ಸ್ವಾತಂತ್ರ್ಯ ದಿನಾಚರಣೆಯ ಪ್ರಧಾನಿ ಮೋದಿ ಭಾಷಣ ನಿರಾಶಾದಾಯಕ: ವಿರೋಧ ಪಕ್ಷ

Update: 2017-08-15 16:21 GMT

ಹೊಸದಿಲ್ಲಿ, ಆ. 15: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ ದಿನಾಚರಣೆ ಭಾಷಣವನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ. ಕಾಂಗ್ರೆಸ್ ನಿರಾಶಾದಾಯಕ ಎಂದು ಹೇಳಿದರೆ, ಎಡಪಕ್ಷಗಳು ರೋಚಕವಲ್ಲ ಎಂದು ಹೇಳಿದೆ.

ಕಾಂಗ್ರೆಸ್‌ನ ಹಿರಿಯ ವಕ್ತಾರ ಆನಂದ್ ಶರ್ಮಾ, ಉತ್ತರಪ್ರದೇಶದಲ್ಲಿ ಸಂಭವಿಸಿದ ಮಕ್ಕಳ ಸಾವನ್ನು ಪ್ರಾಕೃತಿಕ ವಿಕೋಪಕ್ಕೆ ಹೋಲಿಸುವ ಮೂಲಕ ಮೋದಿ ಅವರು ದುರಂತದ ಬಗ್ಗೆ ಸೂಕ್ಷ್ಮತೆ ಪ್ರದರ್ಶಿಸಿಲ್ಲ. ಉತ್ತರಪ್ರದೇಶ ಸರಕಾರದ ವಿಫಲತೆ ಬಗ್ಗೆ ಅವರು ಉಲ್ಲೇಖಿಸಬೇಕಿತ್ತು ಎಂದರು.

 ಪ್ರಧಾನಿ ಅವರ   ಸ್ವಾತಂತ್ರ್ಯ ದಿನಾಚರಣೆ ಭಾಷಣ ನಿರಾಶಾದಾಯಕ ವಾಗಿತ್ತು. ಜನರಿಗೆ ಮುಖ್ಯವಾಗಿ ರೈತರು, ಯುವಕರು ಹಾಗೂ ದುರ್ಬಲ ವರ್ಗದವರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸರಕಾರ ವಿಫಲವಾಗಿರುವುದರ ಬಗ್ಗೆ ಅವರು ವಿವರ ನೀಡಬೇಕಿತ್ತು ಎಂದು ಅವರು ಹೇಳಿದರು.

ಕಲಹ ಸಂತ್ರಸ್ತ ಕಾಶ್ಮೀರಿಗಳನ್ನು ಅಪ್ಪಿಕೊಳ್ಳಬೇಕು ಎಂಬ ಮೋದಿ ಅವರು ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಶರ್ಮಾ, ಕಾಶ್ಮೀರಿಗಳನ್ನು ಅಪ್ಪಿಕೊಳ್ಳುವುದನ್ನು ಅವರು ನಿಲ್ಲಿಸಬೇಕು ಎಂದು ನಾವು ಎಂದಿಗೂ ಹೇಳುವುದಿಲ್ಲ. ಅವರು ಎಲ್ಲ ವರ್ಗದವರೊಂದಿಗೆ ಮಾತುಕತೆ ನಡೆಸಬೇಕು ಹಾಗೂ ರಾಷ್ಟ್ರದಲ್ಲಿ ಹಾಗೂ ಕಾಶ್ಮೀರದಲ್ಲಿ ಒಮ್ಮತ ಮೂಡಿಸಬೇಕು ಎಂದರು.

  ಸರಕಾರ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದೆ ಎಂಬ ಮೋದಿ ಅವರ ಪ್ರತಿಪಾದನೆಗೆ ಪ್ರತಿಕ್ರಿಯಿಸಿದ ಅವರು, ಮೂರು ವರ್ಷಗಳಲ್ಲಿ ಲೋಕಪಾಲರನ್ನು ಯಾಕೆ ನಿಯೋಜಿಸಿಲ್ಲ ಎಂಬುದನ್ನು ದೇಶ ಪ್ರಶ್ನಿಸಬೇಕು. ಲೋಕಪಾಲರನ್ನು ನೇಮಕ ಮಾಡದಿರುವುದಕ್ಕೆ, ಭ್ರಷ್ಟಾಚಾರ ವಿರೋಧಿ ಕಾನೂನು ಹಾಗೂ ಆರ್‌ಟಿಐಯನ್ನು ದುರ್ಬಲಗೊಳಿಸಿರುವುದಕ್ಕೆ ಅವರು ಉತ್ತರದಾಯಿಯಾಗಬೇಕು ಎಂದು ಅವರು ಹೇಳಿದರು.

ಮೋದಿ ಭಾಷಣದಲ್ಲಿ ಅದ್ಭುತವಾದುದು ಏನೂ ಇರಲಿಲ್ಲ. ಕಾಶ್ಮೀರಿಗಳನ್ನು ಅಪ್ಪಿಕೊಳ್ಳುವ ಅವರಲ್ಲಿ ಬದ್ಧತೆಯ ಕೊರತೆ ಇದೆ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ. ರಾಜಾ ಹೇಳಿದರು.

ವಿವಾದಕ್ಕೆ ಸೇನಾ ಕಾರ್ಯಾಚರಣೆಯೇ ಪರಿಹಾರ ಎಂಬುದು ಸರಕಾರದ ನಂಬಿಕೆ. ಆದರೆ, ಅವರು ಕಾಶ್ಮೀರಿಗಳನ್ನು ಅಪ್ಪಿಕೊಳ್ಳುವ ಬಗ್ಗೆ ಮಾತನಾಡುತ್ತಾರೆ ಎಂದು ಅವರು ಹೇಳಿದರು.

 ಗೋರಕ್ಷಣೆ ಹೆಸರಲ್ಲಿ ಹಿಂಸಾಚಾರ ಸ್ವೀಕಾರಾರ್ಹವಲ್ಲ ಎಂಬ ಮೋದಿ ಅವರ ಪ್ರತಿಪಾದನೆಯನ್ನು ಉಲ್ಲೇಖಿಸಿದ ರಾಜಾ, ಆರೆಸ್ಸೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಕೋಮು ಹಿಂಸಾಚಾರ ನಿಲ್ಲಿಸುವಂತೆ ಪ್ರಧಾನಿ ಅವರು ಮನವಿ ಮಾಡಬೇಕಿತ್ತು. ಪ್ರಧಾನಿ ಅವರು ಹೇಳಿದ್ದನ್ನು ಆರೆಸ್ಸೆಸ್ ಹಾಗೂ ಬಿಜೆಪಿಯವರು ಗಂಭೀರವಾಗಿ ಅನುಸರಿಸಬೇಕಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News