ಭಾರತೀಯರೊಂದಿಗೆ ಚೀನಿ ವಿಮಾನಯಾನ ಸಂಸ್ಥೆಯ ದುರ್ವರ್ತನೆ

Update: 2017-08-13 11:12 GMT

ಹೊಸದಿಲ್ಲಿ,ಆ.13: ಶಾಂಘೈನ ಪುಡಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೈನಾ ಈಸ್ಟರ್ನ್ ಏರ್‌ಲೈನ್ಸ್(ಸಿಇಎ)ನ ಸಿಬ್ಬಂದಿಗಳು ಭಾರತೀಯರೊಂದಿಗೆ ದುರ್ವರ್ತನೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಭಾರತೀಯ ಪ್ರಯಾಣಿಕರೋರ್ವರು ದೂರು ಸಲ್ಲಿಸಿದ್ದು, ಭಾರತವು ಈ ವಿಷಯವನ್ನು ಚೀನಾ ಸರಕಾರದ ಗಮನಕ್ಕೆ ತಂದಿದೆ.

ವಿಮಾನಯಾನ ಸಂಸ್ಥೆಯು ಈ ಆರೋಪವನ್ನು ನಿರಾಕರಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಗಮನಕ್ಕೆ ಈ ದೂರು ಬಂದ ಬಳಿಕ ಚೀನಿ ವಿದೇಶಾಂಗ ಸಚಿವಾಲಯದ ಶಾಂಘೈ ವಿದೇಶ ವ್ಯವಹಾರಗಳ ಕಚೇರಿ ಮತ್ತು ಪುಡಾಂಗ್ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮೂಲಗಳು ರವಿವಾರ ತಿಳಿಸಿದವು.

ತನ್ಮಧ್ಯೆ ಆರೋಪವನ್ನು ನಿರಾಕರಿಸಿರುವ ಸಿಇಎ, ಸಂಬಂಧಿತ ಸಾಕ್ಷಗಳು ಮತ್ತು ಸಿಸಿಟಿವಿ ತುಣುಕನ್ನು ಪರಿಶೀಲಿಸಿದ ಬಳಿಕ ಇಂತಹ ಘಟನೆ ನಡೆದಿರುವುದು ದೃಢಪಟ್ಟಿಲ್ಲ ಎಂದು ಹೇಳಿದೆ ಎಂದು ಸರಕಾರಿ ಸ್ವಾಮದ ಝಿನುವಾ ಸುದ್ದಿಸಂಸ್ಥೆಯು ವರದಿ ಮಾಡಿದೆ. ಬದಲಿಗೆ ಸಂಸ್ಥೆಯ ಸಿಬ್ಬಂದಿಗಳು ತುಂಬ ಕಾಳಜಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಿಇಎ ಹೇಳಿಕೆಯಲ್ಲಿ ತಿಳಿಸಿದೆ. ತನ್ನ ಪ್ರಯಾಣಿಕರಿಗೆ ಅತ್ಯುತ್ತಮ ಯಾನ ಸೇವೆಯನ್ನು ಒದಗಿಸುವ ತನ್ನ ಬದ್ಧತೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವುದಾಗಿಯೂ ಅದು ಹೇಳಿಕೊಂಡಿದೆ.

ವಿಮಾನದಲ್ಲಿ ವ್ಹೀಲ್‌ಚೇರ್ ಪ್ರಯಾಣಿಕರಿಗಾಗಿರುವ ನಿರ್ಗಮನ ದ್ವಾರದಲ್ಲಿ ಸಿಬ್ಬಂದಿಗಳು ಬೇರೊಂದು ವಿಮಾನವನ್ನು ಹತ್ತಬೇಕಿದ್ದ ಭಾರತೀಯ ಪ್ರಯಾಣಿಕರನ್ನು ಅವಮಾನಿಸುತ್ತಿದ್ದನ್ನು ತಾನು ಗಮನಿಸಿದ್ದಾಗಿ ಉತ್ತರ ಅಮೆರಿಕನ್ ಪಂಜಾಬಿ ಅಸೋಸಿಯೇಷನ್‌ನ ಕಾರ್ಯಕಾರಿ ನಿರ್ದೇಶಕ ಸತ್ನಾಮ್ ಸಿಂಗ್ ಚಹಲ್ ಅವರು ಸ್ವರಾಜ್ ಅವರಿಗೆ ದೂರು ಸಲ್ಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಆ.6ರಂದು ದಿಲ್ಲಿಯಿಂದ ಸ್ಯಾನ್‌ಫ್ರಾನ್ಸಿಸ್ಕೋಗೆ ಸಿಎಇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಚಹಲ್ ಪುಡಾಂಗ್ ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು. ಅಲ್ಲಿ ಅವರು ಅದೇ ಸಂಸ್ಥೆಯ ಬೇರೊಂದು ವಿಮಾನದಲ್ಲಿ ತನ್ನ ಪ್ರಯಾಣವನ್ನು ಮುಂದುವರಿಸಬೇಕಾಗಿತ್ತು. ಸಿಬ್ಬಂದಿಗಳ ದುರ್ವರ್ತನೆಯ ಬಗ್ಗೆ ಸಂಬಂಧಿತ ವಿಮಾನಯಾನ ಸಂಸ್ಥೆಯ ಬಳಿ ದೂರಿಕೊಂಡಾಗ ಅಧಿಕಾರಿಗಳು ಕೂಗಾಡಿದ್ದರು ಎಂದು ಅವರು ತಿಳಿಸಿದರು. ಭಾರತ ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ಗಡಿ ಉದ್ವಿಗ್ನತೆಯಿಂದಾಗಿ ಅವರು ಹತಾಶಗೊಂಡಿದ್ದರು ಎನ್ನುವುದನ್ನು ಅವರ ದೇಹಭಾಷೆಯಿಂದ ತಾನು ಗಮನಿಸಿದ್ದೆ ಎಂದು ಅವರು ಸ್ವರಾಜ್‌ಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ದೂರ ಪ್ರಯಾಣಿಸುವ ಭಾರತೀಯರಿಗೆ ಚೀನಾದ ಮೂಲಕ ಪ್ರಯಾಣಿಸದಂತೆ ಸಲಹೆ ಯನ್ನು ಹೊರಡಿಸುವಂತೆಯೂ ಚಹಲ್ ಸ್ವರಾಜ್‌ರನ್ನು ಕೋರಿಕೊಂಡಿದ್ದಾರೆ.

 ಭಾರತದಲ್ಲಿ ಚೀನಾ ವಿರೋಧಿ ಭಾವನೆಗಳಿರುವುದರಿಂದ ತಮ್ಮ ಸುರಕ್ಷತೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಚೀನಾ ಕಳೆದ ತಿಂಗಳು ಇಲ್ಲಿರುವ ತನ್ನ ಪ್ರಜೆಗಳಿಗೆ ಮಾರ್ಗಸೂಚಿ ಯನ್ನು ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News