ಮುಂಬೈ ಮಹಾನಗರಿಯಲ್ಲಿ ಬೃಹತ್ ಮರಾಠಾ ಮಾರ್ಚ್
ಮುಂಬೈ, ಆ.9 : ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಆಗ್ರಹಿಸಿ ಮರಾಠಾ ಸಮುದಾಯಕ್ಕೆ ಸೇರಿದ ಸಾವಿರಾರು ಮಂದಿ ಬುಧವಾರ ನಗರದಲ್ಲಿ ಮೌನ ಮೆರವಣಿಗೆ ನಡೆಸಿದರು. ಬೈಕುಲಾದಲ್ಲಿರುವ ಜೀಜಾಮಾತಾ ಉದ್ಯಾನದಿಂದ ಆರಂಭವಾದ ಮೆರವಣಿಗೆ ಆಜಾದ್ ಮೈದಾನದಲ್ಲಿ ಕೊನೆಗೊಳ್ಳಲಿದೆ. ಮೆರವಣಿಗೆ ವೇಳೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲೂ ಭಾರೀ ಕೋಲಾಹಲ ನಡೆದಿತ್ತಲ್ಲದೆ ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಕೂಡ ಮರಾಠಾ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿದರು. ನಲ್ವತ್ತೈದು ನಿಮಿಷಗಳ ಅವಧಿಯಲ್ಲಿ ಸದನವನ್ನು ಮೂರು ಬಾರಿ ಮುಂದೂಡಲಾಯಿತು. ವಿಧಾನಸಭೆಯ ಹೊರಗೂ ಆಡಳಿತ ಮತ್ತು ವಿಪಕ್ಷ ಸದಸ್ಯರು ಧರಣಿ ನಡೆಸಿದರು. ಅಪರಾಹ್ನದ ನಂತರ ಶಾಸಕರು ಮರಾಠಾ ಮೋರ್ಚಾದಲ್ಲಿ ಭಾಗವಹಿಸಲು ತೆರೆಳಿದರು.
ಪ್ರತಿಭಟನಾ ಮೆರವಣಿಗೆಯಿಂದ ನಗರದ ಹಲವೆಡೆ ರಸ್ತೆ ತಡೆಯುಂಟಾಗಿತ್ತು. ದಕ್ಷಿಣ ಮುಂಬೈಯ ಹಲವು ಶಾಲೆಗಳಿಗೂ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಲಾಗಿತ್ತು. ಮುಂಬೈಯ ಖ್ಯಾತ ಡಬ್ಬಾವಾಲಾಗಳೂ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಔರಂಗಾಬಾದ್ ನಗರದಲ್ಲಿ ಇಂತಹ ಒಂದು ಪ್ರತಿಭಟನೆ ನಡೆದು ಸರಿಯಾಗಿ ಒಂದು ವರ್ಷ ಆಗಿರುವ ಸಂದರ್ಭದಲ್ಲಿ ಈ 58ನೇ ಮರಾಠಾ ಮಾರ್ಚ್ ನಡೆದಿದೆ. ಕಳೆದ ವರ್ಷದ ಜುಲೈ ತಿಂಗಳಲ್ಲಿ ಅಹಮದ್ ನಗರದ ಕೊಪರ್ಡಿ ಗ್ರಾಮದಲ್ಲಿ 14 ವರ್ಷದ ಮರಾಠಾ ಸಮುದಾಯದ ಬಾಲಕಿಯೊಬ್ಬಳ ಬರ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದ ಬಳಿಕ ರಾಜ್ಯದಲ್ಲಿ ವಿವಿಧೆಡೆ ಇಂತಹ ಮರಾಠಾ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಬುಧವಾರದ ಮೆರವಣಿಗೆ ಆಜಾದ್ ನಗರ ಮೈದಾನದಲ್ಲಿ ಕೊನೆಗೊಳ್ಳಲಿದೆ.
ಪರಿಶಿಷ್ಟ ಜಾತಿ/ವರ್ಗ ದೌರ್ಜನ್ಯ ತಡೆ ಕಾಯಿದೆಯ ದುರುಪಯೋಗ ಆರೋಪದಲ್ಲಿ ಅದನ್ನು ತಡೆಯಲು ತಿದ್ದುಪಡಿ, ರೈತರ ಆತ್ಮಹತ್ಯೆ ತಡೆಯಲು ಸಾಲ ಮನ್ನಾ ಮತ್ತು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕೆಂಬುದು ಪ್ರತಿಭಟನಾಕಾರರ ಇತರ ಬೇಡಿಕೆಗಳಾಗಿವೆ. ಮರಾಠಾ ಸಮುದಾಯದ ಬೇಡಿಕೆಗಳನ್ನೊಳಗೊಂಡ ಮನವಿಪತ್ರವನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗುವುದೆಂದು ಹಿರಿಯ ಮರಾಠಾ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಹೇಳಿದ್ದಾರೆ. ಮರಾಠಾ ಸಮುದಾಯದ ಆರ್ಥಿಕ ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ನಡೆಸಲು ಹಿಂದಿನ ಎನ್‍ಸಿಪಿ ಸರಕಾರ ರಚಿಸಿದ್ದ ವಿಶೇಷ ಸಮಿತಿಯ ನೇತೃತ್ವವನ್ನು ರಾಣೆ ವಹಿಸಿದ್ದರು.