ಗೆಲುವಿನ ಅಲೆಯಲ್ಲಿ ಆಪರೇಷನ್ ಅಲಮೇಲಮ್ಮ

Update: 2017-08-12 12:45 GMT

ಸದಭಿರುಚಿಯ, ಪ್ರಯೋಗಾತ್ಮಕ ಚಿತ್ರಗಳಿಗೆ ಸ್ಯಾಂಡಲ್‌ವುಡ್‌ನಲ್ಲಿ ಪ್ರೋತ್ಸಾಹವಿಲ್ಲವೆಂಬ ಆರೋಪಗಳನ್ನು ಕನ್ನಡ ಚಿತ್ರಪ್ರೇಕ್ಷಕರು ಇತ್ತೀಚಿನ ದಿನಗಳಲ್ಲಿ ಸುಳ್ಳಾಗಿಸುತ್ತಿದ್ದಾರೆ. ‘ತಿಥಿ’, ‘ರಂಗಿತರಂಗ’, ‘ಗೋಧಿಬಣ್ಣ ಸಾಧಾರಣ ಮೈಕಟ್ಟು’, ಇತ್ತೀಚೆಗೆ ತೆರೆಕಂಡ ‘ಒಂದು ಮೊಟ್ಟೆಯ ಕಥೆ’ ಹೀಗೆ ಹೊಸಬರ ಹೊಸ ಚಿಂತನೆಯ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಗೆಲುವು ಕಂಡಿವೆ. ಆ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿವೆ. ಇದೀಗ ಇಂತಹ ಚಿತ್ರಗಳ ಸಾಲಿಗೆ ‘ಆಪರೇಷನ್ ಅಲುಮೇಲಮ್ಮ’ ಹೊಸ ಸೇರ್ಪಡೆ. ನಿರ್ದೇಶಕ ಸುನಿ ಅವರ ‘ಆಪರೇಶನ್ ಅಲುಮೇಲಮ್ಮ’ಗೆ ಕನ್ನಡ ಚಿತ್ರಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕಳೆದ ಜುಲೈ 21ರಂದು ಬಿಡುಗಡೆಯಾದ ‘ಅಲಮೇಲಮ್ಮ’ ಈಗಲೂ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸುಮಾರು 1.5 ಕೋಟಿ ರೂ. ಬಜೆಟ್‌ನಲ್ಲಿ ತಯಾ ರಾದ, ಈ ಚಿತ್ರವು ಎರಡೇ ವಾರದಲ್ಲಿ 2.5 ಕೋಟಿ ರೂ. ಗಳಿಸುವ ಮೂಲಕ ಬಾಕ್ಸ್‌ಆಫೀಸ್‌ನಲ್ಲಿ ಗೆಲುವಿನ ನಗೆ ಬೀರಿದೆ. ಬೆಂಗಳೂರು, ಮೈಸೂರು ಮತ್ತಿತರೆಡೆ ಮಲ್ಟಿಪ್ಲೆಕ್ಸ್ ಗಳಲ್ಲಿ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ. ಸದ್ದಿಲ್ಲದೆ ಬಿಡುಗಡೆಗೊಂಡಿದ್ದ ‘ಅಲಮೇಲಮ್ಮ’, ಪ್ರೇಕ್ಷಕರ ಬಾಯ್ಮಿತಿನ ಪ್ರಚಾರವು ಚಿತ್ರಕ್ಕೆ ವರದಾನವಾಗಿದೆಯೆಂದು ನಿರ್ದೇಶಕರ ಅಂಬೋಣ. ಈಗಾಗಲೇ ಈ ಚಿತ್ರದ ರಿಮೇಕ್ ಹಾಗೂ ಸೆಟಲೈಟ್ ಪ್ರಸಾರದ ಹಕ್ಕುಗಳಿಗಾಗಿಯೂ ಭಾರೀ ಬೇಡಿಕೆ ಬಂದಿದೆಯಂತೆ. ಕ್ಲಾಸ್ ಪ್ರೇಕ್ಷಕರ ಜೊತೆಗೆ ಮಾಸ್ ಪ್ರೇಕ್ಷಕರಿಗೂ ಇಷ್ಟವಾಗುತ್ತಿರುವ ‘ಅಲಮೇಲಮ್ಮ’ ಮಲ್ಟಿಪ್ಲೆಕ್ಸ್ ಗಳಲ್ಲಿ ಅಲ್ಲದೆ ಸಾಮಾನ್ಯ ಥಿಯೇಟರ್‌ಗಳಲ್ಲೂ ಚೆನ್ನಾಗಿ ಓಡುತ್ತಿದೆ. ಮನೀಶ್ ರಿಶಿ ಹಾಗೂ ಶ್ರದ್ಧಾ ಶ್ರೀನಾಥ್ ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಮಧ್ಯೆ ವಿದೇಶದಲ್ಲೂ ‘ಅಲಮೇಲಮ್ಮ’ಳ ಬಿಡುಗಡೆಗೆ ನಿರ್ಮಾ ಪಕರು ತಯಾರಿ ನಡೆಸುತ್ತಿದ್ದಾರೆ. ಅಮೆರಿ, ದುಬೈ ಹಾಗೂ ಮತ್ತಿತರ ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News