ಮಕ್ಕಳ ಸಾವಿನ ಸೂತಕದ ನಡುವೆಯೂ ವೈಭವದ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಆದಿತ್ಯನಾಥ್ ಸೂಚನೆ

Update: 2017-08-14 15:09 GMT

ಲಕ್ನೋ,ಆ.14: ಗೋರಖ್‌ಪುರದ ಸರಕಾರಿ ಆಸ್ಪತ್ರೆಯಲ್ಲಿ 80 ಮಕ್ಕಳ ಸಾವಿಗೆ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿರುವಂತೆಯೇ, ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ಅವರು ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ವೈಭವಯುತವಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುವಂತೆ ಉನ್ನತ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

‘‘ಕೃಷ್ಣ ಜನ್ಮಾಷ್ಟಮಿಯು ಒಂದು ಪ್ರಮುಖ ಹಬ್ಬವಾಗಿದ್ದು, ಪೊಲೀಸರು ಅದನ್ನು ಸಾಂಪ್ರದಾಯಿಕ ರೀತಿಯಲ್ಲಿ ಹಾಗೂ ಅದ್ದೂರಿಯಾಗಿ ಸಂಘಟಿಸಬೇಕೆಂದು ಆದಿತ್ಯನಾಥ್ ಅವರು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸುಲ್ಖಾನ್ ಸಿಂಗ್ ಅವರಿಗೆ ರವಿವಾರ ತಡರಾತ್ರಿ ಸೂಚನೆ ನೀಡಿದ್ದಾರೆ.

ಭಗವಾನ್ ಕೃಷ್ಣನ ಜನ್ಮದಿನಾಚರಣೆಯನ್ನು ಭಾರತೀಯ ಸಂಪ್ರದಾಯಗಳಿಗೆ ಅನುಗುಣವಾಗಿ ಆಚರಿಸಬೇಕೆಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಡಿಜಿಪಿ ಸುಲ್ಕಾನ್ ಸಿಂಗ್ ಅವರು ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠರಿಗೆ, ರೈಲ್ವೆ ಹಾಗೂ ಪ್ರಾಂತೀಯ ಸಶಸ್ತ್ರ ಪಡೆ (ಪಿಎಸಿ)ಗಳಿಗೆ ಪತ್ರಬರೆದು ಮುಖ್ಯಮಂತ್ರಿಯ ಸೂಚನೆಯನ್ನು ಶಿರಸಾವಹಿಸುವಂತೆ ಸೂಚಿಸಿದ್ದಾರೆ.

ಗೋರಖ್‌ಪುರದ 80 ಮಕ್ಕಳು ಪ್ರಾಣ ಕಳೆದುಕೊಂಡಿರುವ ಈ ದುರಂತ ಸನ್ನಿವೇಶದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅದ್ದೂರಿ ಅಚರಣೆಗೆ ಸೂಚನೆ ನೀಡಿದ ಆದಿತ್ಯನಾಥ್ ಅವರನ್ನು ಆಮ್‌ಆದ್ಮಿ ಪಕ್ಷ ತೀವ್ರವಾಗಿ ಖಂಡಿಸಿದೆ. ಅಧಿಕಾರದಲ್ಲಿರುವ ಶಕ್ತಿಗಳ ಮನಸ್ಥಿತಿಯ ಪ್ರತಿಬಿಂಬ ಇದಾಗಿದೆಯೆಂದು ಎಎಪಿ ವಕ್ತಾರೆ ವೈಭವಿ ಮಹೇಶ್ವರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News