರವಿಚಂದ್ರನ್, ದರ್ಶನ್, ಅರ್ಜುನ್ ಸರ್ಜ, ಶಶಿಕುಮಾರ್, ರವಿಶಂಕರ್, ಸುಕೃತಾ ವಾಗ್ಲೆ , ನಿಖಿಲ್ ಕುಮಾರಸ್ವಾಮಿ, ಸಾ. ರಾ. ಗೋವಿಂದು ಸೇರಿದಂತೆ ರಾಜಕೀಯ ಬಹುತೇಕ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News