ಮುಂಗಾರು ಮಳೆಯಿಂದ ಹಲವು ರಾಜ್ಯಗಳಲ್ಲಿ ನೆರೆಹಾವಳಿ
ಹೊಸದಿಲ್ಲಿ, ಆ.14: ಮುಂಗಾರು ಮಳೆಯಿಂದ ಸುಮಾರು 20 ರಾಜ್ಯಗಳು ಬಾಧಿತವಾಗಿದ್ದು 600 ಮಂದಿ ಮೃತಪಟ್ಟಿದ್ದಾರೆ. 63,215 ಮನೆ/ಗುಡಿಸಲು ನಾಶವಾಗಿದ್ದು ಸುಮಾರು 2.8 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ ಎಂದು ಲಭ್ಯ ಮಾಹಿತಿಯಿಂದ ತಿಳಿದುಬಂದಿದೆ.
ಅಸ್ಸಾಂ ಮತ್ತು ಬಿಹಾರದಲ್ಲಿ ಭಾರೀ ಮಳೆಯಿಂದ ಹಲವರು ಮೃತಪಟ್ಟು ಲಕ್ಷಾಂತರ ಮಂದಿ ಬಾಧಿತರಾಗಿದ್ದು , ನೆರೆಬಾಧಿತ ರಾಜ್ಯಗಳಿಗೆ ಸರ್ವರೀತಿಯ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಬಿಹಾರದಲ್ಲಿ ನೆರೆಹಾವಳಿಯಿಂದ ಸುಮಾರು 20 ಲಕ್ಷ ಮಂದಿ ಬಾಧಿತರಾಗಿದ್ದರೆ, ಅಸ್ಸಾಂನಲ್ಲಿ 22 ಲಕ್ಷಕ್ಕೂ ಹೆಚ್ಚು ಮಂದಿ ತೊಂದರೆಗೊಳಗಾಗಿದ್ದಾರೆ. ನೆರೆಯ ರಾಜ್ಯಗಳಾದ ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ಅಸ್ಸಾಂನ ಕೆಲ ಪ್ರದೇಶಗಳಲ್ಲಿ ಬುಧವಾರದವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಇಲಾಖೆ ನೀಡಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ. ದೇಶದ ಇತರೆಡೆಯಿಂದ ಈಶಾನ್ಯ ರಾಜ್ಯಗಳಿಗೆ ಸಂಚರಿಸುವ ರೈಲ್ವೇ ಸೇವೆಯನ್ನು ಆಗಸ್ಟ್ 16ರವರೆಗೆ ಅಮಾನತುಗೊಳಿಸಿರುವುದಾಗಿ ರೈಲ್ವೇ ಇಲಾಖೆ ಪ್ರಕಟಿಸಿದೆ.
ನೆರೆಹಾವಳಿಗೆ ನಲುಗಿರುವ ಅಸ್ಸಾಂನಲ್ಲಿ ಕಳೆದ ಎರಡು ದಿನದಲ್ಲಿ ಮತ್ತೆ 10 ಮಂದಿ ಸಾವನ್ನಪ್ಪಿದ್ದು ರಕ್ಷಣೆ ಮತ್ತು ಸುರಕ್ಷಾ ಕಾರ್ಯಾಚರಣೆ ತೀವ್ರಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕುಂಡಿಲ್ ನದಿಯ ತಟದಲ್ಲಿ ಕಡಲ್ಕೊರೆತ ಉಂಟಾಗಿದ್ದು ಪಂಚ್‌ಮೈಲ್, ಲಖಿಮಿ ಗಾಂವ್, ಬೊಬೊರಿಬರಿ ಪ್ರದೇಶ ಹಾಗೂ ಕುಂಡಿಲ್ ಸೇತುವೆಗೆ ಗಂಭೀರ ಅಪಾಯ ಎದುರಾಗಿದೆ. ಮುಖ್ಯಮಂತ್ರಿ ಸರ್ಬನಂದ ಸೊನೊವಾಲ್‌ಗೆ ದೂರವಾಣಿ ಕರೆ ಮಾಡಿದ ಪ್ರಧಾನಿ ಮೋದಿ, ರಾಜ್ಯಕ್ಕೆ ಕೇಂದ್ರದಿಂದ ಸರ್ವರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ರಾಜ್ಯಸರಕಾರದ ಮೂಲಗಳು ತಿಳಿಸಿವೆ. ಪಂಚ್‌ಮೈಲ್‌ನಲ್ಲಿರುವ ನೆರೆಸಂತ್ರಸ್ತರ ಶಿಬಿರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸೊನೊವಾಲ್, ಪರಿಹಾರ ಕಾರ್ಯಾಚರಣೆಯ ಅವಲೋಕನ ನಡೆಸಿದರು. ರಾಜ್ಯದಲ್ಲಿ ಪದೇಪದೇ ಮರುಕಳಿಸುತ್ತಿರುವ ನೆರೆಹಾವಳಿ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲು ಸರಕಾರ ನಿರ್ಧರಿಸಿದೆ ಎಂದವರು ಈ ಸಂದರ್ಭ ತಿಳಿಸಿದರು.
ನೇಪಾಳದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮುಸಲಧಾರೆ ಮಳೆಯಿಂದ ಹಾಗೂ ಬಿಹಾರದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಕಿಷನ್‌ಗಂಜ್, ಪುರ್ನಿಯ, ಅರಾರಿಯ ಮತ್ತು ಕಥಿಹಾರ್ ಜಿಲ್ಲೆಗಳು ನೆರೆಹಾವಳಿಗೆ ಸಿಲುಕಿದೆ. ಮಹಾನಂದ ಹಾಗೂ ಕಾಂಕೈ ನದಿಗಳು ಉಕ್ಕಿ ಹರಿಯುತ್ತಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ. ಇದುವರೆಗೆ ಮಕ್ಕಳು, ಮಹಿಳೆ ಸೇರಿದಂತೆ ಕನಿಷ್ಟ 10 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಳಿಗಳು ನೀರಿನಲ್ಲಿ ಮುಳುಗಿರುವ ಕಾರಣ ಹಲವು ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ವಾಯುಪಡೆಯ ಹೆಚ್ಚುವರಿ 10 ತುಕಡಿಗಳನ್ನು ಪರಿಹಾರ ಕಾರ್ಯಾಚರಣೆಗೆ ನಿಯೋಜಿಸುವಂತೆ ಕೇಳಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ನೆರವು ಸಹಿತ ಸರ್ವ ರೀತಿಯ ನೆರವನ್ನು ಬಿಹಾರಕ್ಕೆ ನೀಡುವುದಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನೆರೆಹಾವಳಿಯಿಂದ ಐದು ಲಕ್ಷಕ್ಕೂ ಹೆಚ್ಚು ಮಂದಿ ತೊಂದರೆಗೊಳಗಾಗಿದ್ದು ಕನಿಷ್ಠ ಮೂರು ಮಂದಿ ಮೃತಪಟ್ಟಿದ್ದು ರೈಲ್ವೇ ಸೇವೆ ಮತ್ತು ಸಂಪರ್ಕ ವ್ಯವಸ್ಥೆಗೆ ಹಾನಿಯಾಗಿದೆ. ಕೂಚ್ ಬೆಹಾರ್ ಜಿಲ್ಲೆಯಲ್ಲಿ ವಾಹನ ಮತ್ತು ರೈಲು ಸಂಚಾರ ಸ್ಥಗಿತಗೊಂಡಿದ್ದು ದೇಶದ ಇತರ ಪ್ರದೇಶಗಳಿಂದ ಸಂಪರ್ಕ ಕಡಿದುಕೊಂಡಿದೆ.ಕೂಚ್ ಬೆಹಾರ್ ಜಿಲ್ಲೆಯೊಂದರಲ್ಲೇ ಸುಮಾರು 2.87 ಲಕ್ಷ ಮಂದಿ ಸಂತ್ರಸ್ತರಾಗಿದ್ದರೆ, ಜಲಪೈಗುರಿ ಮತ್ತು ಆಲಿಪುರ್ದಾರ್ ಜಿಲ್ಲೆಗಳಲ್ಲಿ ತಲಾ 2 ಲಕ್ಷ, ಮಾಲ್ದ, ಉತ್ತರ ದಿನಾಜ್‌ಪುರ, ದಕ್ಷಿಣ ದಿನಾಜ್‌ಪುರ ಮತ್ತು ದಾರ್ಜಿಲಿಂಗ್ ಜಿಲ್ಲೆಯಲ್ಲಿ 50,000ಕ್ಕೂ ಹೆಚ್ಚು ಮಂದಿ ಭಾದಿತರಾಗಿದ್ದಾರೆ. ಇಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯ ಭರದಿಂದ ಸಾಗಿದೆ.
ಮರುಗಂಜ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 31, ನಕ್ಸಲ್‌ಬಾರಿ ಮತ್ತು ಮಟಿಗರ ವಿಭಾಗಗಳು ನೆರೆನೀರಿನಲ್ಲಿ ಮುಳುಗಿದೆ. ಹಿಮಾಚಲ ಪ್ರದೇಶದ ಮಾಂಡಿ ಎಂಬಲ್ಲಿ ರವಿವಾರ ಸಂಭವಿಸಿದ ಭಾರೀ ಭೂಕುಸಿತದ ಕಾರಣ ಕನಿಷ್ಟ 46 ಮಂದಿ ಮೃತಪಟ್ಟಿದ್ದು ಎರಡು ಬಸ್ಸುಗಳು ಸೇರಿದಂತೆ ಕೆಲವು ವಾಹನಗಳು, ಮನೆ, ರಸ್ತೆ ನಾಶವಾಗಿದೆ. ಇದುವರೆಗೆ ಐವರು ಗಾಯಾಳುಗಳನ್ನು ರಕ್ಷಿಸಲಾಗಿದ್ದು 23 ಮೃತದೇಹಗಳನ್ನು ಮೇಲೆತ್ತಲಾಗಿದೆ. ಮುಖ್ಯಮಂತ್ರಿ ವೀರ್‌ಭದ್ರ ಸಿಂಗ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಮೃತಪಟ್ಟವರ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಮೇಘಾಲಯದಲ್ಲೂ ಕಳೆದ ಐದು ದಿನದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಸುಮಾರು 800 ಮಂದಿ ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ನೆರೆಹಾವಳಿ ಹಾಗೂ ಭೂಕುಸಿತದ ಹಲವಾರು ಪ್ರಕರಣಗಳು ವರದಿಯಾಗಿದ್ದು ಮುಖ್ಯಮಂತ್ರಿ ಮುಕುಲ್ ಸಂಗ್ಮ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯನ್ನು ವೀಕ್ಷಿಸಿದರು.
ಗುಜರಾತ್‌ನಲ್ಲಿ ನೆರೆಹಾವಳಿಯಿಂದ ಮೃತಪಟ್ಟಿರುವವರ ಸಂಖ್ಯೆ 218್ಕಕೇರಿದೆ. ರಾಜ್ಯದಲ್ಲಿ 4.5 ಲಕ್ಷ ಮಂದಿ ತೊಂದರೆಗೊಳಗಾಗಿದ್ದು ಕಳೆದ ವಾರ 39,000 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಹಾಗೂ 11,400 ಮಂದಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.