ನೀಟ್ ಪರೀಕ್ಷೆ: ತಮಿಳುನಾಡಿಗೆ ಪ್ರತ್ಯೇಕ ಕಾನೂನು

Update: 2017-08-14 09:24 GMT

ಹೊಸದಿಲ್ಲಿ,ಆ.14: ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ನಡೆಸಲಾಗುವ ನೀಟ್ 2017ರಿಂದ ತಮಿಳುನಾಡಿನ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಲು ಕೇಂದ್ರವು ನಿರ್ಧರಿಸಿದೆ. ಇದರೊಂದಿಗೆ ತಮಿಳುನಾಡು ರಾಜಕಾರಣಿಗಳ ಸುದೀರ್ಘ ಕಾಲದ ಬೇಡಿಕೆಗಳಲ್ಲೊಂದು ಕೊನೆಗೂ ಈಡೇರಿದಂತಾಗಿದೆ. ಖಾಸಗಿ ಶಾಲೆಗಳು ಒಪ್ಪಿಸಿರುವ ಸೀಟ್‌ಗಳು ಸೇರಿದಂತೆ ಸುಮಾರು 4,000 ಸೀಟ್‌ಗಳು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿವೆ.

ಈ ವರ್ಷ ನೀಟ್‌ನಿಂದ ವಿನಾಯಿತಿ ಕೋರಿ ರಾಜ್ಯ ಸರಕಾರವು ಅಧ್ಯಾದೇಶ ಹೊರಡಿಸಿದರೆ ಆ ಬೇಡಿಕೆಯನ್ನು ಒಪ್ಪಿಕೊಳ್ಳಲು ಸರಕಾರವು ಸಿದ್ಧವಿದೆ ಎಂದು ಇಂದಿಲ್ಲಿ ತಿಳಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರಾಜ್ಯದೊಂದಿಗೆ ನಾವು ನಡೆಸಿದ ಮಾತುಕತೆಯಿಂದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ಕಷ್ಟವಿದೆ ಎನ್ನುವುದು ತಿಳಿದುಬಂದಿದೆ ಎಂದರು.

ಸರಕಾರಿ ಕಾಲೇಜುಗಳಲ್ಲಿ ಪ್ರವೇಶ ದೊರಕಿಸಿಕೊಳ್ಳಲು ಗ್ರಾಮೀಣ ವಿದ್ಯಾರ್ಥಿಗಳಿಗೆ ನೆವಾಗಲು ವಿನಾಯಿತಿಯನ್ನು ಕೋರಲಾಗಿದೆ ಎನ್ನುವುದನ್ನು ನಿರ್ದಿಷ್ಟಪಡಿಸಿ ಅಧ್ಯಾದೇಶ ವೊಂದನ್ನು ರಾಜ್ಯಸರಕಾರವು ಹೊರಡಿಸುವುದು ಅಗತ್ಯವಾಗಿದೆ.

ತಮಿಳುನಾಡಿನ ಶೇ.90ರಷ್ಟು ವಿದ್ಯಾರ್ಥಿಗಳು ರಾಜ್ಯ ಶಿಕ್ಷಣ ಮಂಡಳಿಯ ಪಠ್ಯಕ್ರಮ ದಂತೆ ವ್ಯಾಸಂಗ ಮಾಡಿರುವುದರಿಂದ ಸಂಪೂರ್ಣವಾಗಿ ಸಿಬಿಎಸ್‌ಇ ಪಠ್ಯಕ್ರಮ ಆಧಾರಿತ ನೀಟ್ ಪರೀಕ್ಷೆಯನ್ನು ಎದುರಿಸುವುದು ಅವರಿಗೆ ಕಷ್ಟವಾಗಲಿದೆ.

ರಾಜ್ಯಕ್ಕೆ ಒಂದು ವರ್ಷದ ಅವಧಿಗೆ ನೀಟ್‌ನಿಂದ ವಿನಾಯಿತಿಯನ್ನು ಕೋರುವ ಅಧ್ಯಾದೇಶವನ್ನು ತಮಿಳುನಾಡು ಶಿಕ್ಷಣ ಸಚಿವ ಸಿ.ವಿಜಯಭಾಸ್ಕರ್ ಅವರು ಮಂಗಳವಾರ ಸಲ್ಲಿಸಲಿದ್ದಾರೆ. ಅವರು ಆ.3ರಂದು ಕಳೆದ ಮೂರು ವಾರಗಳಲ್ಲಿ ಎರಡನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ರಾಜ್ಯಕ್ಕೆ ನೀಟ್‌ನಿಂದ ವಿನಾಯಿತಿ ನೀಡುವಂತೆ ಕೋರಿಕೊಂಡಿದ್ದರು. ತಮಿಳುನಾಡು ಪ್ರವೇಶ ಪರೀಕ್ಷೆ ನಡೆಸುವ ಪದ್ಧತಿಯನ್ನು ಕೈಬಿಟ್ಟಿದ್ದು, 12ನೇ ತರಗತಿಯ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಆಧಾರದಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ. ಪ್ರವೇಶ ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಕೋಚಿಂಗ್ ಸೆಂಟರ್‌ಗಳ ದುಬಾರಿ ಶುಲ್ಕವನ್ನು ಪಾವತಿಸಲು ಸಾಧ್ಯವಿಲ್ಲದ, 12ನೇ ತರಗತಿಯಲ್ಲಿ ಉನ್ನತ ಅಂಕಗಳನ್ನು ಗಳಿಸಿರುವ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ನೆರವಾಗಲು ಸರಕಾರವು ಈ ನಿರ್ಧಾರವನ್ನು ಕೈಗೊಂಡಿತ್ತು.

ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅವರು ಪ್ರಧಾನಿಯನ್ನು ಭೇಟಿಯಾದ ಎರಡು ದಿಗಳ ಬಳಿಕ ಹೊರಬಿದ್ದಿರುವ ಕೇಂದ್ರದ ಈ ನಿರ್ಧಾರವು ಪ್ರವೇಶ ಪ್ರಕ್ರಿಯೆ ತಡೆಹಿಡಿಯಲ್ಪಟ್ಟಿರುವ ರಾಜ್ಯದ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಖಂಡಿತ ನೆಮ್ಮದಿಯನ್ನು ಮೂಡಿಸಲಿದೆ. ಅಂದ ಹಾಗೆ ಪಳನಿಯಪ್ಪನ್ ಮತ್ತು ಮೋದಿ ಭೇಟಿ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಯ ಸುಳಿವನ್ನೂ ನೀಡಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News