"ಎರಡು ಜನತಾದಳಗಳಿವೆ": ಜೆಡಿಯು ವಿಭಜನೆಯ ಸಂಕೇತ ನೀಡಿದ ಶರದ್ ಯಾದವ್
ಪಾಟ್ನಾ,ಆ.10: ಜೆಡಿಯು ನಾಯಕ ಶರದ್ ಯಾದವ್ ಅವರು ಮುಖ್ಯಮಂತ್ರಿ ಹಾಗೂ ಪಕ್ಷದ ಅಧಿನಾಯಕ ನಿತೀಶ ಕುಮಾರ್ ಅವರು ತನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಚೋದಿಸುವ, ಅವರ ವಿರುದ್ಧದ ಈವರೆಗಿನ ಅತ್ಯಂತ ತೀವ್ರ ಟೀಕೆಯೊಂದಿಗೆ ತನ್ನ ಮೂರು ದಿನಗಳ ‘ಬಿಹಾರ ಯಾತ್ರಾ’ವನ್ನು ಗುರುವಾರ ಆರಂಭಿಸಿದರು.
ಸೋನೆಪುರದಲ್ಲಿ ತನ್ನ ಯಾತ್ರೆಯ ಮೊದಲ ನಿಲುಗಡೆಯ ವೇಳೆ ಮಾತನಾಡಿದ ಅವರು, ಸರಕಾರಿ ಜನತಾದಳದ ಜನರು ಪಾಟ್ನಾದಲ್ಲಿ ಮುಖ್ಯಮಂತ್ರಿ ಮತ್ತು ಸಚಿವರಾಗಿದ್ದರೆ, ನಿಜವಾದ ಜನತಾದಳ ಜನರ ಸಾರ್ವಜನಿಕ ಮಧ್ಯೆ ಇದೆ ಎಂದು ಹೇಳಿದರು. ಲಾಲು ಪ್ರಸಾದ್ ಯಾದವ್ ಮತ್ತು ಕಾಂಗ್ರೆಸ್ ಜೊತೆ ಮಹಾಮೈತ್ರಿಯನ್ನು ಮುರಿದುಕೊಂಡು ಬಿಜೆಪಿ ಜೊತೆಗೆ ಹೊಸದಾಗಿ ಮೈತ್ರಿಯ ನಿರ್ಧಾರಕ್ಕಾಗಿ ನಿತೀಶ್‌ರನ್ನು ತೀವ್ರ ತರಾಟೆಗೆತ್ತಿಕೊಂಡರು. ಈ ಸಂದರ್ಭದಲ್ಲಿ ಜೆಡಿಯುದ ಯಾವುದೇ ನಾಯಕರು ಉಪಸ್ಥಿತರಿರಲಿಲ್ಲ, ಸ್ಥಳೀಯ ಶಾಸಕ ಆರ್‌ಜೆಡಿಯ ರಾಮಾನುಜ ಪ್ರಸಾದ್ ಈ ದಾಳಿಗೆ ಸಾಕ್ಷಿಯಾಗಿದ್ದರು.
2015ರ ವಿಧಾನಸಭಾ ಚುನಾವಣೆಯಲ್ಲಿ ಐದು ವರ್ಷಗಳ ಕಾಲ ಬಿಹಾರವನ್ನಾಳಲು ಬೆಂಬಲ ನೀಡಿದ್ದ 11 ಕೋಟಿ ಜನರ ನಂಬಿಕೆಗೆ ನಿತೀಶ್ ವಂಚನೆಯನ್ನೆಸಗುತ್ತಿದ್ದಾರೆ ಎಂದು ಶರದ್ ಆರೋಪಿಸಿದ್ದಾರೆ. ತಾನಿನ್ನೂ ಮಹಾಮೈತ್ರಿಯನ್ನು ಬೆಂಬಲಿಸುತ್ತಿದ್ದೇನೆ ಮತ್ತು ಅದರೊಂದಿಗೆ ನಿಲ್ಲುತ್ತೇನೆ, ಈ ಯಾತ್ರಾದಲ್ಲಿ ತನ್ನೊಂದಿಗೆ ಸೇರುವಂತೆ ಕೆಲವೇ ಜೆಡಿಯು ಶಾಸಕರನ್ನು ತಾನು ಕೇಳಿಕೊಂಡಿದ್ದೇನೆ ಎಂದು ಅವರು ಹೇಳಿದರು.
ಶರದ್ ಯಾತ್ರೆಯಿಂದ ಜೆಡಿಯು ಅಂತರವನ್ನು ಕಾಯ್ದುಕೊಂಡಿದೆ. ಅದು ಅವರ ವೈಯಕ್ತಿಕ ಉಪಕ್ರಮ. ಅದಕ್ಕೂ ಜೆಡಿಎಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ವಶಿಷ್ಟ ನಾರಾಯಣ್ ಸಿಂಗ್ ಹೇಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಶರದ್‌ರನ್ನು ಸ್ವಾಗತಿಸಲು ಹಲವಾರು ಬೆಂಬಲಿಗರು ಆಗಮಿಸಿದ್ದರಾದರೂ ಯಾವುದೇ ಪ್ರತಿಷ್ಠಿತ ಜೆಡಿಯು ನಾಯಕರಾಗಲೀ ಶಾಸಕರಾಗಲೀ ಇರಲಿಲ್ಲ. ವಿಜೇಂದ್ರ ಯಾದವ ಮತ್ತು ಕೆ.ಸಿ.ತ್ಯಾಗಿ ಅವರಂತಹ ಶರದ್‌ರ ಕಟ್ಟಾ ಬೆಂಬಲಿಗರೂ ಈಗ ಅವರನ್ನು ಬೆಂಬಲಿಸುವ ಮಾತುಗಳನ್ನಾಡುತ್ತಿಲ್ಲ. ಶರದ್ ನಡೆಯನ್ನು ‘ರಾಜಕೀಯ ಆತ್ಮಹತ್ಯೆ’ಎಂದು ಈ ನಾಯಕರು ಬಣ್ಣಿಸುತ್ತಿದ್ದಾರೆ.
ಶರದ್ ಯಾದವ್ ಅವರು ನಿತೀಶ್ ನಿರ್ಧಾರವನ್ನು ನಿರಂತರವಾಗಿ ಪ್ರಶ್ನಿಸುತ್ತಿದ್ದಾರೆ. ಆದರೆ ಲಾಲು ಪ್ರಸಾದ್ ಪುತ್ರ ತೇಜಸ್ವಿ ವಿರುದ್ಧ ತನಿಖೆಯ ಬಗ್ಗೆ ಒಂದೇ ಒಂದು ಹೇಳಿಕೆ ನೀಡಿಲ್ಲ ಎಂದು ಹೇಳಿದ ತ್ಯಾಗಿ, ಅವರು ಲಕ್ಷ್ಮಣರೇಖೆಯನ್ನು ದಾಟಿದರೆ ಅದು ದುರದೃಷ್ಟಕರವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ವಿರೋಧಿ ಪಕ್ಷಗಳನ್ನು ಒಂದೆಡೆ ಸೇರಿಸಲು ಲಾಲು ಪ್ರಸಾದ್ ಅವರು ಈ ತಿಂಗಳಲ್ಲಿ ಆಯೋಜಿಸಿರುವ ರ್ಯಾಲಿಯಲ್ಲಿ ಭಾಗವಹಿಸುವ ಇಂಗಿತವನ್ನು ಶರದ್ ನೀಡಿದ್ದಾರೆ. ಇಂತಹ ಕ್ರಮವು ಶರದ್ ವಿರುದ್ಧ ಕ್ರಮಕ್ಕೆ ಅವಕಾಶ ನೀಡುತ್ತದೆ ಎಂದು ಜೆಡಿಯು ಸ್ಪಷ್ಟ ಪಡಿಸಿದೆ. ಆದರೆ ಅವರು ಬಯಸಿರುವಂತೆ ಅವರನ್ನು ಅದು ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆಯಿಲ್ಲ. ಬಹುಶಃ ನಿತೀಶ್ ಅವರು ಶರದ್‌ರನ್ನು ಪಕ್ಷದಿಂದ ಅಮಾನತುಗೊಳಿಸಬಹುದು ಎಂಂದು ಮೂಲಗಳು ತಿಳಿಸಿವೆ.
ಶರದ್ ಜೆಡಿಯುಗೆ ರಾಜೀನಾಮೆ ನೀಡಿದರೆ ತನ್ನ ರಾಜ್ಯಸಭಾ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ, ಆದರೆ ಉಚ್ಚಾಟಿಸಲ್ಪಟ್ಟರೆ ಸದಸ್ಯತ್ವಕ್ಕೆ ಬಾಧೆಯಿಲ್ಲ. ಹೀಗಾಗಿ ಜೆಡಿಯುದಿಂದ ಉಚ್ಚಾಟನೆಯನ್ನು ಅವರು ಬಯಸುತ್ತಿದ್ದಾರೆ. ಆದರೆ ಜೆಡಿಯು ಅವರಿಗಾಗಿ ಬಲೆಯನ್ನು ಸಿದ್ಧಗೊಳಿಸುತ್ತದೆ. ಅವರನ್ನು ಪಕ್ಷದಿಂದ ಅಮಾನತುಗೊಳಿಸಿದರೆ ಅವರು ಸಂಸತ್‌ನಲ್ಲಿ ಬಿಜೆಪಿ ನೇತೃತ್ವದ ಸರಕಾರವನ್ನು ಬೆಂಬಲಿಸಲು ಪಕ್ಷದ ವಿಧ್ಯುಕ್ತ ಆದೇಶಗಳನ್ನು ಅಥವಾ ಸಚೇತಕಾಜ್ಞೆಗಳನ್ನು ಅನುಸರಿಸದಿದ್ದರೆ ಸದಸ್ಯತ್ವದಿಂದ ಅನರ್ಹ ಗೊಳ್ಳುತ್ತಾರೆ.
ತನ್ಮಧ್ಯೆ ಮೇಲ್ಮನೆಯಲ್ಲಿ ಪಕ್ಷದ ನಾಯಕನಾಗಿ ಪಡೆಯುತ್ತಿರುವ ಹಕ್ಕುಗಳಿಗೆ ಅವರು ಎರವಾಗುತ್ತಾರೆ.