ಡಾ. ಕಫೀಲ್ ಆಮ್ಲಜನಕ ಸಿಲಿಂಡರ್ ಕಳ್ಳಸಾಗಣೆ ಮಾಡಿದರು ಎಂಬ ಆರೋಪದ ಸತ್ಯಾಸತ್ಯತೆ ಇಲ್ಲಿದೆ

Update: 2017-08-15 16:53 GMT

ಉತ್ತರ ಪ್ರದೇಶ, ಆ.15: ಗೋರಖ್ ಪುರ ದುರಂತದಲ್ಲಿ ಹಲವು ಮಕ್ಕಳ ಜೀವ ಉಳಿಸಿದರು ಎಂದು ಸುದ್ದಿಯಾದ ಬೆನ್ನಿಗೆ ಡಾ. ಕಫೀಲ್ ಖಾನ್ ವಿರುದ್ಧ ಕರ್ತವ್ಯ ಲೋಪ ಹಾಗು ಭ್ರಷ್ಟಾಚಾರದ ಆರೋಪ ಕೇಳಿ ಬಂತು. ಡಾ. ಕಫೀಲ್ ಆಮ್ಲಜನಕ ಸಿಲಿಂಡರ್ ಕಳ್ಳಸಾಗಣೆ ಮಾಡಿದರು ಎಂಬ ಆರೋಪದ ಬಗ್ಗೆ ಹಿರಿಯ ಪತ್ರಕರ್ತ ಅಜಿತ್ ಸಾಹಿ ಮಾಹಿತಿ ಕಲೆ ಹಾಕಿ ನೀಡಿರುವ ವರದಿ ಇಲ್ಲಿದೆ.

“ನಾನು ಈಗಷ್ಟೇ ಗೋರಖ್ ಪುರದ ಪತ್ರಕರ್ತ ಮನೋಜ್ ಸಿಂಗ್ ಗೆ ಕರೆ ಮಾಡಿ ಮಾತನಾಡಿದೆ. ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯ ಬಗ್ಗೆ ಅವರು ಗೋರಖ್ ಪುರ ದುರಂತದ ಮೊದಲೇ ಎಚ್ಚರಿಸಿದ್ದರು. ಡಾ.ಕಫೀಲ್ ಅಹ್ಮದ್ ಆಕ್ಸಿಜನ್ ಸಿಲಿಂಡರ್ ಗಳನ್ನು ಕದ್ದು ತಮ್ಮ ಖಾಸಗಿ ಆಸ್ಪತ್ರೆಗೆ ಸಾಗಿಸುತ್ತಿದ್ದಾರೆ ಎನ್ನುವ ಬಿಜೆಪಿ ಪರ ಶಕ್ತಿಗಳು ಮಾಡಿರುವ ಆರೋಪಗಳು ಸತ್ಯವೇ ಎಂದು ನಾನವರಲ್ಲಿ ಕೇಳಿದೆ.

ಈ ಸಂದರ್ಭ ಮನೋಜ್ ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಿದರು. 2014ರಿಂದ ಮೆದುಳುಜ್ವರದ ವಾರ್ಡ್ ಸಣ್ಣ ಸಿಲಿಂಡರ್ ಗಳನ್ನು ಬಳಸುವುದನ್ನು ನಿಲ್ಲಿಸಿತ್ತು ಹಾಗೂ ಬದಲಾಗಿ ಪ್ರತಿ ಬೆಡ್ ಗೆ ಪ್ರತ್ಯೇಕ ಪೈಪ್ ಮೂಲಕ ಗ್ಯಾಸ್ ಸರಬರಾಜು ವ್ಯವಸ್ಥೆ ಮಾಡಿದೆ ಎಂದವರು ಹೇಳಿದರು. ಗೋರಖ್ ಪುರದ ಪ್ರಸಿದ್ಧ ವೈದ್ಯರಲ್ಲೊಬ್ಬರಾದ ಡಾ. ಅಝೀಝ್ ಅಹ್ಮದ್ ಜೊತೆಗೂ ನಾನು ಮಾತನಾಡಿದೆ. ಅವರೂ ಈ ವಿಷಯವನ್ನು ದೃಢಪಡಿಸಿದರು. ಪೈಪ್ ಮೂಲಕ ಗ್ಯಾಸ್ ಸರಬರಾಜಿಗಾಗಿ ಮೆದುಳುಜ್ವರ ವಾರ್ಡ್ ನಲ್ಲಿ ಅಳವಡಿಸಲಾಗಿದ್ದ ಸಿಲಿಂಡರ್ ಗಳು ಸಾಮಾನ್ಯ ಸಿಲಿಂಡರ್ ಗಳಿಗಿಂತ ಹೆಚ್ಚು ಭಾರವಾಗಿತ್ತು ಹಾಗೂ ಅವುಗಳನ್ನು ಹೊರಲು 3ರಿಂದ 4 ಜನರು ಬೇಕಾಗುತ್ತಿತ್ತು. ಆಸ್ಪತ್ರೆಯ ಆಡಳಿತವು ಪ್ರತಿಯೊಂದು ಸಿಲಿಂಡರ್ ಗಳ ಲೆಕ್ಕವನ್ನು ದಾಖಲಿಸುತ್ತಿತ್ತು. ಎಲ್ಲಾ ರೀತಿಯ ಹೊರಹೋಗುವ ಹಾಗು ಒಳಬರುವ ವಸ್ತುಗಳ ಮಾಹಿತಿಗಳು ಆಸ್ಪತ್ರೆಯ ದಾಖಲೆಗಳಲ್ಲಿ ಲಭ್ಯವಿದೆ. ಯಾವುದೇ ಕಾರಣಕ್ಕೂ ಇಂತಹ ಬೃಹತ್ ಸಿಲಿಂಡರ್ ಗಳನ್ನು ದಿನಂಪ್ರತಿ ಕದ್ದೊಯ್ಯಲು ಡಾ. ಕಫೀಲ್ ಅಹ್ಮದ್ ರಿಗೆ ಸಾಧ್ಯವೇ ಇಲ್ಲ. ಅಲ್ಲದೆ ಹಾಗೆ ನಡೆದಿದ್ದರೆ ಸ್ಟೋರ್ ನಿಂದ ಹೊರಗಿನ ಭದ್ರತಾ ಗೇಟ್ ವರೆಗೆ ಅದನ್ನು ಕೊಂಡೊಯ್ಯುವಾಗ  ಯಾರೂ ನೋಡದೇ ಇರಲೂ ಸಾಧ್ಯವಿಲ್ಲ.

ಡಾ.ಕಫೀಲ್ ಅವರು ಅಲ್ಲಿಗೆ ತಾತ್ಕಾಲಿಕ ನೇಮಕಾತಿಯಾಗಿದ್ದರು. ಹಾಗಾಗಿ ಅವರು ಖಾಸಗಿ ಕೆಲಸಗಳನ್ನು ಮಾಡಲು ಸಾಧ್ಯವೇ ಇಲ್ಲ. ಅಲ್ಲದೆ, ಆಕ್ಸಿಜನ್ ಸರಬರಾಜು ಘಟಕದೊಂದಿಗೆ ಅವರಿಗೆ ಯಾವುದೇ ಸಂಪರ್ಕವೂ ಇಲ್ಲ. ಆಕ್ಸಿಜನ್ ಸರಬರಾಜು ಘಟಕ ಮಾಹಿತಿ ನೀಡಿದಾಗಲೇ ಅವರಿಗೆ ಆಕ್ಸಿಜನ್ ಕೊರತೆಯ ಬಗ್ಗೆ ತಿಳಿದುಬಂದಿತ್ತು ಎಂದು ಅಝೀಝ್ ಅಹ್ಮದ್ ಹೇಳಿದರು” ಎಂದು ಅಜಿತ್ ಸಾಹಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News