ಗೋರಖ್ ಪುರ ಸ್ಥಿತಿಯ ಮೇಲೆ ಪ್ರಧಾನಿ ಮೋದಿಯವರ ನಿರಂತರ ನಿಗಾ: ಪಿಎಂಒ

Update: 2017-08-12 14:02 GMT

ಹೊಸದಿಲ್ಲಿ,ಆ.12: ಆಸ್ಪತ್ರೆಯಲ್ಲಿ ಕನಿಷ್ಠ 30 ಮಕ್ಕಳು ಸಾವನ್ನಪ್ಪಿರುವ ಉತ್ತರ ಪ್ರದೇಶದ ಗೋರಖಪುರದಲ್ಲಿಯ ಸ್ಥಿತಿಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ನಿರಂತರ ನಿಗಾಯಿರಿಸಿದ್ದಾರೆ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಿ ಅಧಿಕಾರಿಗಳ ಸಂಪರ್ಕ ದಲ್ಲಿದ್ದಾರೆ ಎಂದು ಪ್ರಧಾನಿ ಕಚೇರಿ(ಪಿಎಂಒ)ಯು ಶನಿವಾರ ತಿಳಿಸಿದೆ.

ಸಹಾಯಕ ಆರೋಗ್ಯ ಸಚಿವೆ ಅನುಪ್ರಿಯಾ ಪಟೇಲ್ ಮತ್ತು ಕೇಂದ್ರ ಆರೋಗ್ಯ ಕಾಯದರ್ಶಿ ಗೋರಖಪುರದಲ್ಲಿಯ ಸ್ಥಿತಿಯನ್ನು ಪರಿಶೀಲಿಸಲಿದ್ದಾರೆ ಎಂದು ಅದು ಹೇಳಿದೆ.

ಸರಕಾರಿ ಸ್ವಾಮ್ಯದ ಬಿಆರ್‌ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಆ.10ರಿಂದ ಕನಿಷ್ಠ 30 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಗೋರಖಪುರ ಜಿಲ್ಲಾಧಿಕಾರಿ ರಾಜೀವ ರೌತೇಲಾ ಅವರು ಶುಕ್ರವಾರ ತಿಳಿಸಿದ್ದರೆ, ಆ.7ರಿಂದ ವಿವಿಧ ಕಾಯಿಲೆಗಳಿಂದ 60 ಮಕ್ಕಳು ಸಾವನ್ನಪ್ಪಿದಾರೆ ಎಂದು ಆಸ್ಪತ್ರೆಯ ಮಕ್ಕಳ ವಿಭಾಗದ ವರದಿಯು ತಿಳಿಸಿದೆ ಎಂದು ರಾಜ್ಯದ ಆರೋಗ್ಯ ಸಚಿವ ಸಿದ್ಧಾರ್ಥನಾಥ ಸಿಂಗ್ ಹೇಳಿದ್ದರು.

ರೌತೇಲಾ ಅವರು ಮಕ್ಕಳ ಸಾವುಗಳಿಗೆ ಯಾವುದೇ ಕಾರಣಗಳನ್ನು ನೀಡಿರದಿದ್ದರೂ, 21 ಮಕ್ಕಳು ಆಮ್ಲಜನಕದ ಕೊರತೆಯಿಂದ ಮೃತಪಟ್ಟಿವೆ ಎಂದು ಗೋರಖಪುರ ಎಸ್‌ಪಿ ತಿಳಿಸಿದ್ದಾರೆ ಎಂದು ಅಧಿಕಾರಿಯೋರ್ವರು ಹೇಳಿದ್ದರು.

ಈ ‘ದುರಂತಪೂರ್ಣ ಮತ್ತು ನೋವಿನ’ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಲಾಗುವುದು ಎಂದು ರಾಜ್ಯದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ ವೌರ್ಯ ಅವರು ಶನಿವಾರ ಲಕ್ನೋದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News