ವೈದ್ಯಕೀಯ ಪ್ರಯೋಗಗಳಿಗೆ ಬಲಿಪಶುಗಳಾಗಿದ್ದ ಸಯಾಮಿ ಅವಳಿಗಳ ಕರುಣಾಜನಕ ಕಥೆ

Update: 2017-08-12 09:32 GMT

ವಿಶ್ವದಲ್ಲಿಯ ಕೆಲವು ಅತ್ಯಂತ ವಿಲಕ್ಷಣ ಸಂಗತಿಗಳ ಕುರಿತು ಕಥೆಗಳನ್ನು ನಾವು ಓದುತ್ತಲೇ ಇರುತ್ತವೆ. ಇಲ್ಲಿದೆ ಅಂತಹುದೇ ಒಂದು ವಿಶೇಷ ವರದಿ. ಇದು ಖಂಡಿತವಾಗಿಯೂ ಒಂದೇ ಏಟಿಗೆ ನಿಮ್ಮ ಭಾವನೆಗಳನ್ನು ಬಡಿದೆಬ್ಬಿಸುತ್ತದೆ.

 ಇದು ವಿಶ್ವದಲ್ಲಿಯೇ ಅತ್ಯಂತ ಸುದೀರ್ಘ ಅವಧಿಗೆ ಬದುಕುಳಿದಿದ್ದರೆನ್ನಲಾದ ಸಯಾಮಿ ಸೋದರಿಯರ ಕುರಿತ ಮಾಹಿತಿ. ಮಕ್ಕಳಾಗಿದ್ದಾಗ ಈ ಸಯಾಮಿ ಸೋದರಿಯರು ಪಟ್ಟಿದ್ದ ಸಂಕಷ್ಟಗಳು ಮತ್ತು ಅವರು ಒಳಗಾಗಿದ್ದ ಕಠೋರ ವೈದ್ಯಕೀಯ ಪ್ರಯೋಗಗಳು ಈ ಜಗತ್ತಿನಲ್ಲಿ ಎಷ್ಟೊಂದು ಕ್ರೌರ್ಯ ತುಂಬಿದೆ ಎನ್ನುವುದನ್ನು ನಮಗೆ ಅರ್ಥ ಮಾಡಿಸುತ್ತವೆ.

1950,ಜನವರಿ 3ರಂದು ರಷ್ಯಾದ ಮಾಸ್ಕೋದಲ್ಲಿ ಜನಿಸಿದ್ದ ಮಾಷಾ ಮತ್ತು ದಾಷಾ ಕೃವೊಷ್ಲಿಯೊಪೊವಾ ಸೋದರಿಯರು ಜನಿಸುವಾಗಲೇ ಅವರ ಸೊಂಟಗಳು ಪರಸ್ಪರ ಅಂಟಿಕೊಂಡಿದ್ದವು. 53 ವರ್ಷಗಳ ಕಾಲ ಜೀವಿಸಿದ್ದ ಈ ಸೋದರಿಯರ ಬದುಕು ಸಂಪೂರ್ಣ ಯಾತನಾಮಯವಾಗಿತ್ತು. ತನ್ನ ಹೊಟ್ಟೆಯಲ್ಲಿ ಅವಳಿ ಮಕ್ಕಳು ಬೆಳೆಯುತ್ತಿವೆ ಎನ್ನುವುದು ತಾಯಿಗೆ ಗೊತ್ತಿರಲಿಲ್ಲ. ಭರ್ತಿ ಎರಡು ದಿನಗಳ ನೋವಿನ ಬಳಿಕ ಸಹಜವಾಗಿಯೇ ಈ ಸೋದರಿಯರು ಭೂಮಿಗಿಳಿದಿದ್ದರು. ವೈದ್ಯರು ಮಕ್ಕಳು ಹುಟ್ಟುವಾಗಲೇ ಸತ್ತಿದ್ದವು ಎಂದು ತಾಯಿಗೆ ತಿಳಿಸಿದ್ದರು

. ಈ ಮಕ್ಕಳು ಒಂದೇ ರಕ್ತಪರಿಚಲನೆ ವ್ಯವಸ್ಥೆಯನ್ನು ಹಂಚಿಕೊಂಡಿದ್ದವಾದರೂ ಪ್ರತ್ಯೇಕ ನರವ್ಯೂಹಗಳನ್ನು ಹೊಂದಿದ್ದಾರೆ ಎನ್ನುವುದು ವೈದ್ಯರಿಗೆ ಮೇಲ್ನೋಟಕ್ಕೆ ಕಂಡು ಬಂದಿತ್ತು. ಹೀಗಾಗಿ ಇವು ತಮ್ಮ ಸಂಶೋಧನೆಗೆ ಸರಿಯಾದ ‘ಗಿನಿ ಪಿಗ್’ಗಳು ಎಂದು ಭಾವಿಸಿದ್ದ ವೈದ್ಯಕೀಯ ಅಧಿಕಾರಿಗಳು ವಿವಿಧ ಕ್ರೂರ ‘ವೈದ್ಯಕೀಯ ಪ್ರಯೋಗ’ಗಳಿಗೆ ಅವರನ್ನು ಒಳಪಡಿಸಿದ್ದರು.

ಈ ಮಕ್ಕಳ ಶರೀರಗಳನ್ನು ಸುಡಲಾಗಿತ್ತು, ಶೀತಲೀಕರಿಸಲಾಗಿತ್ತು, ಹಸಿವೆಯಿಂದ ನರಳುವಂತೆ ಮಾಡಲಾಗಿತ್ತು, ವಿದ್ಯುತ್ ಆಘಾತ ನೀಡಲಾಗಿತ್ತು. ಅವರಿಗೆ ವಿಕಿರಣಶೀಲ ವಸ್ತುವಿನ ಮತ್ತು ಇತರ ವಿಷಪೂರಿತ ರಾಸಾಯನಿಕಗಳ ಚುಚ್ಚುಮದ್ದು ನೀಡಿ ಅವರನ್ನು ಬಲವಂತದಿಂದ ಎಚ್ಚರವಾಗಿರಿಸಲಾಗಿತ್ತು. ಇವೆಲ್ಲ ವಿಜ್ಞಾನದ ಹೆಸರಿನಲ್ಲಿ ಆ ಕಂದಮ್ಮಗಳ ಮೇಲೆ ನಡೆಸಲಾಗಿದ್ದ ಕ್ರೂರ ಪ್ರಯೋಗಗಳು!.

ಅತ್ಯಂತ ಅಮಾನವೀಯ ಪ್ರಯೋಗಗಳನ್ನು ಈ ಮಕ್ಕಳ ಮೇಲೆ ನಡೆಸಲಾಗಿತ್ತು. ಒಂದು ಪ್ರಯೋಗದಲ್ಲಿ ಇನ್ನೊಬ್ಬಳ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳಲು ಓರ್ವಳ ಶರೀರದೊಳಗೆ ಸೂಜಿಗಳನ್ನು ತೂರಿಸಲಾಗಿದ್ದರೆ, ಇನ್ನೊಂದು ಪ್ರಯೋಗದಲ್ಲಿ ಇನ್ನೊಬ್ಬಳ ದೇಹದ ಉಷ್ಣತೆಯನ್ನು ಪರೀಕ್ಷಿಸಲು ಒಬ್ಬಳನ್ನು ಮಂಜುಗಟ್ಟಿದ್ದ ನೀರಿನಲ್ಲಿ ಮುಳುಗಿಸಲಾಗಿತ್ತು! ಈ ಕ್ರೂರ ಪ್ರಯೋಗಗಳು ಎಳೆ ಬಾಲಕಿಯರ ಬದುಕಿನ ಮೇಲೆ ಘೋರ ಪರಿಣಾಮಗಳನ್ನು ಬೀರಿದ್ದವು. ಮಾಷಾಳ ಸ್ವಭಾವ ಕ್ರೂರವಾಗಿದ್ದು, ದರ್ಪದಿಂದ ಕೂಡಿದ್ದ ‘ಸೈಕೋಪಾಥ್’ ಆಗಿ ಬದಲಾಗಿದ್ದಳು. ಸಾಧು ಮನಸ್ಸಿನ, ಸಹಜ ಜೀವನವನ್ನು ನಡೆಸಲು ಹಾತೊರೆಯುತ್ತಿದ್ದ, ತನ್ನನ್ನು ಅಪಾರವಾಗಿ ಪ್ರೀತಿಸುತ್ತಿದ್ದ ದಾಷಾಳನ್ನು ನಿಂದಿಸುತ್ತ ಅವಳ ಭಾವನೆಗಳಿಗೆ ನೋವನ್ನುಂಟು ಮಾಡುತ್ತಿದ್ದಳು.

ಎರಡು ತಲೆಗಳ ಬಾಲಕಿ ಆಸ್ಪತ್ರೆಯಲ್ಲಿ ಪ್ರಯೋಗಗಳಿಗೆ ಬಳಕೆಯಾಗುತ್ತಿದ್ದಾಳೆ ಎಂಬ ಸುದ್ದಿ 1964ರಲ್ಲಿ ಸೋರಿಕೆಯಾಗಿತ್ತು. ಎಚ್ಚೆತ್ತುಕೊಂಡ ಸರಕಾರವು ಅವರನ್ನು ಅಲ್ಲಿಂದ ಬಿಡುಗಡೆಗೊಳಿಸಿ ದಕ್ಷಿಣ ರಷ್ಯಾದಲ್ಲಿರುವ ಬೋರ್ಡಿಂಗ್ ಶಾಲೆಗೆ ಸೇರಿಸಿತ್ತು.

ದಾಷಾ ಪ್ರೇಮಕ್ಕೆ, ತಮ್ಮ ತಾಯಿಯೊಂದಿಗೆ ಸಂಬಂಧ....ಅಷ್ಟೇ ಏಕೆ, ಉದ್ಯೋಗ ಕ್ಕಾಗಿಯೂ ಹಂಬಲಿಸುತ್ತಿದ್ದಳು. ಆದರೆ ಅವಳು ಬಯಸಿದ್ದ ಪ್ರತಿಯೊಂದನ್ನೂ ಕ್ರೂರ ಸೋದರಿ ನಿರಾಕರಿಸುತ್ತಿದ್ದಳು.

ಸಹಜ ಜೀವನವನ್ನು ನಡೆಸಲು ಹಂಬಲಿಸುತ್ತಿದ್ದ ದಾಷಾ ಓರ್ವ ಹುಡುಗನನ್ನು ತುಂಬ ಪ್ರೇಮಿಸುತ್ತಿದ್ದಳು. ಆದರೆ ಮಾಷಾ ಈ ಜೋಡಿಯ ಸಂತೋಷಕ್ಕೆ ಅವಕಾಶವನ್ನೇ ನೀಡಿರಲಿಲ್ಲ. ದಾಷಾಳ ಪರವಾಗಿ ಮಾಷಾಳ ಮನಸ್ಸನ್ನು ಪರಿವರ್ತಿಸಲು ಆ ಹುಡುಗನೂ ತುಂಬ ಪ್ರಯತ್ನಿಸಿದ್ದ. ಆದರೆ ಮಾಷಾ ಹಟಮಾರಿಯಾಗಿದ್ದಳು ಮತ್ತು ತಮ್ಮಿಬ್ಬರನ್ನೂ ಬೇರ್ಪಡಿಸುವ ಶಸ್ತ್ರಚಿಕಿತ್ಸೆಗೆ ಅನುಮತಿಯನ್ನು ನಿರಾಕರಿಸಿದ್ದಳು.

ದಾಷಾ ಉದ್ಯೋಗವೊಂದನ್ನು ಹುಡುಕಿಕೊಂಡಿದ್ದು, ಅಲ್ಲಿ ಪಿಪೆಟ್‌ಗಳಲ್ಲಿ ಸಣ್ಣ ರಬ್ಬರ್ ಚೆಂಡುಗಳನ್ನು ತುಂಬುವ ಕೆಲಸವನ್ನು ಆಕೆಗೆ ನೀಡಲಾಗಿತ್ತು. ಆಕೆ ಆ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದರೆ ಮಾಷಾ ತನ್ನ ಬದುಕನ್ನು ಪರಿವರ್ತಿಸಿಕೊಳ್ಳುವ ಯಾವುದೇ ಆಸಕ್ತಿಯನ್ನು ಹೊಂದಿರಲಿಲ್ಲ. ಆಕೆ ಧೂಮಪಾನ ಮಾಡುತ್ತ, ಮ್ಯಾಗಝಿನ್‌ಗಳನ್ನು ಓದುತ್ತ ಕಾಲ ಕಳೆಯುತ್ತಿದ್ದಳು.

2003,ಎಪ್ರಿಲ್ 17ರಂದು ಮಾಷಾ ಹೃದಯಾಘಾತದಿಂದ ನಿಧನಳಾಗಿದ್ದಳು. ದಯಾಳುವಾಗಿದ್ದ ದಾಷಾ ತನ್ನ ಸೋದರಿಯನ್ನು ತನ್ನಿಂದ ದೂರ ಮಾಡದಿರಲು ನಿರ್ಧರಿಸಿದ್ದಳು ಮತ್ತು ಮಾಷಾಳ ನಿಧನದ ಬಳಿಕ ತನ್ನ ಸಾವಿಗಾಗಿ 17 ಗಂಟೆಗಳ ಕಾಲ ಕಾದಿದ್ದಳು. ಮಾಷಾಳ ಕೊಳೆಯುತ್ತಿದ್ದ ಶರೀರದಲ್ಲಿಯ ವಿಷಪೂರಿತ ಸಂಯುಕ್ತಗಳಿಂದಾಗಿ ದಾಷಾಳ ರಕ್ತವೂ ನಂಜಾಗಿ ಆಕೆ ಸತ್ತಿದ್ದಳು.

ಕ್ರೂರ ಸ್ವಭಾವದ ಮಾಷಾ ದಾಷಾಳಿಗೆ ಎಷ್ಟೇ ಕಿರುಕುಳ ಕೊಟ್ಟಿದ್ದರೂ ಅವರು ಪರಸ್ಪರ ಆಳವಾಗಿ ಪ್ರೀತಿಸುತ್ತಿದ್ದರು. ಮಾಷಾಳ ಸಾವಿನ ಬಳಿಕ ತಮ್ಮಿಬ್ಬರನ್ನೂ ಬೇರ್ಪಡಿಸುವ ಶಸ್ತ್ರಚಿಕಿತ್ಸೆಗೆ ದಾಷಾ ಒಪ್ಪಿಕೊಳ್ಳದಿದ್ದುದು ತನ್ನ ಸಯಾಮಿ ಅವಳಿ ಸೋದರಿಯ ಬಗ್ಗೆ ಆಕೆ ಹೊಂದಿದ್ದ ನಿಷ್ಠೆ ಮತ್ತು ಪ್ರೀತಿಗೆ ದ್ಯೋತಕವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News