ಗಡಿ ವ್ಯಾಪಾರ: ಪಿಒಕೆಯ 34 ಕಂಪನಿಗಳಿಗೆ ನಿಷೇಧ
Update: 2017-08-11 18:24 IST
ಶ್ರೀನಗರ,ಆ.11: ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿಯ ಒಟ್ಟು 34 ಕಂಪನಿಗಳು ಶ್ರೀನಗರ-ಮುಝಫರಾಬಾದ್ ಮಾರ್ಗದಲ್ಲಿ ಯಾವುದೇ ವ್ಯಾಪಾರ ನಡೆಸುವುದನ್ನು ನಿಷೇಧಿಸಲಾಗಿದೆ.
ನಿಯಂತ್ರಣ ರೇಖೆ(ಎಲ್‌ಒಸಿ)ಯಾಚೆಯ ವ್ಯಾಪಾರದ ಕಸ್ಟೋಡಿಯನ್ ಸಾಗರ್ ಡಿ.ದೊಯ್ಫೋಡೆ ಅವರು ಕಪ್ಪುಪಟ್ಟಿಯಲ್ಲಿ ಸೇರಿಸಲಾಗಿರುವ 34 ಕಂಪನಿಗಳೊಂದಿಗೆ ಯಾವುದೇ ರಫ್ತು ಅಥವಾ ಆಮದು ವ್ಯವಹಾರ ನಡೆಸದಂತೆ ಜಮ್ಮು-ಕಾಶ್ಮೀರದ ಎಲ್ಲ ವ್ಯಾಪಾರಿಗಳಿಗೆ ನಿರ್ದೇಶದೊಂದಿಗೆ ಸುತ್ತೋಲೆ ಹೊರಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಗಡಿ ವ್ಯಾಪಾರದಲ್ಲಿ ಯಾವುದೇ ಅಕ್ರಮ ಚಟುವಟಿಕೆಯನ್ನು ತಡೆಗಟ್ಟಲು ಜಮ್ಮು-ಕಾಶ್ಮೀರ ಮತ್ತು ಪಿಒಕೆ ಅಧಿಕಾರಿಗಳ ಜಂಟಿ ಪ್ರಯತ್ನಗಳ ಹಿನ್ನೆಲೆಯಲ್ಲಿ ಈ ನಿಷೇಧದ ಆದೇಶ ಹೊರಬಿದ್ದಿದೆ.
ಜು.21ರಂದು ಪಿಒಕೆಯಿಂದ ಬರುತ್ತಿದ್ದ ಲಾರಿಯನ್ನು ಸಲಾಮಾಬಾದ್‌ನಲ್ಲಿ ತಪಾಸಣೆಗೊಳಪಡಿಸಿದ ವೇಳೆ 65.5 ಕೆ.ಜಿ ಹೆರಾಯಿನ್ ಮತ್ತು ಬ್ರೌನ್ ಶುಗರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು.