×
Ad

ಠೇವಣಿದಾರರಿಗೆ ಕೋಟ್ಯಂತರ ರೂ. ಪಂಗನಾಮ ಹಾಕಿದ ಜ್ಯುವೆಲ್ಲರಿ ಮಾಲಕನ ಬಂಧನ

Update: 2017-08-13 13:50 IST

ತಿರೂರ್, ಆ.13: ಸಾವಿರಾರು ಠೇವಣಿದಾರರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚನೆ ನಡೆಸಿ ತಪ್ಪಿಸಿಕೊಂಡಿದ್ದ ತುಂಜತ್ ಜ್ಯುವೆಲ್ಲರ್ಸ್ ಮಾಲಕ ಜಯಚಂದ್ರನ್‍ನನ್ನು(32) ತಿರೂರ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಿಂದ ಕುಟ್ಟಿಪುರಂ ರೈಲು ನಿಲ್ದಾಣಕ್ಕೆ ಬಂದಿದ್ದಾಗ ಮಫ್ತಿಯಲ್ಲಿದ್ದ ಪೊಲೀಸರು ಜಯಚಂದ್ರನ್‍ರನ್ನು ಬಂಧಿಸಿದರು. ಎಡಪ್ಪಾಲ್, ತಿರೂರ್, ಕಣ್ಣೂರ್‍ನಲ್ಲಿ ಜ್ಯುವೆಲ್ಲರಿಗಾಗಿ ಸಂಗ್ರಹಿಸಿದ ಕೋಟ್ಯಂತರ ರೂ. ಠೇವಣಿಯನ್ನು ಮರಳಿಸಲು ಸಾಧ್ಯವಾಗದೆ ಜಯಚಂದ್ರನ್ ಒಂದು ವರ್ಷದಿಂದ ಭೂಗತನಾಗಿ ಬದುಕುತ್ತಿದ್ದನು.

ಠೇವಣಿಯ ಹಣದಿಂದ ಬೆಂಗಳೂರಿನಲ್ಲಿ ಐದು ಕೋಟಿರೂಪಾಯಿಯ  26 ಕೋಣೆಗಳ ಮೂರು ಮಹಡಿ ಕಟ್ಟಡ, ಜ್ಯುವೆಲ್ಲರಿ ಆರಂಭಿಸಲು ಎರಡೂವರೆ ಕೋಟಿ ರೂಪಾಯಿಯ  ಜಮೀನು, ತಿರೂರಿನಲ್ಲಿ ಏಳೂವರೆ ಕೋಟಿ ರೂಪಾಯಿಗೆ 28 ಸೆಂಟ್ ಜಾಗ,ತಾನೂರಿನಲ್ಲಿ ಎರಡುಕೋಟಿ ರೂಪಾಯಿಗೆ 1.64 ಎಕರೆ ಜಮೀನು ಖರೀದಿಸಿದ್ದೇನೆ.  ಒಯೂರಿನಲ್ಲಿ ಒಂದೂಮುಕ್ಕಾಲು ಕೋಟಿಗೆ 14 ಸೆಂಟ್ ಸ್ಥಳ ಖರೀದಿಸಿ ಎರಡು ಮನೆಯನ್ನು ಕಟ್ಟಿಸಿದ್ದೇನೆ ಎಂದು ಜಯಚಂದ್ರನ್  ತಿಳಿಸಿದ್ದಾನೆ.

ಕಾರ್ಯಾಚರಣೆಯಲ್ಲಿಎಸ್ಸೈಗಳಾದ ಸುಮೇಶ್ ಸುಧಾಕರ್, ಪುಷ್ಪಕರನ್, ಎಎಸ್ಸೈ ಕೆ.ಪ್ರಮೋದ್, ಸಿಪಿ ಇಕ್ಬಾಲ್ ಮುಂತಾದವರು ಭಾಗವಹಿಸಿದ್ದರು. 65ಲಕ್ಷ ಬಂಡವಾಳ ಹೂಡಿ ತುಂಜತ್ ಜ್ಯುವೆಲ್ಲರಿಯನ್ನು ಜಯಚಂದ್ರನ್ 2012ರಲ್ಲಿ ಒಬ್ಬನೇ ಆರಂಭಿಸಿದ್ದರು. ನಂತರ ಹದಿಮೂರು ಮಂದಿ ನಿರ್ದೇಶಕರನ್ನು ಸೇರಿಸಿಕೊಂಡಿದ್ದರು. ಆಸ್ತಿಗಳನ್ನು ಜಯಚಂದ್ರನ್ ತನ್ನ ಹೆಸರಿನಲ್ಲಿಯೇ ಖರೀದಿಸಿದ್ದರು. ಕೆಲವರಿಗೆ ಜಯಚಂದ್ರನ್ ಠೇವಣಿ ಮೊತ್ತವನ್ನು ಮರಳಿಸಿದ್ದಾರೆ. ಆದರೆ, ಠೇವಣಿ ವಂಚನೆಯ 4000ಕ್ಕೂ ಹೆಚ್ಚು ದೂರುಗಳು ಲಭಿಸಿವೆ. ಈ ಹಿಂದೆ ಇನ್ನೊಬ್ಬ ನಿರ್ದೇಶಕ ಹರಿಪಾಲನ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಜಯಚಂದ್ರನ್‍ರ ಜಮೀನುಜಫ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News