ರಾಜ್ಯಸಭೆಯ ಜೆಡಿಯು ನಾಯಕ ಹುದ್ದೆಯಿಂದ ಶರದ್ ಯಾದವ್ ವಜಾ

Update: 2017-08-12 12:29 GMT

ಹೊಸದಿಲ್ಲಿ,ಆ.12: ಜೆಡಿಯು ಪಕ್ಷವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪದಲ್ಲಿ ಶರದ್ ಯಾದವ್ ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ನಾಯಕನ ಹುದ್ದೆಯಿಂದ ಶನಿವಾರ ವಜಾಗೊಳಿಸಿದೆ.

ಯಾದವ ಅವರ ಇತ್ತೀಚಿನ ಚಟುವಟಿಕೆಗಳಿಂದಾಗಿ ಈ ಕ್ರಮ ಕೈಗೊಳ್ಳುವುದು ಅಗತ್ಯವಾಗಿತ್ತು. ನಾಯಕನಾಗಿರುವ ವ್ಯಕ್ತಿ ಪಕ್ಷವಿರೋಧಿ ಚಟುವಟಿಕೆಗಳಲ್ಲಿ ತೊಡಗಿದರೆ ಅದನ್ನು ಒಮ್ಮತದಿಂದ ಖಂಡಿಸಬೇಕಾಗುತ್ತದೆ ಎಂದು ಬಿಹಾರ ಜೆಡಿಯು ಅಧ್ಯಕ್ಷ ವಶಿಷ್ಟ ನಾರಾಯಣ್ ಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಬಿಹಾರ ಸಂಸದ ಆರ್‌ಸಿಪಿ ಸಿಂಗ್ ಅವರು ರಾಜ್ಯಸಭೆಯಲ್ಲಿ ಪಕ್ಷದ ನೂತನ ನಾಯಕ ನಾಗಲಿದ್ದಾರೆ ಎಂದು ಅವರು ದೃಢಪಡಿಸಿದರು.

 ಯಾದವ್ ಅವರ ಎತ್ತಂಗಡಿಯು ಮಹಾ ಮೈತ್ರಿಕೂಟದಿಂದ ಹೊರಬಂದು ಬಿಜೆಪಿ ಯೊಂದಿಗೆ ಸರಕಾರವನ್ನು ರಚಿಸುವ ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ್ ಅವರ ನಿರ್ಧಾರವನ್ನು ವಿರೋಧಿಸಿರುವ ಜೆಡಿಯು ಸದಸ್ಯರ ವಿರುದ್ಧ ಇತ್ತೀಚಿನ ಕ್ರಮವಾಗಿದೆ. ಹಿಂದಿನ ಮೈತ್ರಿಕೂಟದ ಪಾಲುದಾರ ಕಾಂಗ್ರೆಸ್ ಕರೆದಿದ್ದ ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಸಂಸದ ಅಲಿ ಅನ್ವರ್ ಅವರನ್ನು ಕುಮಾರ್ ಶುಕ್ರವಾರ ಸಂಸದೀಯ ಪಕ್ಷದ ಗುಂಪಿನಿಂದ ಅಮಾನತುಗೊಳಿಸಿದ್ದರು.

ಮಹಾ ಮೈತ್ರಿಕೂಟದಿಂದ ಹೊರಬಂದ ಬಳಿಕ ಕುಮಾರ್ ಅವರು ಶುಕ್ರವಾರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News