ಎನ್ನಾರೈಗಳಿಗೆ ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ಹೂಡಿಕೆಗೆ ಸುಲಭ ಮಾರ್ಗಗಳು ಇಲ್ಲಿವೆ

Update: 2017-08-15 09:53 GMT

ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ಹಣವನ್ನು ತೊಡಗಿಸಲು ಬಯಸುವ ಅನಿವಾಸಿ ಭಾರತೀಯ(ಎನ್ನಾರೈ)ಗಳಿಗೆ ಇಂತಹ ಹೂಡಿಕೆಗಳನ್ನು ಮಾಡಲು ಅಗತ್ಯವಿರುವ ನಿರ್ವಹಣಾ ಪ್ರಕ್ರಿಯೆಗಳು ಮತ್ತು ದಾಖಲೆಗಳ ಕೆಲಸವನ್ನು ನಿಭಾಯಿಸಲು ತಮಗೆ ಸಾಧ್ಯವೇ ಎಂಬ ಗೊಂದಲ ಕಾಡುವದುಂಟು. ಆದರೆ ಈ ಕೆಲಸವನ್ನು ಸುಗಮವಾಗಿ ಮಾಡಲು ಹಲವಾರು ಮಾರ್ಗಗಳಿವೆ.

ಮ್ಯಾಂಡೇಟ್ ಹೋಲ್ಡರ್ ನೇಮಕ

 ಎನ್ನಾರೈ ಹೂಡಿಕೆದಾರರು ತಮ್ಮ ಎನ್‌ಆರ್‌ಇ ಬ್ಯಾಂಕ್ ಖಾತೆಗಳನ್ನು ಸ್ಥಳೀಯವಾಗಿ ನಿರ್ವಹಿಸಲು ತಮ್ಮಿಂದ ಆದೇಶವನ್ನು ಹೊಂದಿರುವ ಮ್ಯಾಂಡೇಟ್ ಹೋಲ್ಡರ್‌ನನ್ನು ನೇಮಕ ಮಾಡಬಹುದಾಗಿದೆ. ಇದಕ್ಕಾಗಿ ಬ್ಯಾಂಕ್‌ಗಳಲ್ಲಿ ಲಭ್ಯವಿರುವ ‘ಮ್ಯಾಂಡೇಟ್ ಹೋಲ್ಡರ್ ನೇಮಕಾತಿ’ ನಮೂನೆಯನ್ನು ಪಡೆದುಕೊಂಡು ಅದನ್ನು ಭರ್ತಿ ಮಾಡಿ ತಮ್ಮ ಸಹಿ ಹಾಕಬೇಕು. ಮ್ಯಾಂಡೇಟ್ ಹೋಲ್ಡರ್‌ನ ಕೆವೈಸಿ ದಾಖಲೆಗಳು ಮತ್ತು ಮಾದರಿ ಸಹಿಯನ್ನು ನಮೂನೆಯ ಜೊತೆಗೆ ಸಲ್ಲಿಸಬೇಕು.

ಮ್ಯಾಂಡೇಟ್ ಹೋಲ್ಡರ್ ಕೂಡ ನಮೂನೆಯ ಮೇಲೆ ಸಹಿ ಮಾಡಬೇಕಾಗುತ್ತದೆ. ಒಮ್ಮೆ ಈ ಆದೇಶ ನೋಂದಾವಣೆಗೊಂಡಿತೆಂದರೆ ಎನ್ನಾರೈ ಪರವಾಗಿ ಚೆಕ್‌ಗಳನ್ನು ಪಡೆದುಕೊಳ್ಳುವ, ಚೆಕ್‌ಗಳನ್ನು ನೀಡುವ, ಹಣ ಪಾವತಿ ಮಾಡುವ, ಎಟಿಎಂ ಕಾರ್ಡ್ ಬಳಸುವ ಮತ್ತು ಠೇವಣಿಗಳನ್ನು ಮಾಡುವ ಕೆಲಸಗಳನ್ನು ಮ್ಯಾಂಡೇಟ್ ಹೋಲ್ಡರ್ ನಿರ್ವಹಿಸಬಹುದಾಗಿದೆ.

ಪವರ್ ಆಫ್ ಅಟಾರ್ನಿ ತನ್ನ ಪರವಾಗಿ ಕಾರ್ಯ ನಿರ್ವಹಿಸುವ ವ್ಯಕ್ತಿಗೆ ಹೆಚ್ಚಿನ ಸ್ವಾತಂತ್ರವನ್ನು ನೀಡಲು ಆತನ ಪರವಾಗಿ ಪವರ್ ಆಫ್ ಅಟಾರ್ನಿ(ಪಿಒಎ) ಅಥವಾ ಅಧಿಕಾರ ಪತ್ರವನ್ನು ಎನ್ನಾರೈ ನೀಡಬಹುದು. ಪಿಒಎ ಅನ್ನು ನಿಗದಿತ ಸ್ಟಾಂಪ್ ಪೇಪರ್‌ನಲ್ಲಿ ಸಿದ್ಧಗೊಳಿಸಬೇಕು ಮತ್ತು ಅದರ ಉದ್ದೇಶವನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು. ಈ ಅಧಿಕಾರ ಪತ್ರ ಹೊಂದಿದ ವ್ಯಕ್ತಿ ಎನ್ನಾರೈ ಪರವಾಗಿ ಹೂಡಿಕೆಯನ್ನು ಮಾಡಬಹುದು ಅಥವಾ ಅದನ್ನು ವಾಪಸ್ ಪಡೆಯಬಹುದು ಮತ್ತು ಅಗತ್ಯ ಕಾಗದ ಪತ್ರಗಳ ಕಾರ್ಯವನ್ನು ನಿರ್ವಹಿಸಬಹುದು.

ಆನ್‌ಲೈನ್ ಹೂಡಿಕೆ

ಎನ್ನಾರೈ ಹೂಡಿಕೆ ಪ್ರಕ್ರಿಯೆಯನ್ನು ಸ್ವತಃ ನಿರ್ವಹಿಸಲು ಬಯಸಿದರೆ ಬೇರೊಬ್ಬರಿಗೆ ಅಧಿಕಾರ ನೀಡುವ ಬದಲು ಆನ್‌ಲೈನ್ ಟ್ರೇಡಿಂಗ್ ಪೋರ್ಟಲ್‌ಗಳಲ್ಲಿ ಸ್ವತಃ ವಹಿವಾಟುಗಳನ್ನು ಸುಲಲಿತವಾಗಿ ನಡೆಸಬಹುದಾಗಿದೆ. ಎನ್ನಾರೈ ಹೂಡಿಕೆದಾರರಿಗಾಗಿ ಬ್ರೋಕರ್‌ಗಳಲ್ಲಿ ಟ್ರೇಡಿಂಗ್ ಪೋರ್ಟಲ್‌ಗಳು ಲಭ್ಯವಿದ್ದು, ಅಂತಹ ಬ್ರೋಕರ್‌ಗಳ ಬಳಿ ಟ್ರೇಡಿಂಗ್ ಖಾತೆಗಳನ್ನು ತೆರೆದ ಬಳಿಕ ವಹಿವಾಟುಗಳನ್ನು ನೇರವಾಗಿ ನಡೆಸಬ ಹುದು.

ಗಮನಿಸಬೇಕಾದ ಅಂಶಗಳು

ಮ್ಯಾಂಡೇಟ್ ಹೋಲ್ಡರ್ ಖಾತೆಯ ಮೇಲೆ ಪಡೆಯಬಹುದಾದ ಸಾಲಕ್ಕೆ ಗರಿಷ್ಠ ಮಿತಿಯನ್ನು ಎನ್ನಾರೈ ಖಾತೆದಾರರು ನಿಗದಿಗೊಳಿಸಬಹುದು.

ಪಿಒಎ ಮೂಲಕ ಹೂಡಿಕೆ ಮಾಡುವಾಗ ಪಿಒಎ ಹೊಂದಿರುವ ವ್ಯಕ್ತಿಯ ಕೆವೈಸಿ ದಾಖಲೆಗಳ ಜೊತೆಗೆ ನೋಟರಿಯ ಸಹಿ ಹೊಂದಿರುವ ಪಿಒಎದ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ. ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಕಾಲಮಾನಗಳು ವಿಭಿನ್ನವಾಗಿರುವುದರಿಂದ ಟ್ರೇಡಿಂಗ್ ಪೋರ್ಟಲ್‌ಗಳ ಮೂಲಕ ಹೂಡಿಕೆಗಳನ್ನು ಮಾಡುವುದು ಎನ್ನಾರೈಗಳಿಗೆ ಕಷ್ಟವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News