ಜಪಾನಿನ ಈ ಬಾರ್‌ನಲ್ಲಿ ಮಂಗಗಳೇ ವೇಟರ್‌ಗಳು....!

Update: 2017-08-09 11:09 GMT

ಜಪಾನಿನ ಉತ್ಸುನೊಮಿಯಾ ನಗರದಲ್ಲಿರುವ ಕಯಾಬುಕಿಯಾ ಟಾವೆರ್ನ್ ಮೇಲ್ನೋಟಕ್ಕೆ ಇತರ ಸಾಂಪ್ರದಾಯಿಕ ಶೈಲಿಯ ಜಪಾನಿ ಬಾರ್‌ಗಳಂತೆಯೇ ಕಾಣುತ್ತದೆ. ಆದರೆ ಒಮ್ಮೆ ಒಳಗಡಿಯಿಟ್ಟರೆ ಈ ಬಾರ್ ಏಕೆ ವಿಭಿನ್ನ ಎನ್ನುವುದು ಗೊತ್ತಾಗುತ್ತದೆ. ಹೌದು, ಇಲ್ಲಿ ಗ್ರಾಹಕರ ಕೋರಿಕೆಗಳನ್ನು ಪೂರೈಸಲು ವೇಟರ್‌ಗಳಿಲ್ಲ, ಮಕಾಕಿ ಮಂಗಗಳೇ ಆ ಕೆಲಸವನ್ನು ಮಾಡುತ್ತವೆ!

ಇಲ್ಲಿಯ ವಾನರ ವೇಟರ್‌ಗಳ ಪೈಕಿ ಹೆಚ್ಚಿನ ಗಮನವನ್ನು ಸೆಳೆಯುವುದು 17ರ ಹರೆಯದ ಹೆಣ್ಣು ಕೋತಿ ಫುಕು-ಚಾನ್. ಚುರುಕಾಗಿ ಓಡಾಡುವ ಇದು ಅದೊಮ್ಮೆ ಮೂಲ ವಾನರ್ ವೇಟರ್ ಯಾಟ್-ಚಾನ್ ಅನ್ನು ಅನುಕರಣೆ ಮಾಡಿ ಯಾರೂ ಹೇಳದಿದ್ದರೂ ನ್ಯಾಪ್ಕಿನ್‌ನ್ನು ಗ್ರಾಹಕರಿಗೆ ತಂದು ನೀಡಿತ್ತು. ಬಾರನ್ ಮಾಲಿಕ ಕೌರು ಒತ್ಸುಕಾ ಅಂದಿನಿಂದ ಅದನ್ನು ವೇಟರ ಕೆಲಸಕ್ಕೆ ನಿಯೋಜಿಸಿದ್ದಾನೆ.

ಮಂಗಗಳಿಂದ ಸೇವೆ ಪಡೆಯಲು ವಿಶ್ವದ ಎಲ್ಲ ಕಡೆಗಳಿಂದ ಜನರು ಈ ಬಾರ್‌ಗೆ ಭೇಟಿ ನೀಡುತ್ತಿರುತ್ತಾರೆ. ಫುಕು-ಚಾನ್‌ಳ ಚಟುವಟಿಕೆಗಳನ್ನು ಸೆರೆ ಹಿಡಿದಿರುವ ವೀಡಿಯೊವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅದು ವೇಟರ್ ಕಾರ್ಯವನ್ನು ಎಷ್ಟೊಂದು ನಾಜೂಕಾಗಿ ನಿರ್ವಹಿಸುತ್ತದೆ ಎನ್ನುವುದನ್ನು ನೋಡಬಹುದಾಗಿದೆ.

ವೇಟರ್ ಸಮವಸ್ತ್ರವನ್ನು ಧರಿಸಿದ ಫುಕು-ಚಾನ್ ಬಿಯರ್ ತಂದು ನೀಡುವುದನ್ನು, ಊಟ ಮಾಡುವವರಿಗೆ ನ್ಯಾಪ್ಕಿನ್‌ಗಳನ್ನು ಪೂರೈಸುವುದನ್ನು ಕಂಡು ಅತಿಥಿಗಳು ಬೆರಗಾ ಗುತ್ತಾರೆ.

ಆದರೆ ಈ ಹಿರಿಯ ಪರಿಚಾರಕಿ ಆಗಾಗ್ಗೆ ತಪ್ಪುಗಳನ್ನೂ ಮಾಡುತ್ತಿರುತ್ತಾಳೆ. ಟೇಬಲ್‌ನತ್ತ ಓಡುವಾಗ ಕೈಯಲ್ಲಿದ್ದ ನೆಲಗಡಲೆ ಕಾಳುಗಳು ತುಂಬಿದ್ದ ಕಪ್‌ನ್ನು ಚೆಲ್ಲಿರುವ ದೃಶ್ಯವೂ ಈ ವೀಡಿಯೊದಲ್ಲಿದೆ.

ಫುಕು-ಚಾನ್ ಮತ್ತು ಆಕೆಯ ಸಹೋದ್ಯೋಗಿ ವಾನರ ವೇಟರ್‌ಗಳ ಸೇವೆಯಿಂದ ಸಂತುಷ್ಟ ಗ್ರಾಹಕರು ತೆರಳುವಾಗ ಅವುಗಳಿಗೆ ಟಿಪ್ಸ್ ರೂಪದಲ್ಲಿ ಸೋಯಾ ಬೀನ್‌ಗಳನ್ನು ನೀಡಿದರೆ, ಸಂಬಳದ ರೂಪದಲ್ಲಿ ಕೌರು ಅವುಗಳಿಗೆ ಬಾಳೆಹಣ್ಣುಗಳನ್ನು ತಿನ್ನಿಸುತ್ತಾನೆ.

ಮಕಾಕಿ ಮಂಗಗಳ ವಾಸಸ್ಥಾನವಾದ ನಿಕ್ಕೊ ಪರ್ವತದ ಬಳಿಯಿಂದ ತನಗೆ ಸೂಕ್ತವಾದ ಮಂಗಗಳನ್ನು ತರುವ ಕೌರು ಅವುಗಳನ್ನು ಅತಿಯಾಗಿ ಪ್ರೀತಿಸುತ್ತಾನೆ. ‘ಅವು ನನ್ನ ಪಾಲಿಗೆ ಕುಟುಂಬ ಸದಸ್ಯರಿಗಿಂತ ಹೆಚ್ಚಾಗಿವೆ. ಇಡೀ ದಿನ ಅವು ನನ್ನೊಂದಿಗೆ ಇರುತ್ತವೆ, ರಾತ್ರಿ ನನ್ನೊಂದಿಗೇ ನಿದ್ರಿಸುತ್ತವೆ ’ಎನ್ನುತ್ತಾನೆ ಆತ.

ಅಂದ ಹಾಗೆ ಈ ಬಾರ್‌ನಲ್ಲಿ ಕಳೆದ 29 ವರ್ಷಗಳಿಂದಲೂ ಮಂಗಗಳು ವೇಟರ್ ಕಾರ್ಯ ನಿರ್ವಹಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News