ಮಲಯಾಳಂಗೆ ಎಂಟ್ರಿ ಕೊಟ್ಟ ಪ್ರಿಯಾಂಕಾ

Update: 2017-08-12 13:01 GMT

ಬಾಲಿವುಡ್‌ನಿಂದ ಹಾಲಿವುಡ್‌ಗೆ ಹಾರಿರುವ ಪ್ರಿಯಾಂಕಾ ಅಲ್ಲಿಯೂ ಬ್ಯುಸಿ ನಟಿಯೆನಿಸಿದ್ದಾರೆ. ಈ ನಡುವೆ ಅವರು ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಆದರೆ ಮಲಯಾಳಂನಲ್ಲಿ ಆಕೆ ನಟಿಸುವುದಿಲ್ಲ. ಬದಲಿಗೆ ನಿರ್ಮಾಪಕಿಯಾಗಲಿದ್ದಾರೆ.

ಮರಾಠಿ ಚಿತ್ರ ‘ವೆಂಟಿಲೇಟರ್’ ಮೂಲಕ ನಿರ್ಮಾ ಪಕಿಯ ಪಟ್ಟವನ್ನು ಅಲಂಕರಿಸಿರುವ ಪ್ರಿಯಾಂಕಾ ಚೋಪ್ರಾ ಈಗ ಆ ಚಿತ್ರವನ್ನು ಮಲಯಾಳಂನಲ್ಲೂ ರಿಮೇಕ್ ಮಾಡಲಿದ್ದಾರೆ. ಮರಾಠಿ ಚಿತ್ರ ವೆಂಟಿಲೇಟರ್ ಬಾಕ್ಸ್‌ಆಫೀಸ್‌ನಲ್ಲಿ ಚೆನ್ನಾಗಿಯೇ ಓಡಿತ್ತು. ಹಬ್ಬದ ಸಂದರ್ಭದಲ್ಲಿ ಕುಟುಂಬದ ಹಿರಿಯನೊಬ್ಬ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದಾಗ ಆತನ ಕುಟುಂಬದ ಸದಸ್ಯರಲ್ಲಿ ಎದುರಾಗುವ ಭಾವನೆಗಳ ಸಂಘರ್ಷಗಳನ್ನು ಅದ್ಭುತವಾಗಿ ತೆರೆಯಲ್ಲಿ ಅನಾವರಣಗೊಳಿಸಿದ್ದ ವೆಂಟಿಲೇಟರ್ ವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಿತ್ತು.

ವೆಂಟಿಲೇಟರ್‌ನ ಮಲಯಾಳಂ ರಿಮೇಕ್ ಪ್ರಿಯಾಂಕಾ ಅವರ ತಾಯಿ ಮಧುಚೋಪ್ರಾ ಅವರ ಪರ್ಪಲ್ ಪೆಬಲ್ಸ್ ಬ್ಯಾನರ್‌ನಡಿಯಲ್ಲಿ ನಿರ್ಮಾಣಗೊಳ್ಳಲಿದೆ. ಮರಾಠಿ ವೆಂಟಿಲೇಟರ್‌ನ್ನು ರಾಜೇಶ್ ಮಾಪುಸ್‌ಕರ್ ಹಾಗೂ ಅಶುತೋಷ್ ಗೋವಾರಿಕರ್ ನಿರ್ದೇಶಿಸಿದ್ದರು.

ಮಲಯಾಳಂ ಚಿತ್ರರಂಗ ಅಗಾಧ ಪ್ರತಿಭೆಗಳ ಆಗರವಾಗಿದೆ. ಈ ಕಾರಣದಿಂದಲೇ ವೆಂಟಿಲೇಟರ್ ಚಿತ್ರವನ್ನು ಮಲಯಾಳಂನಲ್ಲಿ ರಿಮೇಕ್ ಮಾಡಲು ತಾನು ಹಾಗೂ ಪ್ರಿಯಾಂಕಾ ನಿರ್ಧರಿಸಿದ್ದಾಗಿ ಮಧುಚೋಪ್ರಾ ಹೇಳುತ್ತಾರೆ. ಚಿತ್ರಕ್ಕೆ ಸಂಬಂಧಿಸಿದ ಎಲ್ಲಾ ಸಿದ್ಧತೆ ಪೂರ್ಣಗೊಂಡಲ್ಲಿ ಈ ವರ್ಷವೇ ಮಲಯಾಳಂ ವೆಂಟಿಲೇಟರ್‌ನ ಶೂಟಿಂಗ್ ಆರಂಭಗೊಳ್ಳಲಿದೆಯೆಂದು ಮಧು ಹೇಳುತ್ತಾರೆ. ಮಲಯಾಳಂನ ಜನಪ್ರಿಯ ನಿರ್ದೇಶಕರು ಚಿತ್ರವನ್ನು ನಿರ್ದೇಶಿಸಲಿದ್ದು, ಪಾತ್ರವರ್ಗದ ಆಯ್ಕೆ ಶೀಘ್ರವೇ ನಡೆಯಲಿದೆಯಂತೆ.

ಬಾಲಿವುಡ್‌ನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿರುವ ಪ್ರಿಯಾಂಕ ‘ತಮಿಳನ್’ ಎಂಬ ಕಾಲಿವುಡ್ ಚಿತ್ರದಲ್ಲೂ ನಟಿಸಿದ್ದರು. ತನ್ನ ಚೊಚ್ಚಲ ಹಾಲಿವುಡ್ ಚಿತ್ರ ಬೇವಾಚ್ ಬಳಿಕ ಆಕೆ ಎ ಕಿಡ್ ಲೈಕ್ ಜಾಕ್, ಇಸಂಟಿಟ್ ರೋಮ್ಯಾಂಟಿಕ್ ಚಿತ್ರಗಳಲ್ಲಿ ಪ್ರಿಯಾಂಕಾ ಅಭಿನಯಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News