×
Ad

ತನಿಖೆಯಲ್ಲಿ ಪಾಲ್ಗೊಳ್ಳದೆ ಕಾರ್ತಿ ಚಿದಂಬರಂ ವಿದೇಶಕ್ಕೆ ತೆರಳುವಂತಿಲ್ಲ : ಸುಪ್ರೀಂ ಸೂಚನೆ

Update: 2017-08-14 21:08 IST

ಹೊಸದಿಲ್ಲಿ, ಆ.14: ಭ್ರಷ್ಟಾಚಾರ ಪ್ರಕರಣದಲ್ಲಿ ಹೆಸರಿಸಲಾಗಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ತನಿಖಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

 ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಎದುರು ಹಾಜರಾಗದೆ ಅವರು ವಿದೇಶ ಪ್ರಯಾಣ ಕೈಗೊಳ್ಳುವಂತಿಲ್ಲ ಎಂದು ತಿಳಿಸಿರುವ ಸುಪ್ರೀಂಕೋರ್ಟ್, ಕಾರ್ತಿ ವಿರುದ್ಧ ಜಾರಿಗೊಳಿಸಲಾಗಿದ್ದ ಲುಕ್‌ಔಟ್ ನೋಟಿಸನ್ನು ಸ್ಥಗಿತಗೊಳಿಸಿದ್ದ ಮದ್ರಾಸ್ ಹೈಕೋರ್ಟ್ ಕ್ರಮವನ್ನು ರದ್ದುಗೊಳಿಸಿತು.

ಚೆನ್ನೈ ಅಥವಾ ದಿಲ್ಲಿಯಲ್ಲಿ, ಕಾರ್ತಿ ತನಿಖಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲೇ ಬೇಕು. ಈ ಹಿಂದೆ ನಾವು ಇಂತಹ ಪ್ರಕರಣಗಳಲ್ಲಿ ಜನರಿಗೆ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಿ ತಪ್ಪು ಮಾಡಿದ್ದೆವು. ಆದರೆ ಅವರು ಮರಳಿ ಬಂದಿಲ್ಲ. ಈ ತಪ್ಪನ್ನು ಪುನರಾವರ್ತಿಸಲು ನಾವು ಬಯಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಹೇಳಿದರು.

 ಕಾರ್ತಿ ಚಿದಂಬರಮ್‌ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಮೇ 18 ಮತ್ತು ಜುಲೈ 21ರಂದು ಸಿಬಿಐ ಸಮನ್ಸ್ ಜಾರಿಗೊಳಿಸಿತ್ತು. ತನ್ನ ವಿರುದ್ಧ ದಾಖಲಿಸಲಾಗಿರುವ ಪ್ರಕರಣ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿ ಕಾರ್ತಿ ಮದ್ರಾಸ್ ಹೈಕೋರ್ಟ್‌ನ ಮೊರೆ ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News