ಅದು ಆಸ್ಪತ್ರೆಯಲ್ಲ, ಕಸಾಯಿಖಾನೆ: 4 ದಿನಗಳ ಮಗುವನ್ನು ಕಳೆದುಕೊಂಡ ತಂದೆಯ ಆಕ್ರೋಶ

Update: 2017-08-12 13:00 GMT

ಗೋರಖ್ ಪುರ, ಆ,12: ಗುರುವಾರ ಬೆಳಗ್ಗೆ ತನ್ನ 4 ದಿನಗಳ ಮಗು ಅನಾರೋಗ್ಯಕ್ಕೀಡಾದ ಕಾರಣ ಸಾಯಿ ಕಿಶನ್ ಗುಪ್ತಾ ಮಗುವನ್ನು ಗೋರಖ್ ಪುರದ ಅತೀ ದೊಡ್ಡ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈದ್ಯರು ತಕ್ಷಣ ಮಗುವನ್ನು ಐಸಿಯುಗೆ ದಾಖಲಿಸಿದರು ಆದರೆ ಮಗುವಿಗೆ ಬೇಕಾದ ವೆಂಟಿಲೇಟರ್ ವ್ಯವಸ್ಥೆ ಇಲ್ಲ ಎಂದು ಹೇಳಲಾಯಿತು. ಆಕ್ಸಿಜನ್ ವ್ಯವಸ್ಥೆ ಸ್ಥಗಿತವಾಗಿದ್ದರಿಂದ ಮಗು ಸಾವನ್ನಪ್ಪಿತು.

ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜಿನಲ್ಲಿ ಗುರುವಾರದಿಂದ ಶುಕ್ರವಾರದ ನಡುವೆ ಮೃತಪಟ್ಟ ಮಕ್ಕಳಲ್ಲಿ ಕಿಶನ್ ಗುಪ್ತಾರ ಮಗುವೂ ಒಂದಾಗಿತ್ತು.

ಈ ಬಗ್ಗೆ ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಸಾಯಿ ಕಿಶನ್, “ಅದು ಮೆಡಿಕಲ್ ಕಾಲೇಜು ಅಲ್ಲ. ಬದಲಾಗಿ, ಕಸಾಯಿಖಾನೆಯಂತಿದೆ. ಆಸ್ಪತ್ರೆಯ ಸಿಬ್ಬಂದಿ ಮಕ್ಕಳನ್ನು ಕಾಪಾಡಲು ಯಾವುದೇ ಪ್ರಯತ್ನ ಮಾಡಲಿಲ್ಲ. ಇನ್ನೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದನ್ನು ನಾನು ನೋಡಿದೆ” ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಆಕ್ಸಿಜನ್ ವ್ಯವಸ್ಥೆ ಸ್ಥಗಿತಗೊಂಡ ಕಾರಣ ಮೃತಪಟ್ಟ ಮಕ್ಕಳ ಸಂಖ್ಯೆ 63ಕ್ಕೇರಿದೆ. ಈ ಘಟನೆಯ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ನೋಬೆಲ್ ಶಾಂತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಈ ಘಟನೆಯನ್ನು, “ಇದು ದುರಂತವಲ್ಲ, ಹತ್ಯಾಕಾಂಡ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News