ಲೀಡರ್: ಹುಸಿ ಸಂದೇಶ

Update: 2017-08-13 07:36 GMT

ಆರ್ಮಿ ಕಮಾಂಡರ್ ಶಿವರಾಜ್ ದೇಶಭಕ್ತಿಯನ್ನು ಸಾರುವ ಕಥಾನಕ ‘ಲೀಡರ್’. ದೇಶದ ಗಡಿಯಲ್ಲಿ ಉಗ್ರಗಾಮಿಗಳೊಂದಿಗಿನ ಸಂಘರ್ಷದ ಜೊತೆ ಬಾಂಗ್ಲಾ ವಲಸಿಗರ ಸಮಸ್ಯೆಯನ್ನು ಸೇರಿಸಿ ನಿರ್ದೇಶಕರು ಸಿನೆಮಾ ಮಾಡಿದ್ದಾರೆ. ಭರ್ಜರಿ ಆ್ಯಕ್ಷನ್ ಸನ್ನಿವೇಶಗಳೊಂದಿಗೆ ಸಿನೆಮಾ ಮಾಡಿದ್ದು ಮೇಕಿಂಗ್ ಚೆನ್ನಾಗಿದೆ. ತಾಂತ್ರಿಕವಾಗಿ ಉತ್ತಮವಾಗಿದ್ದರೂ ಸಿನೆಮಾದ ‘ಆತ್ಮ’ ಶುದ್ಧವಾಗಿಲ್ಲ. ದೇಶಭಕ್ತಿ ನೆಪದಲ್ಲಿ ಸಾಮಾಜಿಕ ಜವಾಬ್ದಾರಿ ಮರೆತು ಚಿತ್ರ ಕಟ್ಟಿರುವಂತಿದೆ. ಹಿನ್ನೆಲೆಯಲ್ಲಿ ಕೆಲವು ‘ಅಜೆಂಡಾ’ಗಳು ಕಾಣಿಸಿದ್ದು, ಇದೊಂದು ಹುಸಿ ದೇಶಭಕ್ತಿ ಸಿನೆಮಾ ಎನಿಸಿಕೊಳ್ಳುತ್ತದೆ.

ರಾಜ್ಯದ ರಾಜಕಾರಣದ ಕುತಂತ್ರಗಳೊಂದಿಗೆ ಚಿತ್ರ ಆರಂಭವಾಗುತ್ತದೆ. ಇಲ್ಲಿನ ರಾಜಕಾರಣಿಗಳು ಬಾಂಗ್ಲಾ ವಲಸಿಗರನ್ನು ಹೇಗೆಲ್ಲಾ ಮತಗಳನ್ನಾಗಿ ಬಳಕೆ ಮಾಡುತ್ತಾರೆ ಎನ್ನುವುದನ್ನು ತೋರಿಸುವುದು ಉದ್ದೇಶ. ಈ ಮಧ್ಯೆ ಇದಕ್ಕೆ ದೂರದ ಪಶ್ಚಿಮ ಬಂಗಾಲದ ರಾಜಕಾರಣವನ್ನೂ ಎಳೆದು ತರುತ್ತಾರೆ. ಚಿತ್ರಕಥೆಗೆ ಅಗತ್ಯವಿರದ ಈ ಸನ್ನಿವೇಶಗಳನ್ನು ಸೃಷ್ಟಿಸಿದ್ದೇಕೆಂಬುದನ್ನು ನಿರ್ದೇಶಕರೇ ಹೇಳಬೇಕು. ಮುಂದೆ ದೇಶದ ಗಡಿಯಲ್ಲಿನ ಕತೆ ಹೇಳುವ ಚಿತ್ರದಲ್ಲಿ ಮದ್ದು-ಗುಂಡಿನ ಮಳೆ ಜೋರಾಗಿಯೇ ಇದೆ. ಆದರೆ ಸದುದ್ದೇಶವಿಲ್ಲದ ಚಿತ್ರಕಥೆಯಿಂದಾಗಿ ಈ ಸನ್ನಿವೇಶಗಳು ಆಪ್ತವಾಗುವುದೇ ಇಲ್ಲ. ಸಮುದಾಯವೊಂದರ ಸರಿ-ತಪ್ಪುಗಳನ್ನು ಹೇಳುವ ರೀತಿಯಲ್ಲಿ ಪ್ರಾಮಾಣಿಕತೆ ಕಾಣಿಸುವುದಿಲ್ಲ ಎನ್ನುವುದು ವಿಷಾದ.

ನಿರ್ದೇಶಕರಿಗೆ ಚಿತ್ರದಲ್ಲಿ ತಾವೇನು ಹೇಳಹೊರಟಿದ್ದೇನೆ ಎನ್ನುವುದರ ಸ್ಪಷ್ಟ ಕಲ್ಪನೆ ಇದ್ದಂತಿಲ್ಲ. ಹಾಗಾಗಿ ಇದನ್ನು ಸರಿದೂಗಿಸಲು ಹೆಚ್ಚು ಆ್ಯಕ್ಷನ್ ಸನ್ನಿವೇಶಗಳಿಗೆ ಮೊರೆ ಹೋಗಿದ್ದಾರೆ. ನಾಯಕನ ದ್ವೇಷಕ್ಕೆ ಕಾರಣವಾಗುವಂತಹ ಸಿದ್ಧಮಾದರಿಯ ಕೆಲವು ಭಾವುಕ ಸನ್ನಿವೇಶಗಳನ್ನು ಹೆಣೆದುಕೊಂಡಿದ್ದಾರಷ್ಟೆ. ಈಗಾಗಲೇ ಹಿಂದೆ ಕೆಲವು ಸಿನೆಮಾಗಳಲ್ಲಿ ಇಂಥದ್ದನ್ನು ನೋಡಿರುವ ಪ್ರೇಕ್ಷಕರಲ್ಲಿ ಈ ಸನ್ನಿವೇಶಗಳು ಕುತೂಹಲ ಹುಟ್ಟಿಸುವುದಿಲ್ಲ. ಇದರಿಂದಾಗಿ ಸಿನೆಮಾದ ಯಾವ ಹಂತದಲ್ಲೂ ಪ್ರೇಕ್ಷಕರಿಗೆ ಅಚ್ಚರಿಯಾಗುವ ಸಂದರ್ಭಗಳು ಎದುರಾಗುವುದಿಲ್ಲ. ಎಲ್ಲರೂ ನಮ್ಮವರು ಎಂದು ಹೇಳುತ್ತಲೇ ಒಡಕು ಮೂಡಿಸುವ ಧಾಟಿಯಲ್ಲಿ ಚಿತ್ರಕಥೆ ಹೆಣೆದಿರುವುದರ ಹಿಂದಿನ ಉದ್ದೇಶ ‘ಸಿನೆಮಾ ಕಲೆ’ಗೆ ಮಾರಕ!

ಚಿತ್ರದ ಸಾಹಸ ಸಂಯೋಜಕರಿಗೆ ಹೆಚ್ಚು ಅಂಕ ಸಲ್ಲಬೇಕು. ವೀರ್ ಸಮರ್ಥ್ ಸಂಗೀತ ಸಂಯೋಜನೆಯಲ್ಲಿ ಎರಡು ಹಾಡುಗಳು ಗುನುಗುವಂತಿದ್ದು, ಛಾಯಾಗ್ರಹಣ ಆಕರ್ಷಕವಾಗಿದೆ. ಮಧ್ಯವಯಸ್ಸಿನ ಹೀರೋ ಶಿವರಾಜ್‌ಕುಮಾರ್ ಹುಮ್ಮಸ್ಸಿನಿಂದ ಪಾತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರದ್ಧೆ, ಉತ್ಸಾಹದಿಂದ ನಟಿಸಿರುವ ಶಿವರಾಜ್ ಚಿತ್ರಕಥೆ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಬೇಕಿತ್ತು ಎಂದು ಅನ್ನಿಸುತ್ತದೆ. ಜನಪ್ರಿಯ ಮತ್ತು ಅನುಭವಿ ಹೀರೋಗಳನ್ನು ಜನರು ಹೆಚ್ಚಿನ ಆಸ್ಥೆಯಿಂದ ನೋಡುತ್ತಾರೆ. ಈ ಜವಾಬ್ದಾರಿ ಹೀರೋಗಳಿಗೂ ಇರಬೇಕಾಗುತ್ತದೆ. ಈ ವಿಚಾರವಾಗಿ ಶಿವರಾಜಕುಮಾರ್ ಇಲ್ಲಿ ಎಡವಿದ್ದಾರೆ ಎಂದು ಹೇಳಬಹುದು. ಹೀರೋಗೆ ಸಾಥ್ ಕೊಟ್ಟಿರುವ ವಿಜಯ್ ರಾಘವೇಂದ್ರ, ಯೋಗಿ ಮತ್ತು ಗುರು ಜಗ್ಗೇಶ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ನಿರ್ದೇಶನ: ನರಸಿಂಹ,
ನಿರ್ಮಾಣ: ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ, ಸಂಗೀತ: ವೀರ್ ಸಮರ್ಥ್, ತಾರಾಗಣ: ಶಿವರಾಜಕುಮಾರ್, ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ಪ್ರಣೀತಾ ಸುಭಾಷ್, ಯೋಗಿ, ಶರ್ಮಿಳಾ ಮಾಂಡ್ರೆ ಮತ್ತಿತರರು.

ರೇಟಿಂಗ್ - **

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

Writer - ಶಶಿಧರ ಚಿತ್ರದುರ್ಗ

contributor

Editor - ಶಶಿಧರ ಚಿತ್ರದುರ್ಗ

contributor

Similar News