ರಾಜ್ಯಸಭೆಯ ಸಭಾಪತಿಯಾಗಿ ಅನ್ಸಾರಿ ಕಾರ್ಯನಿರ್ವಹಣೆಗೆ ಸಂಸದರ ಪ್ರಶಂಸೆ
ಹೊಸದಿಲ್ಲಿ,ಆ.10: ದಶಕದ ಅಧಿಕಾರಾವಧಿಯ ಬಳಿಕ ರಾಜ್ಯಸಭೆಯ ಸಭಾಪತಿ ಹುದ್ದೆಯಿಂದ ನಿರ್ಗಮಿಸುತ್ತಿರುವ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿಯವರು ಸಾಂವಿಧಾನಿಕ ನಿಯಮಗಳನ್ನು ಎತ್ತಿ ಹಿಡಿದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಿರಿಯ ನಾಯಕರು ಗುರುವಾರ ಪ್ರಶಂಸೆಗಳ ಹೊಳೆಯನ್ನೇ ಹರಿಸಿದರು.
ಸಂವಿಧಾನವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಅನ್ಸಾರಿಯವರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದ ಮೋದಿ, ವೃತ್ತಿಪರ ರಾಜತಾಂತ್ರಿಕರಾಗಿ ಅವರ ಅನುಭವವು ಮೇಲ್ಮನೆಯ ಕಲಾಪಗಳನ್ನು ಸುಗಮವಾಗಿ ನಡೆಸಲು ಅವರಿಗೆ ನೆರವಾಗಿತ್ತು. ಹಲವಾರು ಸಂದರ್ಭಗಳಲ್ಲಿ ರಾಜತಾಂತ್ರಿಕ ವಿಷಯಗಳ ಕುರಿತು ಅವರ ಅಂತರ್ದೃಷ್ಟಿಯ ಲಾಭವನ್ನು ತಾನೂ ಪಡೆದುಕೊಂಡಿದ್ದೇನೆ ಎಂದರು.
‘‘ಈ ಸದನದ ಇತಿಹಾಸದಲ್ಲಿ ಇಂದು ಅತ್ಯಂತ ಮಹತ್ವಪೂರ್ಣ ಸಂದರ್ಭವಾಗಿದೆ. ಈ ಸದನದ ಗೌರವಾನ್ವಿತ ಸಭಾಪತಿಯಾಗಿ 10 ವರ್ಷಗಳನ್ನು ಪೂರ್ಣಗೊಳಿಸಿದ ಬಳಿಕ ನಿಮಗೆ ನಾವು ವಿದಾಯ ಕೋರುತ್ತಿದ್ದೇವೆ’’ ಎಂದು ಸದನದ ನಾಯಕರಾಗಿರುವ ವಿತ್ತಸಚಿವ ಅರುಣ್ ಜೇಟ್ಲಿ ಹೇಳಿದರು.
ಅನ್ಸಾರಿಯವರ ಅಧಿಕಾರಾವಧಿಯಲ್ಲಿ ವ್ಯತ್ಯಯಗಳಿಗೆ ಮತ್ತು ಅತ್ಯುನ್ನತ ಗುಣಮಟ್ಟದ ಚರ್ಚೆಗಳಿಗೆ ಸದನವು ಸಾಕ್ಷಿಯಾಗಿತ್ತು ಎಂದರು.
ಅನ್ಸಾರಿಯವರು ಸದನದ ಕಲಾಪಗಳನ್ನು ನಿರ್ವಹಿಸಿದ್ದ ರೀತಿಯನ್ನು ಪ್ರಶಂಸಿಸಿದ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಅವರು, ಅನ್ಸಾರಿಯವರೊಂದಿಗಿನ ತನ್ನ ಸುದೀರ್ಘ ಒಡನಾಟವನ್ನು ಸ್ಮರಿಸಿಕೊಂಡರು. ವಿವಿಧ ದೇಶಗಳು ಸಭಾಪತಿಗಳಿಗೆ ಹಲವಾರು ಗೌರವ ಪದವಿಗಳನ್ನು ನೀಡಿವೆಯಾದರೂ ಅವರೆಂದೂ ಅವುಗಳನ್ನು ಬಳಸಿಕೊಂಡಿಲ್ಲ ಎಂದರು.
ಅನ್ಸಾರಿಯವರು ಯಾವುದೇ ತಾರತಮ್ಯವಿಲ್ಲದೆ ಸದನವನ್ನು ನಿರ್ವಹಿಸಿದ್ದರು ಮತ್ತು ಗಲಾಟೆ-ಗದ್ದಲಗಳ ಮಧ್ಯೆ ಯಾವುದೇ ಕಾನೂನನ್ನು ಅಂಗೀಕರಿಸಲು ಅವಕಾಶ ನೀಡಿರಲಿಲ್ಲ ಎಂದು ಹೇಳಿದ ಎಸ್‌ಪಿ ಸದಸ್ಯ ರಾಮಗೋಪಾಲ ಯಾದವ ಅವರು, ಮುಂದಿನ ಸಭಾಪತಿಗಳೂ ಈ ಸಂಪ್ರದಾಯವನ್ನು ಅನುಸರಿಸುತ್ತಾರೆ ಎಂಬ ಆಶಯ ವ್ಯಕ್ತ ಪಡಿಸಿದರು.
ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಲು ಅನ್ಸಾರಿಯವರು ಪ್ರತಿದಿನ ಯೋಗಾಭ್ಯಾಸ ಮತ್ತು ವಾಯುವಿಹಾರ ಮಾಡುತ್ತಾರೆ. ಕಳೆದ 40 ವರ್ಷಗಳಿಂದಲೂ ಅವರು ಊಟಕ್ಕೆ ಸ್ಯಾಂಡ್‌ವಿಚ್‌ಗಳನ್ನು ಬಳಸುತ್ತಿದ್ದಾರೆ ಮತ್ತು ‘ಇದು ವಿಶ್ವದಾಖಲೆ’ ಯಾಗಿದೆ ಎಂದರು. ರಾಜ್ಯಸಭೆಯ ಕೆಲಸದ ಅವಧಿಯನ್ನು ಸಂಜೆ 5ರಿಂದ 6 ಗಂಟೆಗೆ ವಿಸ್ತರಿಸಿದ್ದಕ್ಕಾಗಿ ಅವರು ಅನ್ಸಾರಿಯವರನ್ನು ಪ್ರಶಂಸಿಸಿದರು.