ಪಿಎಫ್,ಎಫ್‌ಡಿ,ಎಲ್‌ಐಸಿ ಪಾಲಿಸಿ ಇತ್ಯಾದಿ ಹಣ ವಾಪಸ್ ಪಡೆಯುವುದನ್ನು ಮರೆತಿದ್ದರೆ ಏನು ಮಾಡಬೇಕು?

Update: 2017-08-09 09:12 GMT

ಜನರು ಸಾಮಾನ್ಯವಾಗಿ ತಮ್ಮ ಉಳಿತಾಯದ ಹಣವನ್ನು ವಿವಿಧ ಹಣಕಾಸು ಸಾಧನಗಳಲ್ಲಿ ಹೂಡಿಕೆ ಮಾಡುತ್ತಾರೆ. ನೌಕರರ ಭವಿಷ್ಯ ನಿಧಿ(ಪಿಎಫ್)ಯಂತಹ ಹೂಡಿಕೆಯ ಕೆಲವು ಭಾಗಗಳು ಕಡ್ಡಾಯವಾಗಿದ್ದು, ಡಿಬೆಂಚರ್, ನಿರಖು ಠೇವಣಿ (ಎಫ್‌ಡಿ)ಯಂತಹ ಇತರ ಕೆಲವು ಹೂಡಿಕೆಯ ಮಾರ್ಗಗಳು ಐಚ್ಛಿಕವಾಗಿವೆ.

ದೇಶದಲ್ಲಿ ವಿವಿಧ ಖಾತೆಗಳಲ್ಲಿ ಸುಮಾರು 70,000 ಕೋಟಿ ರೂ.ಅದನ್ನು ಪಡೆಯುವವರಿಲ್ಲದೆ ಕೊಳೆಯುತ್ತಿದೆ ಎಂದರೆ ನಿಮಗೆ ಅಚ್ಚರಿಯಾದೀತು. ಹೂಡಿಕೆದಾ ರರು ತಮ್ಮ ಹಣವನ್ನು ಶೇರುಗಳು, ವಿಮಾ ಪಾಲಿಸಿಗಳು, ಪಿಎಫ್ ಇತ್ಯಾದಿಗಳಲ್ಲಿ ತೊಡಗಿಸಿ ಬಳಿಕ ಅದನ್ನು ಮರೆತುಬಿಟ್ಟಿರುವಂತಿದೆ.

ಪಿಎಫ್‌ನ ನಿಷ್ಕ್ರಿಯ ಖಾತೆಗಳಲ್ಲಿ 43,000 ಕೋ.ರೂ.

ಉದ್ಯೋಗಿಗಳ ಭವಿಷ್ಯಕ್ಕಾಗಿ ಹಣವನ್ನುಳಿಸಲು ಸರಕಾರವು ನೌಕರರ ಭವಿಷ್ಯನಿಧಿ ಸಂಸ್ಥೆ(ಇಪಿಎಫ್‌ಒ)ಯನ್ನು ಸ್ಥಾಪಿಸಿದ್ದು, ಅದು ವಿಶ್ವದ ಬೃಹತ್ ಸಾಮಾಜಿಕ ಭದ್ರತೆ ಸಂಸ್ಥೆಗಳಲ್ಲೊಂದಾಗಿದೆ. ಹಾಲಿ ಅದು 15 ಕೋ.ಗೂ ಅಧಿಕ ಖಾತೆಗಳನ್ನು ನಿರ್ವಹಿಸುತ್ತಿದೆ.

ಇಪಿಎಫ್‌ಒದ ನಿಷ್ಕ್ರಿಯ ಖಾತೆಗಳಲ್ಲಿ ಸುಮಾರು 43,000 ಕೋ.ರೂ.ವಾಪಸ್ ಪಡೆಯುವವರಿಲ್ಲದೆ ಕೊಳೆಯುತ್ತಿದೆ. ಇಂತಹ ನಿಷ್ಕ್ರಿಯ ಪಿಎಫ್ ಖಾತೆಗಳಲ್ಲಿ ನಿಮ್ಮ ಹಣವಿದ್ದರೆ ಅದನ್ನು ವಾಪಸ್ ಪಡೆಯಲು ಇದು ಸಕಾಲವಾಗಿದೆ.

ಯಾವುದೇ ಖಾತೆಯಲ್ಲಿ 36 ತಿಂಗಳಿಗೂ ಹೆಚ್ಚಿನ ಅವಧಿಗೆ ಹಣ ಜಮೆಯಾಗದಿದ್ದರೆ ಅದನ್ನು ನಿಷ್ಕ್ರಿಯ ಖಾತೆಯೆಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನೌಕರನೋರ್ವ ಬೇರೆ ಕಡೆ ಉದ್ಯೋಗಕ್ಕೆ ಸೇರಿದಾಗ ತನ್ನ ಹಳೆಯ ಖಾತೆಯನ್ನು ಹೊಸ ಮಾಲಕನಿಗೆ ವರ್ಗಾಯಿಸದೆ ತನ್ನ ಹಿಂದಿನ ವಂತಿಗೆಗಳನ್ನು ಮರೆತುಬಿಟ್ಟಾಗ ಖಾತೆಯು ನಿಷ್ಕ್ರಿಯಗೊ ಳ್ಳುತ್ತದೆ.

ಇಂತಹ ಪಿಎಫ್ ಹಣವನ್ನು ವಾಪಸ್ ಪಡೆಯಲು ಎರಡು ಮಾರ್ಗಗಳಿವೆ.

 ನಿಷ್ಕ್ರಿಯ ಪಿಎಫ್ ಖಾತೆ ಆರಂಭಗೊಂಡ ಐದು ವರ್ಷಗಳ ಬಳಿಕ ಅದನ್ನು ಹಿಂದೆಗೆದುಕೊಳ್ಳುವುದು ಸೂಕ್ತ. ಇದಕ್ಕಾಗಿ ಇಪಿಎಫ್‌ಒ ವೆಬ್‌ಸೈಟ್‌ನಿಂದ ಹಕ್ಕು ಕೋರಿಕೆ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಅದನ್ನು ಭರ್ತಿ ಮಾಡಿ ಸಮೀಪದ ಪಿಎಫ್ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. ನಿಮ್ಮ ಹಕ್ಕು ಕೋರಿಕೆಯನ್ನು ಸಂಸ್ಕರಿಸಿದ ಬಳಿಕ ಇಪಿಎಫ್‌ಒ ನೀವು ಅರ್ಜಿಯಲ್ಲಿ ತಿಳಿಸಿರುವ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುತ್ತದೆ.

ಹಾಲಿ ಪಿಎಫ್ ಖಾತೆಗೆ ಹಣವನ್ನು ವರ್ಗಾಯಿಸುವುದು ಇನ್ನೊಂದು ಮಾರ್ಗವಾಗಿದೆ. ಪಿಎಫ್ ಖಾತೆಗಳು ಆರಂಭಗೊಂಡು ಇನ್ನೂ ಐದು ವರ್ಷವಾಗದಿರುವವರಿಗೆ ಇದು ಸೂಕ್ತವಾದ ಆಯ್ಕೆಯಾಗಿದೆ. ಏಕೆಂದರೆ ಇನ್ನೂ ಐದು ವರ್ಷಗಳು ತುಂಬಿರದ ಪಿಎಫ್ ಖಾತೆಗಳಿಂದ ಹಣವನ್ನು ವಾಪಸ್ ಪಡೆದರೆ ಮೂಲದಲ್ಲಿ ಆದಾಯ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ. ಖಾತೆಯು ಐದು ವರ್ಷಗಳಿಗಿಂತ ಹಳೆಯದಾಗಿದ್ದರೆ ಹಣವನ್ನು ಹಿಂದೆಗೆದುಕೊಳ್ಳುವಾಗ ತೆರಿಗೆಯನ್ನು ಕಡಿತಗೊಳಿಸಲಾಗುವುದಿಲ್ಲ.

ಪಾವತಿಯಾಗದ ಡಿವಿಡೆಂಡ್,ಪಕ್ವ ಎಫ್‌ಡಿ,ಡಿಬೆಂಚರ್‌ಗಳಲ್ಲಿ 9,100 ಕೋ.ರೂ

ಹೂಡಿಕೆದಾರರು ತಮ್ಮ ಶೇರು ಸರ್ಟಿಫಿಕೇಟ್‌ಗಳನ್ನು ಎಲ್ಲಿಯೋ ಇಟ್ಟು ಮರೆತ ಅಥವಾ ಡಿವಿಡೆಂಡ್(ಲಾಭಾಂಶ) ಪ್ರಕಟಣೆಗಳನ್ನು ತಪ್ಪಿಸಿಕೊಂಡಿರುವ ನಿದರ್ಶನಗಳಿವೆ. ಸುದೀರ್ಘಾವಧಿಯಲ್ಲಿ ಅವರು ತಮ್ಮ ಹೂಡಿಕೆಗಳನ್ನೂ ಮರೆಯಬಹುದು.

ಕಂಪನಿಗಳು ತಮ್ಮ ಶೇರುದಾರರಿಗೆ ಡಿವಿಡೆಂಡ್ ವಾರಂಟ್‌ಗಳನ್ನು ಕಳುಹಿಸುತ್ತವೆ. ಹೂಡಿಕೆದಾರರು 30 ದಿನಗಳಲ್ಲಿ ಅದನ್ನು ನಗದೀಕರಿಸದಿದ್ದರೆ ಹಣವನ್ನು ಬೇರೊಂದು ಖಾತೆಗೆ ವರ್ಗಾಯಿಸಲಾಗುತ್ತದೆ ಮತ್ತು ಕಂಪನಿಯ ವಾರ್ಷಿಕ ವರದಿಯಲ್ಲಿ ಸ್ವೀಕೃತಿ ಪಡೆಯದ ಡಿವಿಡೆಂಡ್ ಎಂದು ವರ್ಗೀಕರಿಸಲಾಗುತ್ತದೆ. ಏಳು ವರ್ಷಗಳ ಬಳಿಕ ಈ ಖಾತೆಯನ್ನು ಕಂಪನಿಯಿಂದ ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿಗೆ ವರ್ಗಾಯಿ ಸಲಾಗುತ್ತದೆ.

ಈ ಹಣವನ್ನು ಮರಳಿ ಪಡೆಯಲು ಹೂಡಿಕೆದಾರರು ತಾವು ಕಳೆದುಕೊಂಡಿರುವ ಡಿವಿಡೆಂಡ್, ಶೇರು ಫೋಲಿಯೊ ನಂಬರ್ ಮತ್ತು ಖರೀದಿ ದಿನಾಂಕದ ಮಾಹಿತಿಯೊಂದಿಗೆ ರಿಜಿಸ್ಟ್ರಾರ್ ಆಫ್ ಕಂಪನೀಸ್ ಮತ್ತು ಶೇರು ವರ್ಗಾವಣೆ ಏಜೆಂಟ್‌ಗೆ ಬರೆಯಬೇಕಾಗುತ್ತದೆ. ನೇರ ವರ್ಗಾವಣೆಗಾಗಿ ಹೂಡಿಕೆದಾರರು ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನೂ ಒದಗಿಸಬೇಕಾಗುತ್ತದೆ.

ವಿಮೆ ಕಂಪನಿಗಳಲ್ಲಿ ಪಡೆಯುವವರಿಲ್ಲದೆ ಕೊಳೆಯುತ್ತಿರುವ 11,668 ಕೋ.ರೂ.

ಸರಕಾರಿ ಸ್ವಾಮ್ಯದ ಭಾರತೀಯ ಜೀವವಿಮಾ ನಿಗಮದ ಜೊತೆಗೆ ಹಲವಾರು ಖಾಸಗಿ ಜೀವವಿಮಾ ಸಂಸ್ಥೆಗಳು ದೇಶದಲ್ಲಿ ಕಾರ್ಯಾಚರಿಸುತ್ತಿದ್ದು, ಪಾಲಿಸಿದಾರರು ಪಾಲಿಸಿಯ ಲಾಭಗಳನ್ನು ನಗದೀಕರಿಸಿಕೊಳ್ಳದ, ಪಕ್ವತೆಯ ಬಳಿಕ ತಮ್ಮ ಹಣವನ್ನು ಪಡೆಯದಿರುವ ಅಥವಾ ಪಾಲಿಸಿದಾರರು ನಿಧನರಾಗಿದ್ದರೂ ವಿಮಾ ಹಣಕ್ಕಾಗಿ ಹಕ್ಕು ಕೋರಿಕೆಯನ್ನು ಮಂಡಿಸದಿರುವ ಪ್ರಕರಣಗಳು ಸಾಮಾನ್ಯವಾಗಿವೆ. ಹೀಗಾಗಿ ಇಷ್ಟೊಂದು ಹಣ ವಿಮಾ ಕಂಪನಿಗಳ ಬಳಿಯೇ ಉಳಿದುಕೊಂಡಿದೆ. ಈ ಕಂಪನಿಗಳು ಸುದೀರ್ಘಾವಧಿಯವರೆಗೆ ಈ ಹಣವನ್ನು ತಮ್ಮ ಬಳಿಯೇ ಇಟ್ಟುಕೊಂಡಿರುತ್ತವೆ, ಆದರೆ ಇದರ ಮೇಲೆ ಯಾವುದೇ ಬಡ್ಡಿಯನ್ನು ನೀಡುವುದಿಲ್ಲ. ಪಾಲಿಸಿದಾರ ನಿಧನ ಹೊಂದಿದ ಬಳಿಕ ವಾರಸುದಾರರು ಸಾಧ್ಯವಾದಷ್ಟು ಶೀಘ್ರ ವಿಮಾಹಣಕ್ಕಾಗಿ ಹಕ್ಕು ಕೋರಿಕೆಯನ್ನು ಮಂಡಿಸುವುದು ಅಗತ್ಯವಾಗಿದೆ. ಪಾಲಿಸಿಯ ನಂಬರ್ ಮತ್ತು ಇತರ ಅಗತ್ಯ ದಾಖಲೆಗಳೊಂದಿಗೆ ಪಾಲಿಸಿಯನ್ನು ಖರೀದಿಸಿದ ಶಾಖೆಯನ್ನು ಸಂಪರ್ಕಿಸಬೇಕು. ವಾರಸುದಾರರು ಬೇರೊಂದು ಸ್ಥಳದಲ್ಲಿ ವಾಸವಾಗಿದ್ದರೆ ಏಜೆಂಟ್ ಅಥವಾ ವಲಯ ಅಧಿಕಾರಿಗಳನ್ನು ಸಂಪರ್ಕಿಸಹುದಾಗಿದೆ.

ಪಾಲಿಸಿದಾರರು ಪಾಲಿಸಿಯನ್ನು ಖರೀದಿಸಿದ ಬಳಿಕ ಅದರ ದಾಖಲೆಯನ್ನು ಕಾಯ್ದಿಟ್ಟುಕೊಳ್ಳಬೇಕು ಮತ್ತು ಆ ಬಗ್ಗೆ ಕುಟುಂಬ ಸದಸ್ಯರಿಗೆ ಮಾಹಿತಿಯನ್ನು ನೀಡಬೇಕು. ಅಲ್ಲದೆ ಪಾಲಿಸಿಯಲ್ಲಿ ವಾರಸುದಾರರ ಹೆಸರನ್ನು ಅಗತ್ಯವಾಗಿ ಉಲ್ಲೇಖಿಸ ಬೇಕು ಮತ್ತು ಸಂಬಂಧಿತ ವ್ಯಕ್ತಿಗೆ ಈ ಬಗ್ಗೆ ಮಾಹಿತಿಯನ್ನು ನೀಡಬೇಕು.

ನಿಷ್ಕ್ರಿಯ ಎಸ್‌ಬಿ ಖಾತೆಗಳಲ್ಲಿ 1,916 ಕೋ.ರೂ.

 ಯಾವುದೇ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಎರಡು ವರ್ಷಗಳವರೆಗೆ ಯಾವುದೇ ವಹಿವಾಟುಗಳನ್ನು ನಡೆಸದಿದ್ದರೆ ಅವುಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಖಾತೆದಾರನ ಹಣದ ಸುರಕ್ಷತೆಯ ದಷ್ಟಿಯಿಂದ ಈ ಖಾತೆಗಳ ಮೂಲಕ ಎಟಿಎಂನಿಂದ ಹಣ ಹಿಂದೆಗೆತ, ಇಂಟರ್‌ನೆಟ್ ಅಥವಾ ಫೋನ್ ಬ್ಯಾಂಕಿಂಗ್, ನೂತನ ಚೆಕ್ ಪುಸ್ತಕಗಳ ವಿತರಣೆ ಇತ್ಯಾದಿಗಳು ಸೇರಿದಂತೆ ಹಲವಾರು ವಹಿವಾಟುಗಳನ್ನು ನಿರ್ಬಂಧಿಸಲಾಗುತ್ತದೆ. ಇಂತಹ ಖಾತೆಗಳನ್ನು ಮತ್ತೊಮ್ಮೆ ಸಕ್ರಿಯಗೊಳಿಸಲು ಖಾತೆದಾರರು ಗುರುತಿನ ಪುರಾವೆ ಮತ್ತು ಪಾಸ್‌ಬುಕ್ ಅಥವಾ ಚೆಕ್ ಪುಸ್ತಕದೊಡನೆ ತಮ್ಮ ಬ್ಯಾಂಕಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಖಾತೆಯಲ್ಲಿ ವಹಿವಾಟುಗಳನ್ನು ನಡೆಸದಿದ್ದಕ್ಕೆ ಕಾರಣವನ್ನೂ ಅರ್ಜಿಯಲ್ಲಿ ಉಲ್ಲೇಖಿಸಬೇಕಾಗುತ್ತದೆ.

 ಇಷ್ಟಾದ ಬಳಿಕ ಬ್ಯಾಂಕು ‘ನಿಮ್ಮ ಗ್ರಾಹಕರ ಬಗ್ಗೆ ತಿಳಿದುಕೊಳ್ಳಿ(ಕೆವೈಸಿ) ಪ್ರಕ್ರಿಯೆಯನ್ನು ಮತ್ತೆ ಹೊಸದಾಗಿ ಆರಂಭಿಸುತ್ತದೆ ಮತ್ತು 24 ಗಂಟೆಗಳಲ್ಲಿ ಖಾತೆಯನ್ನು ಪುನಃ ಕ್ರಿಯಾಶೀಲಗೊಳಿಸುತ್ತದೆ. ನಿಷ್ಕ್ರಿಯ ಖಾತೆಯನ್ನು ಪುನಃ ಕ್ರಿಯಾಶೀಲಗೊಳಿಸಲು ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ.

ಬ್ಯಾಂಕ್ ಠೇವಣಿಗಳಲ್ಲಿ 5,000 ಕೋ.ರೂ.ಅಧಿಕ ಹಣ

  1.33 ಕೋಟಿ ಬ್ಯಾಂಕ್ ಖಾತೆಗಳಲ್ಲಿ 5,000 ಕೋ.ರೂ.ಗೂ ಅಧಿಕ ಹಣವು ಕೊಳೆಯುತ್ತಿದ್ದು, ನಿಜವಾದ ಖಾತೆದಾರರನ್ನು ಹುಡುಕಿ ಅದನ್ನು ಮರಳಿಸುವುದು ಪ್ರಯಾಸದ ಕೆಲಸವಾಗಿದೆ. ಯಾವುದೇ ವ್ಯಕ್ತಿ ಬ್ಯಾಂಕ್‌ನಲ್ಲಿ ಠೇವಣಿಯಿಟ್ಟು ಬಳಿಕ ಅದನ್ನು ಮರೆತಿದ್ದರೆ ಅಂತಹ ಠೇವಣಿ ಪಕ್ವಗೊಂಡ ಬಳಿಕ ಬಡ್ಡಿಸಹಿತ ಅದನ್ನು ವಾಪಸ್ ಪಡೆಯಬಹುದಾಗಿದೆ. ಇಂತಹ ಪ್ರಕರಣದಲ್ಲಿ ಪಕ್ವತೆಯ ದಿನಾಂಕದಿಂದ ಉಳಿತಾಯ ಖಾತೆಯ ಬಡ್ಡಿದರಗಳು ಅನ್ವಯಿಸುತ್ತವೆ. ನೀವು ಈ ಹಣವನ್ನು ಮರು ಠೇವಣಿ ಯಿರಿಸಿದರೆ ಅದಕ್ಕೆ ನಿಗದಿತ ಬಡ್ಡಿದರ ಅನ್ವಯವಾಗುತ್ತದೆ.

ಠೇವಣಿಯು ಪಕ್ವಗೊಂಡ ಹತ್ತು ವರ್ಷಗಳೊಳಗೆ ಅದನ್ನು ವಾಪಸ್ ಪಡೆಯದಿದ್ದರೆ ಅದನ್ನು ಹಕ್ಕು ಮಂಡಿಸದ ಹಣದ ಖಾತೆಗೆ ವರ್ಗಾಯಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News