ಮಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನೆಹರೂ - ಪ್ರಭಾಕರ ಶ್ರೀಯಾನ್ ನೆನಪು

Update: 2017-08-15 07:36 GMT

ಭಾರತದಲ್ಲಿ ಸ್ವಾತಂತ್ರದ ಬಳಿಕ ಆಡಳಿತದಲ್ಲಿ ನಿಯತ್ತಿನ ರಾಜಕಾರಣ ಇತ್ತು. ಯಾವ ಪಕ್ಷದವರಾಗಿದ್ದರೂ ಅಂದಿನ ರಾಜಕಾರಣಿಗಳಿಗೆ ಜನರ ಬಗ್ಗೆ ಕಾಳಜಿ ಇತ್ತು. ಜಾತಿ, ಮತ, ಭೇದ ಎಂಬುದು ಇರಲಿಲ್ಲ. ರಾಜಕಾರಣಿಗಳಿಗೆ ತಮ್ಮ ಹೊಣೆಗಾರಿಕೆಯ ಬಗ್ಗೆ ಅರಿವಿತ್ತು. ಮನುಷ್ಯತ್ವ ಇತ್ತು. ಅವರಲ್ಲಿ ಸೌಮ್ಯತೆ ಇತ್ತು. ಆದರೆ ಇಂದಿನದ್ದು ವೈರತ್ವದ ರಾಜಕಾರಣ. ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿಕಟ್ಟುವ ರಾಜಕಾರಣ. ಜಾತಿ, ಧರ್ಮಗಳ ಆಧಾರದಲ್ಲಿ ಜನರ ಒಗ್ಗಟ್ಟನ್ನು ಮುರಿಯುವ ರಾಜಕಾರಣ. ಇಂತಹ ರಾಜಕಾರಣದಿಂದ ಉಜ್ವಲ ಭವಿಷ್ಯದ ಕನಸು ಕಾಣಲು ಸಾಧ್ಯವಿಲ್ಲ

1947ರಲ್ಲಿ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಮಂಗಳೂರಿನ ನೆಹರೂ ಮೈದಾನಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅವರಿಗೆ ರಕ್ಷಣೆಯ ಕರ್ತವ್ಯದ ಹೊಣೆ ಹೊತ್ತಿದ್ದ 20 ಮಂದಿ ಸ್ವಯಂ ಸೇವಕರ ತಂಡದಲ್ಲಿ ತಾನೂ ಇದ್ದೆ ಎಂದು ಸ್ವಾತಂತ್ರ ಹೋರಾಟಗಾರರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿರುವ ಹಾಗೂ ಪ್ರಸ್ತುತ ಮಂಗಳೂರಿನ ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಉಪಾಧ್ಯಕ್ಷ ಬಿ.ಪ್ರಭಾಕರ ಶ್ರೀಯಾನ್ ತಿಳಿಸಿದ್ದಾರೆ.

‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ‘‘ಭಾರತಕ್ಕೆ ಸ್ವಾತಂತ್ರ ಲಭಿಸಿದ ಸಂದರ್ಭದಲ್ಲಿ ನಾನು 4 ವರ್ಷದವನಾಗಿದ್ದೆ. ಜೆಪ್ಪುವಿನ ಕಾಶಿಯಾ ಹೈಸ್ಕೂಲ್‌ನಲ್ಲಿ ಎಸೆಸೆಲ್ಸಿ (ಅಂದಿನ 11ನೆ ತರಗತಿ) ಪೂರ್ಣಗೊಳಿಸಿದ್ದೆ. ಬಳಿಕ ಕಾಂಗ್ರೆಸ್ ಸೇವಾ ದಳಕ್ಕೆ ಸೇರಿದ್ದೆ. ಅಂದು ಸ್ವಾತಂತ್ರ ಹೋರಾಟಗಾರ ಬಲ್ಲಾಳ್‌ಬಾಗ್‌ನ ಲೋಕಯ್ಯ ಶೆಟ್ಟಿ ಈ ಸೇವಾದಳದ ನೇತೃತ್ವ ವಹಿಸಿದ್ದರು. ಆ ದಿನಗಳಲ್ಲಿ ಪೊಲೀಸರಿಗಿಂತ ಸೇವಾ ದಳದ ಕಾರ್ಯಕರ್ತರಿಗೆ ಹೆಚ್ಚು ಜವಾಬ್ದಾರಿಗಳಿದ್ದವು. ನಾನು ಸೇವಾದಳದ ಕಾರ್ಯಕರ್ತನಾಗಿದ್ದರಿಂದ 1962ರಲ್ಲಿ ಮಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನೆಹರೂ ಅವರಿಗೆ ಸ್ವಯಂ ಸೇವಕರ ರಕ್ಷಣೆಯ ಜವಾಬ್ದಾರಿಯ ಕರ್ತವ್ಯ ನಿರ್ವಹಿಸಿದೆ’’ ಎಂದರು.

‘‘ಕರುಣಾಕರ ಉಚ್ಚಿಲ, ರಾಮರಾಜ್ ಕಿಣಿ, ಎಸ್.ಕೆ. ಅಮೀನ್, ಅಮ್ಮೆಂಬಳ ಬಾಳಪ್ಪ, ಬೋಳಾರದ ಕೆ.ಕೆ.ಶೆಟ್ಟಿ, ಬಂಟ್ವಾಳ ನಾರಾಯಣ ನಾಯಕ್ ಮತ್ತಿತರ ಸ್ವಾತಂತ್ರ ಹೋರಾಟಗಾರರ ನಿಕಟ ಸಂಪರ್ಕದಲ್ಲಿದ್ದೆ. ಮಂಗಳೂರಿನಲ್ಲಿ ನಾವೆಲ್ಲ ಒಟ್ಟಿಗೆ ಸೇರುವಾಗ ಅವರೆಲ್ಲಾ ಸ್ವಾತಂತ್ರ ಹೋರಾಟಗಳಲ್ಲಿ ಪಾಲ್ಗೊಂಡ ಬಗ್ಗೆ ಪರಸ್ಪರ ಮಾತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಇವರ ಪೈಕಿ ಕರುಣಾಕರ ಉಚ್ಚಿಲ ಮತ್ತು ಎಸ್.ಕೆ.ಅಮೀನ್ ಮುಂಬೈಯಲ್ಲಿ ನೆಲೆಸಿ ಬ್ರಿಟಿಷರ ವಿರುದ್ಧ ಕರಪತ್ರಗಳನ್ನು ಹಂಚುತ್ತಿದ್ದರು. ಕರುಣಾಕರ ಅವರು ‘ಕ್ವಿಟ್ ಇಂಡಿಯಾ’ ಚಳವಳಿಯಲ್ಲಿ ಪಾಲ್ಗೊಂಡಿದ್ದರೆಂದು ಅವರೇ ನನಗೆ ತಿಳಿಸಿದ್ದಾರೆ’’ ಎಂದು ಪ್ರಭಾಕರ ಶ್ರೀಯಾನ್ ಹೇಳುತ್ತಾರೆ.

ನೆಹರೂ ಮೈದಾನದಲ್ಲಿ ಪ್ರಥಮ ಸ್ವಾತಂತ್ರಾ ಸಂಭ್ರಮ

1947ರ ಆಗಸ್ಟ್ 14ರಂದು ರಾತ್ರಿ ಭಾರತ ಸ್ವತಂತ್ರವಾದ ಮಾಹಿತಿ ಲಭಿಸಿದೊಡನೆ ಅದೇ ದಿನ ತಡರಾತ್ರಿಯಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿರುವುದಾಗಿ ಅಂದು ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಸ್ವಾತಂತ್ರ ಹೋರಾಟಗಾರರಾದ ಲೋಕಯ್ಯ ಶೆಟ್ಟಿ, ಕೆ.ಕೆ.ಶೆಟ್ಟಿ ಮತ್ತು ರಾಮರಾಜ್ ಕಿಣಿ ತನಗೆ ತಿಳಿಸಿದ್ದರು ಎಂದು ಪ್ರಭಾಕರ ಶ್ರೀಯಾನ್ ಹೇಳಿದರು.

ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಬ್ರಿಟಿಷ್ ಅಧಿಕಾರಿ

ಪ್ರಥಮ ಸ್ವಾತಂತ್ರ ಆಚರಣೆಗೆ ಮಂಗಳೂರಿನಲ್ಲಿ ನಾಗರಿಕರು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಂದಿನ ಮಂಗಳೂರು ಜಿಲ್ಲಾ ಬ್ರಿಟಿಷ್ ಅಧಿಕಾರಿ (ಅಂದಿನ ಡಿಸ್ಟ್ರಿಕ್ಟ್ ಕಲೆಕ್ಟರ್) ಸಂಭ್ರಮಾಚರಣೆಗೆ ಸಹಾಯ ಮಾಡಿದ್ದರು. ಅಲ್ಲದೆ, ನಗರದಲ್ಲಿ ಸಂಭ್ರಮಾಚರಣೆಯ ಅಲಂಕಾರಕ್ಕೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ್ದರೆಂದು ಪ್ರಥಮ ಸ್ವಾತಂತ್ರ ಸಂಭ್ರಮದಲ್ಲಿ ಪಾಲ್ಗೊಂಡವರೇ ತನಗೆ ತಿಳಿಸಿದ್ದರೆಂದು ಅವರು ಹೇಳಿದರು.

ಕುಲಶೇಖರ ಬಿಕರ್ನಕಟ್ಟೆಯಲ್ಲಿ ನೇಣುಗಂಬ
‘‘ಸ್ವಾತಂತ್ರ ಹೋರಾಟಗಳಲ್ಲಿ ಪಾಲ್ಗೊಂಡವರನ್ನು ಕುಲಶೇಖರ ಬಿಕರ್ನಕಟ್ಟೆಯಲ್ಲಿ ಸ್ಥಾಪಿಸಲಾಗಿದ್ದ ನೇಣು ಕಂಬಕ್ಕೆ ಏರಿಸಲಾಗುತ್ತಿತ್ತು. ಬ್ರಿಟಿಷರ ವಿರುದ್ಧದ ವಿವಿಧ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಸ್ವಾತಂತ್ರ ಹೋರಾಟಗಾರರನ್ನು ಬ್ರಿಟಿಷ್ ಅಧಿಕಾರಿಗಳು ಬಂಧಿಸಿ ಕುಲಶೇಖರದಲ್ಲಿದ್ದ ನೇಣು ಕಂಬಕ್ಕೆ ಏರಿಸುತ್ತಿದ್ದರು ಎಂದು ಸ್ವಾತಂತ್ರ ಹೋರಾಟಗಾರರು ತಿಳಿಸುತ್ತಿದ್ದರು’’ ಎಂದು ಪ್ರಭಾಕರ ಶ್ರೀಯಾನ್ ಹೇಳುತ್ತಾರೆ.

ಜನರನ್ನು ಕಾಡುತ್ತಿದ್ದ ಬಡತನ, ನಿರುದ್ಯೋಗ

ಸ್ವಾತಂತ್ರ ಪೂರ್ವದಲ್ಲಿ ಬಡತನ ಮತ್ತು ನಿರುದ್ಯೋಗ ಹೆಚ್ಚಿತ್ತು. ಜೆಪ್ಪುವಿನ ಮಾರ್ಗನ್ಸ್‌ಗೇಟ್‌ನಲ್ಲಿ ಕ್ಯಾಶುನೆಟ್ ಫ್ಯಾಕ್ಟರಿಯೊಂದಿತ್ತು. ಈ ಫ್ಯಾಕ್ಟರಿಯಲ್ಲಿ ಮಂಗಳೂರಿನ ಕೆಲವರಿಗೆ ಮಾತ್ರ ಉದ್ಯೋಗ ದೊರಕುತ್ತಿತ್ತು. ಇಲ್ಲಿಂದ ಹಡಗಿನ ಮೂಲಕ ವಿದೇಶಗಳಿಗೆ ಗೇರುಬೀಜಗಳು ರಫ್ತಾಗುತ್ತಿದ್ದವು. ಫ್ಯಾಕ್ಟರಿಯಲ್ಲಿ ರೆಂಟ್ ಎಂಬ ಬ್ರಿಟಿಷ್ ಅಧಿಕಾರಿಯೊಬ್ಬ ಇದ್ದ. ಆತ ಕಾರ್ಮಿಕರೊಂದಿಗೆ ಉತ್ತಮವಾಗಿ ವರ್ತಿಸುತ್ತಿದ್ದ ಎಂದು ಅವರು ತನ್ನಲ್ಲಿ ಹೇಳುತ್ತಿದ್ದರು. ಇದಲ್ಲದೆ, ಮಾರ್ಗನ್ಸ್‌ಗೇಟ್‌ನಲ್ಲಿ ಇನ್ನೊಂದು ಟೈಲ್ಸ್ ಫ್ಯಾಕ್ಟರಿ ಇತ್ತು. ಈ ಫ್ಯಾಕ್ಟರಿಯನ್ನು ನೋಡಿಕೊಳ್ಳಲು ಅಲ್ಲಿ ಜೆ.ಎಚ್.ಮಾರ್ಗನ್ಸ್ ಎಂಬ ಬ್ರಿಟಿಷ್ ಅಧಿಕಾರಿ ಇದ್ದ. ಈ ಇಬ್ಬರು ಅಧಿಕಾರಿಗಳು ಕೆಲಸ ಕೊಟ್ಟರೆ ಆ ಕುಟುಂಬದ ಖರ್ಚು ನಿರ್ವಹಣೆ ಸಾಧ್ಯವಾಗುತ್ತಿತ್ತು ಎಂದು ತನ್ನ ಸ್ನೇಹಿತರು ಹೇಳುತ್ತಿದ್ದರು. ಮಂಗಳೂರಿನ ಹೆಚ್ಚಿನ ಜನರು ಕೆಲಸಕ್ಕಾಗಿ ಈ ಎರಡು ಪ್ಯಾಕ್ಟರಿಗಳನ್ನು ಅವಲಂಬಿಸಿದ್ದರು. ಅಂದು ಶಿಕ್ಷಣ ಎಂಬುದು ದೂರದ ಮಾತು. ಒಂದೆರಡು ತರಗತಿಗೆ ಹೋಗಿದ್ದರೆ ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸುತ್ತಿದ್ದರು. ಎಸೆಸೆಲ್ಸಿ (11ನೆ ತರಗತಿ) ಪೂರ್ಣಗೊಳಿಸಿದರೆ ಉನ್ನತ ಶಿಕ್ಷಣ ಪಡೆದಷ್ಟು ಮಹತ್ವ ಇತ್ತು. ಜನರಿಗೆ ಶಿಕ್ಷಣದ ಬಗ್ಗೆ ಇದ್ದ ಅಜ್ಞಾನದಿಂದಾಗಿ ಹೆಚ್ಚಿನ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಡುತ್ತಿರಲಿಲ್ಲ ಎಂದು ಪ್ರಭಾಕರ ಶ್ರೀಯಾನ್ ತಿಳಿಸಿದರು.

ಹಿಂದಿನ ರಾಜಕಾರಣಿಗಳಿಗೆ ಜನರ ಕಾಳಜಿ ಮತ್ತು ಜವಾಬ್ದಾರಿ ಇತ್ತು

ಭಾರತದ ಸ್ವಾತಂತ್ರ ಬಳಿಕ ಆಡಳಿತದಲ್ಲಿ ನಿಯತ್ತಿನ ರಾಜಕಾರಣ ಇತ್ತು. ಯಾವ ಪಕ್ಷದವರಾಗಿದ್ದರೂ ಅಂದಿನ ರಾಜಕಾರಣಿಗಳಿಗೆ ಜನರ ಬಗ್ಗೆ ಕಾಳಜಿ ಇತ್ತು. ಜಾತಿ, ಮತ, ಭೇದ ಎಂಬುದು ಇರಲಿಲ್ಲ. ರಾಜಕಾರಣಿಗಳಿಗೆ ತಮ್ಮ ಹೊಣೆಗಾರಿಕೆಯ ಬಗ್ಗೆ ಅರಿವಿತ್ತು. ಮನುಷ್ಯತ್ವ ಇತ್ತು. ಅವರಲ್ಲಿ ಸೌಮ್ಯತೆ ಇತ್ತು. ಆದರೆ ಇಂದಿನದ್ದು ವೈರತ್ವದ ರಾಜಕಾರಣ. ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿಕಟ್ಟುವ ರಾಜಕಾರಣ. ಜಾತಿ, ಧರ್ಮಗಳ ಆಧಾರದಲ್ಲಿ ಜನರ ಒಗ್ಗಟ್ಟನ್ನು ಮುರಿಯುವ ರಾಜಕಾರಣ. ಇಂತಹ ರಾಜಕಾರಣದಿಂದ ಉಜ್ವಲ ಭವಿಷ್ಯದ ಕನಸು ಕಾಣಲು ಸಾಧ್ಯವಿಲ್ಲ ಎಂದು ಪ್ರಭಾಕರ ಶ್ರೀಯಾನ್ ಅಭಿಪ್ರಾಯಪಡುತ್ತಾರೆ

Writer - -ಅಬ್ದುಲ್ ಶುಕೂರ್, ಮಲ್ಪೆ

contributor

Editor - -ಅಬ್ದುಲ್ ಶುಕೂರ್, ಮಲ್ಪೆ

contributor

Similar News