ದೈತ್ಯ ಕೈಗಳ ಬಾಲಕನಿಗೆ ಪಿಶಾಚಿ ಎಂಬ ಪಟ್ಟ

Update: 2017-08-13 11:13 GMT

ಲಕ್ನೋ,ಆ.13: ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಬಾಲಕನೋರ್ವ ಒಂದು ಅಡಿಯಷ್ಟು ದೊಡ್ಡ ಅಂಗೈಗಳನ್ನು ಹೊಂದಿದ್ದು, ಆತನನ್ನು ಸ್ನೇಹಿತರೆಲ್ಲ ದೂರ ಮಾಡಿದ್ದಾರೆ. ಪರಿಸರದ ಯಾವ ಶಾಲೆಯೂ ಆತನನ್ನು ಸೇರಿಸಿಕೊಳ್ಳುತ್ತಿಲ್ಲ. 12ರ ಹರೆಯದ ತಾರಿಕ್‌ನಿಗೆ ಸ್ವತಃ ಬಟ್ಟೆಗಳನ್ನು ಧರಿಸಿಕೊಳ್ಳಲು ಸಾಧ್ಯವಿಲ್ಲ. ಆತನೋರ್ವ ‘ಪಿಶಾಚಿ’ ಎಂದು ಹಣೆಪಟ್ಟಿ ಕಟ್ಟಿರುವ ಗ್ರಾಮಸ್ಥರು ಶಾಪದಿಂದಾಗಿ ಆತ ಬೃಹತ್ ಅಂಗೈಗಳನ್ನು ಹೊಂದಿದ್ದಾನೆ ಎಂದು ಭಾವಿಸಿದ್ದಾರೆ. ತನ್ನ ತಾಯಿ ಮತ್ತು ಸೋದರ ಹರಜ್ಞಾನ ಜೊತೆಗೆ ವಾಸವಾಗಿರುವ ಬಾಲಕ ಶಾಲೆಗೆ ಹೋಗಬೇಕಾದ ಈ ವಯಸ್ಸಿನಲ್ಲಿ ಸ್ಥಳೀಯ ಚಹಾದಂಗಡಿಯಲ್ಲಿ ದುಡಿಯುತ್ತಿದ್ದಾನೆ.

 ಆತ ಹುಟ್ಟಿದಾಗಲೇ ಅಂಗೈಗಳು ದೊಡ್ಡದಾಗಿದ್ದವು. ಆತ ಬೆಳೆಯುತ್ತಿದ್ದಂತೆ ಅವೂ ಬೆಳೆದಿವೆ. ಆತನ ತಂದೆ ಜೀವಂತವಿದ್ದಾಗ ಮಗನನ್ನು ಸ್ಥಳೀಯ ವೈದ್ಯರಲ್ಲಿ ಬಹಳಷ್ಟು ಬಾರಿ ಕರೆದೊಯ್ದಿದ್ದರು. ಅವರ ನಿಧನಾನಂತರ ತಾಯಿಯ ಬಳಿ ಮಗನಿಗೆ ಚಿಕಿತ್ಸೆ ಕೊಡಿಸಲೂ ದುಡ್ಡಿಲ್ಲ ಎಂದು ತಾರಿಕ್‌ನ ಚಿಕ್ಕಮ್ಮ ಪುಷ್ಪಾ ಹೇಳಿದರು.

ಹರಜ್ಞಾನ ತಾರಿಕ್‌ನ ಬಗ್ಗೆ ತುಂಬ ಕಾಳಜಿ ವಹಿಸಿದ್ದಾನೆ. ಆತ ತನ್ನ ಕೈಗಳಿಂದ ಮಾಡಲು ಸಾಧ್ಯವಾಗದ ದೈನಂದಿನ ಕೆಲಸಕಾರ್ಯಗಳಿಗೆ ಹರಜ್ಞಾನ ನೆರವಾಗುತ್ತಿದ್ದಾನೆ.

ತಾರಿಕ್‌ನ ಅಂಗೈಗಳು ನಿಜಕ್ಕೂ ತುಂಬ ದೊಡ್ಡದಾಗಿವೆ. ನಾನಂತೂ ಜೀವನದಲ್ಲಿ ಅಂತಹ ಕೈಗಳನ್ನು ಕಂಡಿಲ್ಲ ಎನ್ನುತ್ತಾನೆ ಹರಜ್ಞಾನ.

ಆರಂಭದಲ್ಲಿ ತನಗೆ ಕೆಲವು ಸ್ನೇಹಿತರಿದ್ದರು, ಆದರೆ ಈಗ ಯಾರೂ ಇಲ್ಲ. ಎಲ್ಲರೂ ತನ್ನ ಕೈಗಳನ್ನು ನೋಡಿ ಹೆದರಿಕೊಳ್ಳುತ್ತಾರೆ. ತಾನು ಓದಲು ಬಯಸಿದ್ದೆ, ಆದರೆ ಯಾವ ಶಾಲೆಯೂ ತನ್ನನ್ನು ಸೇರಿಸಿಕೊಳ್ಳುತ್ತಿಲ್ಲ ಎನ್ನುತ್ತಾನೆ ತಾರಿಕ್.

ತಾರಿಕ ಶಾಪಗ್ರಸ್ಥ, ಹೀಗಾಗಿ ಅಂತಹ ಕೈಗಳನ್ನು ಹೊಂದಿದ್ದಾನೆ ಎನ್ನುವ ಗ್ರಾಮಸ್ಥರಿಗೆ ಇದೊಂದು ವೈದ್ಯಕೀಯ ಸ್ಥಿತಿ ಮತ್ತು ಸರಿಪಡಿಸಬಹುದಾಗಿದೆ ಎನ್ನುವುದು ಗೊತ್ತಿಲ್ಲ.

ತಾರಿಕ್‌ನ ಕೈಗಳು ದೇವರ ಸೃಷ್ಟಿ ಎನ್ನುವ ಪುಷ್ಪಾ, ಶೀಘ್ರವೇ ಆತ ಎಲ್ಲರಂತೆ ಸಹಜ ಕೈಗಳನ್ನು ಹೊಂದುತ್ತಾನೆ ಎಂಬ ವಿಶ್ವಾಸ ಹೊಂದಿದ್ದಾರೆ.

ತಾರಿಕ್‌ನ ಕುಟುಂಬ ಕಷ್ಟಪಟ್ಟು ದುಡ್ಡು ಹೊಂಚಿಕೊಂಡು ಆತನನ್ನು ಸ್ಥಳೀಯ ವೈದ್ಯರ ಬಳಿಗೆ ಕರೆದೊಯ್ದಿದೆ ಮತ್ತು ಪ್ರತಿ ಬಾರಿಯೂ ನಿರಾಶೆಯೊಂದಿಗೆ ಮರಳಿದೆ.

 ತಾರಿಕ್‌ನ ಕೈಗಳು ನಿಜಕ್ಕೂ ನಮಗೆ ವಿಸ್ಮಯವನ್ನುಂಟು ಮಾಡಿವೆ. ಆನೆಕಾಲು ರೋಗದ ಪ್ರಕರಣಗಳನ್ನು ನಾವು ನೋಡಿದ್ದೇವೆ, ಈ ಬಾಲಕನ ಸ್ಥಿತಿಯೂ ಹಾಗೆಯೇ ಕಾಣುತ್ತಿದೆ. ಆತ ಉತ್ತಮ ಚಿಕಿತ್ಸೆ ಪಡೆದು ಸಹಜ ಜೀವನ ನಡೆಸುವ ಕನಸು ಕಾಣುತ್ತಿದ್ದಾನೆ. ಅವಕಾಶಗಳು ಕಡಿಮೆ.....ಆದರೆ ಈ ಜಗತ್ತಿನಲ್ಲಿ ಅಸಾಧ್ಯವೆನ್ನುವುದು ಯಾವುದೂ ಇಲ್ಲ. ಇಂದಿನ ವೈಜ್ಞಾನಿಕ ಯುಗದಲ್ಲಿ ಬಹಳಷ್ಟು ಸಂಶೋಧನೆಗಳು ನಡೆಯುತ್ತಿವೆ. ಹೀಗಾಗಿ ಯಾವುದೂ ಅಸಾಧ್ಯವಲ್ಲ. ಮುಂದೊಂದು ದಿನ ತಾರಿಕ್‌ನ ಕೈಗಳನ್ನು ಸರಿ ಮಾಡಲು ಸಾಧ್ಯವಾಗಬಹುದು ಎಂದು ಇತ್ತೀಚಿಗೆ ಗ್ರಾಮಕ್ಕೆ ಕಾರ್ಯನಿಮಿತ್ತ ಭೇಟಿ ನೀಡಿದ್ದಾಗ ತಾರಿಕ್‌ನನ್ನು ಪರೀಕ್ಷಿಸಿರುವ ಡಾ.ಪವನ ಕುಮಾರ ಗಾಂಧಿ ಹೇಳಿದ್ದಾರೆ. ಹೀಗಾಗಿ ತಾರಿಕ್‌ನ ಕನಸಿಗೆ ಈಗ ರೆಕ್ಕೆಗಳು ಮೂಡಿವೆ.

ಚಿತ್ರ ಕೃಪೆ : thesun.co.uk

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News