ಸೆಸ್ ಶೇ.15ಕ್ಕೇರಿಕೆ: ಎಸ್‌ಯುವಿ,ಐಷಾರಾಮಿ ಕಾರುಗಳು ದುಬಾರಿ

Update: 2017-08-07 13:18 GMT

ಹೊಸದಿಲ್ಲಿ,ಆ.7: ಜು.1ರಂದು ಜಿಎಸ್‌ಟಿ ಜಾರಿಗೆ ಬಂದ ಬಳಿಕ ಬೆಲೆಗಳು ಇಳಿಕೆಯಾಗಿದ್ದ ಎಸ್‌ಯುವಿಗಳು, ಮಧ್ಯಮ ಮತ್ತು ದೊಡ್ಡ ಗಾತ್ರಗಳ ಹಾಗೂ ಐಷಾರಾಮಿ ಕಾರುಗಳು ಮತ್ತೆ ದುಬಾರಿಯಾಗಲಿವೆ. ಅವುಗಳ ಮೇಲೆ ಈಗ ಶೇ.15 ರಷ್ಟಿರುವ ಸೆಸ್ ಅಥವಾ ಉಪಕರವನ್ನು ಶೇ.25ಕ್ಕೆ ಹೆಚ್ಚಿಸುವ ಪ್ರಸ್ತಾವಕ್ಕೆ ಜಿಎಸ್‌ಟಿ ಮಂಡಳಿಯು ಒಪ್ಪಿಗೆ ನೀಡಿದೆ.

ನೂತನ ಜಿಎಸ್‌ಟಿ ವ್ಯವಸ್ಥೆಯಡಿ ಕಾರುಗಳ ಮೇಲೆ ಶೇ.28ರಷ್ಟು ಗರಿಷ್ಠ ದರದಲ್ಲಿ ತೆರಿಗೆಯನ್ನು ಹೇರಲಾಗಿದೆ. ಇದರ ಜೊತೆಗೆ ಜಿಎಸ್‌ಟಿ ಜಾರಿಯಿಂದಾಗಿ ರಾಜ್ಯಗಳಿಗೆ ಆಗುವ ಆದಾಯ ನಷ್ಟವನ್ನು ಸರಿದೂಗಿಸಲು ಪರಿಹಾರ ನಿಧಿಯೊಂದನ್ನು ಸ್ಥಾಪಿಸಲು ಶೇ.1ರಿಂದ ಶೇ.15ರಷ್ಟು ಉಪಕರವನ್ನು ವಿಧಿಸಲಾಗುತ್ತಿದೆ.

 ಜಿಎಸ್‌ಟಿಯ ಬಳಿಕ ಮೋಟಾರು ವಾಹನಗಳ ಮೇಲಿನ ಒಟ್ಟು ತೆರಿಗೆಯು ಜಿಎಸ್‌ಟಿಗಿಂತ ಮೊದಲಿನ ಒಟ್ಟು ತೆರಿಗೆಗೆ ಹೋಲಿಸಿದರೆ ಕಡಿಮೆಯಾಗಿದೆ. ಜಿಎಸ್‌ಟಿ ಮಂಡಳಿಯು ಆ.5ರಂದು ನಡೆದ ತನ್ನ 20ನೆಯ ಸಭೆಯಲ್ಲಿ ಈ ವಿಷಯವನ್ನು ಪರಿಗಣಿಸಿದೆ ಮತ್ತು ಮೋಟಾರು ವಾಹನಗಳ ಮೇಲಿನ ಈಗಿನ ಶೇ.15 ಉಪಕರವನ್ನು ಶೇ.25ಕ್ಕೆ ಹೆಚ್ಚಿಸಲು ಅಗತ್ಯವಾದ ಶಾಸಕಾಂಗ ತಿದ್ದುಪಡಿಗಳನ್ನು ಕೇಂದ್ರ ಸರಕಾರವು ಮಂಡಿಸಬಹುದಾಗಿದೆ ಎಂದು ಶಿಫಾರಸು ಮಾಡಿದೆ ಎಂದು ವಿತ್ತ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಉಪಕರವನ್ನು ಎಂದಿನಿಂದ ಹೆಚ್ಚಿಸಬೇಕೆಂಬ ನಿರ್ಧಾರವನ್ನು ಜಿಎಸ್‌ಟಿ ಮಂಡಳಿಯು ಸೂಕ್ತ ಸಮಯದಲ್ಲಿ ಕೈಗೊಳ್ಳಲಿದೆ ಎಂದೂ ಅದು ಹೇಳಿದೆ.

ಪರಿಹಾರ ಉಪಕರವನ್ನು ಹೆಚ್ಚಿಸಲು ಜಿಎಸ್‌ಟಿ(ರಾಜ್ಯಗಳಿಗೆ ಪರಿಹಾರ) ಕಾಯ್ದೆ, 2017ರ ಕಲಂ 8ರ ಅನುಸೂಚಿಗೆ ತಿದ್ದುಪಡಿಯನ್ನು ತರುವುದು ಅಗತ್ಯವಾಗಿದೆ. ಈಗ ಶೇ.15 ಜಿಎಸ್‌ಟಿ ಹೇರಲಾಗಿರುವ ವಾಹನಗಳು ಕಾಯ್ದೆಯ ಶೀರ್ಷಿಕೆ 8702 ಮತ್ತು 8703 ಅಡಿ ಬರುತ್ತಿದ್ದು, ಮಧ್ಯಮ ಮತ್ತು ದೊಡ್ಡ ಗಾತ್ರದ ಕಾರುಗಳು, ಎಸ್‌ಯುವಿಗಳು ಮತ್ತು 10ಕ್ಕಿಂತ ಅಧಿಕ, ಆದರೆ 13ಕ್ಕಿಂತ ಕಡಿಮೆ ಜನರನ್ನು ಸಾಗಿಸಬಲ್ಲ ಮೋಟಾರು ವಾಹನಗಳು ಈ ವರ್ಗದಲ್ಲಿ ಬರುತ್ತವೆ. ಜೊತೆಗೆ 1,500 ಸಿಸಿಗಿಂತ ಹೆಚ್ಚಿನ ಇಂಜಿನ್ ಸಾಮರ್ಥ್ಯದ ಹೈಬ್ರಿಡ್ ವಾಹನಗಳು ಮತ್ತು 1,500 ಸಿಸಿಗೂ ಕಡಿಮೆ ಇಂಜಿನ್ ಸಾಮರ್ಥ್ಯದ ಮಧ್ಯಮ ವರ್ಗದ ಹೈಬ್ರಿಡ್ ಕಾರುಗಳೂ ಈ ವರ್ಗದಡಿ ಸೇರಿವೆ.

ಜಿಎಸ್‌ಟಿಗೆ ಮುನ್ನ ಮೋಟಾರು ವಾಹನಗಳ ಮೇಲಿನ ಒಟ್ಟು ತೆರಿಗೆ ಶೇ.52-ಶೇ.54.72ರಷ್ಟಾಗುತ್ತಿದ್ದು, ಇದಕ್ಕೆ ಸಿಎಸ್‌ಟಿ, ಆಕ್ಟ್ರಾಯ್ ಇತ್ಯಾದಿಗಳ ರೂಪದಲ್ಲಿ ಶೇ.2.5 ತೆರಿಗೆಯನ್ನು ಸೇರಿಸಲಾಗುತ್ತಿತ್ತು. ಜಿಎಸ್‌ಟಿಯ ಬಳಿಕ ಈ ಒಟ್ಟು ತೆರಿಗೆ ಶೇ.43ಕ್ಕಿಳಿದಿದೆ.

ಜಿಎಸ್‌ಟಿ ಬಳಿಕ ಹೆಚ್ಚಿನ ಎಸ್‌ಯುವಿಗಳ ಬೆಲೆಗಳು 1.1ಲ.ರೂ.ಗಳಿಂದ 3 ಲ.ರೂವರೆಗೆ ಇಳಿಕೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News