ರಾಖಿ ಹಬ್ಬಕ್ಕೆ ಈ ಸಂಸದೆ ತನ್ನ ಸಚಿವ ಸೋದರನಿಗೆ ಹೆಲ್ಮೆಟ್ ಉಡುಗೊರೆ ನೀಡಿದ್ದು ಏಕೆ ?

Update: 2017-08-07 13:23 GMT

ಹೊಸದಿಲ್ಲಿ,ಆ.7 : ತೆಲಂಗಾಣದ ಪ್ರಪ್ರಥಮ ಮಹಿಳಾ ಸಂಸದೆ ಕೆ. ಕವಿತಾ ತನ್ನ ಸಹೋದರ  ಹಾಗೂ ತೆಲಂಗಾಣದ  ಶಾಸಕ ಕೆ. ಟಿ. ರಾಮ ರಾವ್ ಅವರಿಗೆ  ರಕ್ಷಾ ಬಂಧನದ ದಿನ ಹೆಲ್ಮೆಟ್  ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವರು ಈ ಉಡುಗೊರೆಯನ್ನು ಆನ್ ಲೈನ್  ಅಭಿಯಾನದಂಗವಾಗಿ ನೀಡಿದ್ದು  ದ್ವಿಚಕ್ರ ವಾಹನ ಸವಾರರು  ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಲೇಕೆಂದು ಉತ್ತೇಜಿಸುವ ಸಲುವಾಗಿ ಆಕೆ ಆರಂಭಿಸಿದ ಅಭಿಯಾನದಂಗವಾಗಿ ಆಕೆ ಈ ಹೆಲ್ಮೆಟ್  ಉಡುಗೊರೆಯನ್ನು ತನ್ನ ಸೋದರನಿಗೆ ನೀಡಿದ್ದರು. ಈ ಅಭಿಯಾನದ ಹೆಸರು `ಗಿಫ್ಟ್ ಎ ಹೆಲ್ಮೆಟ್' ಆಗಿದೆ. ಟ್ವಿಟ್ಟರ್ ನಲ್ಲಿ ಇದೇ ಹ್ಯಾಶ್ ಟ್ಯಾಗ್ ಮೂಲಕ  ಈ ಅಭಿಯಾನ ಜನಪ್ರಿಯವಾಗಿದೆ.

ಎಲ್ಲಾ ಸೋದರಿಯರೂ ತಮ್ಮ ಸೋದರರಿಗೆ ಹೆಲ್ಮೆಟ್  ಉಡುಗೊರೆ ನೀಡಬೇಕೆಂದು ಕವಿತಾ ಆಶಿಸುತ್ತಾರೆ. ಸಂಬಂಧಿತ ``ಸಿಸ್ಟರ್ಸ್ ಫಾರ್ ಚೇಂಜ್'' ಅಭಿಯಾನ ಕೂಡ ಅವರು ಹಮ್ಮಿಕೊಂಡಿದ್ದಾರೆ. ಪ್ರತಿ ದಿನ ಹೆಲ್ಮೆಟ್ ಧರಿಸದೆ  ದ್ವಿಚಕ್ರ ವಾಹನ ಚಲಾಯಿಸಿದ ಕನಿಷ್ಠ 400 ಜನರು  ಸಾವಿಗೀಡಾಗುತ್ತಾರೆ ಎಂದು ಕವಿತಾ ವಿವರಿಸುತ್ತಾರೆ.

ನಿಜಾಮಾಬಾದ್ ಸಂಸದೆಯಾಗಿರುವ ಕವಿತಾ ತನ್ನ ಸೋದರನ ಜನ್ಮದಿನವಾದ ಜುಲೈ 24ರಂದು ಈ ಅಭಿಯಾನ ಆರಂಭಿಸಿದ್ದು, ಕರ್ನಾಟಕ ಮತ್ತು ಒಡಿಶಾ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಅಭಿಯಾನವನ್ನು ಸೇರಿದ್ದಾರೆ. ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್  ಅವರು  ಮರಳು ಶಿಲ್ಪವೊಂದನ್ನು ರಚಿಸಿ ಈ ಅಭಿಯಾನವನ್ನು ಬೆಂಬಲಿಸಿದ್ದರೆ  ಕ್ರಿಕೆಟಿಗ ವೀರೇಂದರ್ ಸೆಹ್ವಾಗ್, ಬ್ಯಾಡ್ಮಿಂಟನ್ ಪಟುಗಳಾದ ಸೈನಾ ನೆಹ್ವಾಲ್, ಜ್ವಾಲ ಗುಟ್ಟಾ, ಬಾಲಿವುಡ್ ನಟ ರಾಹುಲ್ ದೇವ್, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಘಜಲ್ ಗಾಯಕ ಅನೂಪ್ ಜಲೋಟ, ಸಂಸದರಾದ ಜ್ಯೋತಿರಾದಿತ್ಯ ಸಿಂಧ್ಯ ಮತ್ತಿತರರು ಈ ಅಭಿಯಾನ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News