ಮಹಿಳೆಯರನ್ನು ಹಿಂಬಾಲಿಸುವಿಕೆ ಗಂಭೀರ ಅಪರಾಧಗಳಿಗೆ ಕಾರಣವಾಗಬಹುದು: ರಂಜನಾ ಕುಮಾರಿ

Update: 2017-08-13 12:13 GMT

ಹೊಸದಿಲ್ಲಿ,ಆ.13: ಮಹಿಳೆಯರನ್ನು ಹಿಂಬಾಲಿಸುವುದು ಅತ್ಯಾಚಾರ, ಆ್ಯಸಿಡ್ ದಾಳಿ....ಅಷ್ಟೇ ಏಕೆ, ಅವರ ಕೊಲೆಗೂ ಕಾರಣವಾಗಬಹುದು ಎಂದಿಲ್ಲಿ ಎಚ್ಚರಿಕೆ ನೀಡಿದ ಸಾಮಾಜಿಕ ಸಂಶೋಧನಾ ಕೇಂದ್ರದ ನಿರ್ದೇಶಕಿ ರಂಜನಾ ಕುಮಾರಿ ಅವರು, ಈ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿಯೇ ನಿಭಾಯಿಸುವುದು ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು.

1996ರಲ್ಲಿ ದಿಲ್ಲಿಯ ಕಾನೂನು ವಿದ್ಯಾರ್ಥಿನಿ ಪ್ರಿಯದರ್ಶಿನಿ ಮಟ್ಟೂರನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದ. ಕಳೆದ ವಾರ ಉತ್ತರ ಪ್ರದೇಶದಲ್ಲಿ ಹದಿಹರೆಯದ ವಿದ್ಯಾರ್ಥಿನಿ ರಾಗಿಣಿ ದುಬೆಯನ್ನು ಆಕೆಯನ್ನು ಹಿಂಬಾಲಿಸುತ್ತಿದ್ದ ಗ್ರಾಮ ಪ್ರಧಾನನ ಪುತ್ರ ಕೊಲೆ ಮಾಡಿದ್ದಾನೆ. ಎರಡೂ ಘಟನೆಗಳ ನಡುವೆ 20 ವರ್ಷಗಳ ಅಂತರವಿದ್ದರೂ ಮಹಿಳೆಯರನ್ನು ಹಿಂಬಾಲಿಸುವ ಪಿಡುಗು ಕಡಿಮೆಯಾಗಿಲ್ಲ ಎಂದ ಅವರು, ಹುಡುಗರು ಹುಡುಗಿಯರನ್ನು ಹಿಂಬಾಲಿಸುತ್ತಾರೆ,ಅಷ್ಟೇ ಎಂದು ಜನರು ಭಾವಿಸಿರುತ್ತಾರೆ. ಆದರೆ ಅದನ್ನು ಆರಂಭದಲ್ಲಿಯೇ ನಿವಾರಿಸುವ ಅಗತ್ಯವಿದೆ ಎಂದು ಹೇಳಿದರು.

ಆ.4ರಂದು ಹರ್ಯಾಣ ಬಿಜೆಪಿ ಅಧ್ಯಕ್ಷ ಸುಭಾಷ್ ಬರಾಲಾರ ಪುತ್ರ ವಿಕಾಸ ಬರಾಲಾ ತನ್ನ ಸ್ನೇಹಿತನೊಂದಿಗೆ ಕಾರಿನಲ್ಲಿ ಹಿರಿಯ ಐಎಎಸ್ ಅಧಿಕಾರಿಯೋರ್ವರ ಪುತ್ರಿಯನ್ನು ಹಿಂಬಾಲಿಸಿದ್ದು ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News