ಸಾಮಾಜಿಕ ಕಟ್ಟು ಪಾಡುಗಳನ್ನು ಮೀರಿದ ಪ್ರಕೃತಿ ಸಹಜ ಸಂಬಂಧ

Update: 2017-08-16 06:22 GMT

ಕಾಟಿಪಳ್ಳ, ಕೃಷ್ಣಾಪುರದಲ್ಲಿ ಒಟ್ಟು ಸಮಾಜವನ್ನು ಜಾತಿ, ಧರ್ಮಗಳ ಭೇದ ಇಲ್ಲದೆ ಗ್ರಹಿಸುವಲ್ಲಿ, ಇಲ್ಲಿನ ವ್ಯವಸ್ಥೆಗಳಲ್ಲಿ ಕಂಡ ವಿಶೇಷತೆಗಳನ್ನು ಅಂದರೆ ಕೌಟುಂಬಿಕ ಸಮಾಜವನ್ನು ನೋಡಿದಾಗ ಮೇಲ್ನೋಟಕ್ಕೆ ಆಶ್ಚರ್ಯವಾಗಿತ್ತು. ವರ್ಣಸಂಕರ, ಜಾತಿಸಂಕರಗಳನ್ನು ವಿರೋಧಿಸುವ ಈ ವರ್ತಮಾನ ಕಾಲದಲ್ಲಿಯೂ ವರ್ಣಸಂಕರ, ಜಾತಿಸಂಕರಗಳು ನಡೆಯುತ್ತಲೇ ಇರುವುದೂ ಕೂಡಾ ವಾಸ್ತವವೇ. ಇದು ಪ್ರಕೃತಿ ಸಹಜವಾದ ಕ್ರಿಯೆ ಎನ್ನುವಷ್ಟೇ ಸತ್ಯ, ಜಾತಿ, ವರ್ಣ, ಧರ್ಮಗಳು ಮನುಷ್ಯ ನಿರ್ಮಿತ ಎನ್ನುವುದು ಕೂಡಾ. ಇದರ ಅರ್ಥ ಜಾತಿ, ಧರ್ಮಗಳು ಬೇಡವೆಂದಲ್ಲ. ಆದರೆ ಸಾಮಾಜಿಕ ಕಟ್ಟು ಪಾಡುಗಳು ಮನುಷ್ಯನ ಜೀವಕ್ಕೆ ಬೆಲೆ ಕೊಡಬೇಕಾಗುವುದು ಧರ್ಮಕ್ಕಿಂತ ಮೇಲಾದ ಮನುಷ್ಯ ಧರ್ಮ. ಮನುಷ್ಯನ ಇತಿಹಾಸವನ್ನು ಅಧ್ಯಯನ ಮಾಡಿದಾಗ, ಯಾವ ಕಾಲದಲ್ಲೂ, ಯಾವ ಜನಾಂಗದಲ್ಲೂ, ಯಾವ ದೇಶದಲ್ಲೂ ವಿವಾಹ ವ್ಯವಸ್ಥೆಯ ಕಟ್ಟು ಪಾಡುಗಳು ನಾಗರಿಕತೆಯ ಲಕ್ಷಣಗಳಾಗಿ ಗೋಚರಿಸಿರುವುದು ಸತ್ಯ. ಆದ್ದರಿಂದ ನಾಗರಿಕತೆಯ ಪೂರ್ವದಲ್ಲಿದ್ದವರು ಅನಾಗರಿಕರು ಎಂಬು ಶಬ್ದ ಪ್ರಯೋಗದಲ್ಲಷ್ಟೇ ಹೊರತು ಅವರು ನಿಜವಾದ ಮನುಷ್ಯರು ಎಂದು ನಾಗರಿಕತೆಯ ತುತ್ತ ತುದಿಯಲ್ಲಿರುವ ಈ ಕಾಲದಲ್ಲಿ ಹೇಳಬೇಕಾಗಿ ಬಂದಿರುವುದು ಕಾಲದ ವಿಪರ್ಯಾಸವೋ ಅಥವಾ ಪ್ರಾಕೃತಿಕ ಸತ್ಯವೋ ಎಂಬ ಪ್ರಶ್ನೆ ಉಂಟಾಗಿರುವುದಂತೂ ವಾಸ್ತವ. ಈ ಹಿನ್ನೆಲೆಯಲ್ಲಿ ಅಂದು ನಾನು ಕಂಡ ವಿಷಯಗಳನ್ನು ನೆನಪಿಸಿಕೊಳ್ಳುತ್ತೇನೆ.

ಮೇಲ್ಜಾತಿಯ ಪುರುಷರು ವಯಸ್ಸಿನಲ್ಲಿ ಸಾಕಷ್ಟು ಹಿರಿಯರಾದವರು ತಮ್ಮ ಎರಡನೆ ಹೆಂಡತಿಯಾಗಿ ಇಟ್ಟುಕೊಂಡವರೋ, ಕಟ್ಟಿಕೊಂಡವರೋ ಅಥವಾ ಮದುವೆ ಆದವರೋ, ಏನೇ ಅದರೂ ಹೆಂಡತಿಯಾಗಿ ಇದ್ದವರನ್ನು ಗಮನಿಸಿದಲ್ಲಿ ಅವರು ಸ್ವಜಾತಿಯವರಾಗಿರದೆ ಸಮಾಜ ಅಂದು ಭಾವಿಸಿಕೊಂಡಂತೆ ಕೆಳ ಜಾತಿಯವರು, ಶೂದ್ರರು ಇದ್ದುದನ್ನು ನೋಡಿದೆ. ಆಂತಹ ಪುರುಷರಿಗೆ ಒಟ್ಟು ಸಮಾಜದಲ್ಲಿ ಇದ್ದ ಮನ್ನಣೆ, ಗೌರವ ಏನೂ ಕಡಿಮೆಯಾಗಿರಲಿಲ್ಲ. ಆದರೆ ಆ ಹೆಂಡತಿ, ತಾಯಿಯಾಗಿ ಪಡೆದ ಮಕ್ಕಳ ಮನಸ್ಥಿತಿ ಮಾತ್ರ ಕೀಳರಿಮೆಯಲ್ಲಿದ್ದುದನ್ನು ಗಮನಿಸಿದ್ದೇನೆ. ಪುರುಷ ಪ್ರಧಾನ ವ್ಯವಸ್ಥೆಯನ್ನು ಒಪ್ಪಿಕೊಂಡ ಈ ಜಾತಿಯ ತಂದೆ ತನ್ನ ಈ ಹೆಂಡತಿ ಮಕ್ಕಳಿಗೆ ಆಸ್ತಿ ಕೊಟ್ಟಿರಬಹುದು. ವಿದ್ಯೆ ನೀಡಿರಬಹುದು. ಆದರೆ ಜಾತಿಯ ಸ್ಥಾನಮಾನವನ್ನು ನೀಡಲಾಗಿರಲಿಲ್ಲ. ಆ ಹೆಂಡತಿಯರಾದರೋ ಅಥವಾ ಮಕ್ಕಳಾದರೋ ತನ್ನ ಗಂಡನನ್ನು ಅಥವಾ ತಮ್ಮ ತಂದೆಯನ್ನು ಮಾತ್ರ ಅವರ ವೃದ್ಧಾಪ್ಯದಲ್ಲಿ ನೋಡಿಕೊಂಡದ್ದು ಆಸ್ತಿಗಾಗಿ ಮಾತ್ರ ಎಂದು ಭಾವಿಸಲಾರೆ. ಅದು ಹೆಣ್ಣಿನ ತಾಯ್ತನದ ಪೋಷಣೆಯ ಗುಣ ಎಂದೇ ತಿಳಿಯುತ್ತೇನೆ. ಆದರೆ ಇದೇ ತಾಯಂದಿರು ಅಥವಾ ಮಕ್ಕಳು ಮಾತ್ರ ಇತರರಲ್ಲಿ ಜಾತಿ ಭೇದವನ್ನು ಗುರುತಿಸುವ ಮನಸ್ಥಿತಿ ಇರುವುದನ್ನು ಕಂಡು ಆಶ್ಚರ್ಯಪಟ್ಟಿದ್ದೇನೆ. ಈ ಜಾತಿ ಭೇದದ ಸ್ವಭಾವ ಮನುಷ್ಯನ ವಯಸ್ಸಿನ ಹಿರಿತನಕ್ಕೂ ಬೆಲೆ ಕೊಡುತ್ತಿರಲಿಲ್ಲ. ತಮಗಿಂತ ವಯಸ್ಸಿನಲ್ಲಿ ಹಿರಿಯರಾದ ಗಂಡಸರನ್ನೂ, ಹೆಂಗಸರನ್ನೂ ಏಕವಚನದಲ್ಲಿ ಸಂಬೋಧಿಸುವುದನ್ನು ಕೇಳಿ ಅವರ ಅವಿವೇಕತನಕ್ಕೆ ಮನಸ್ಸಿನೊಳಗೆ ಮರುಕಪಟ್ಟಿದ್ದೇನೆ. ಇದು ಮನೆಯೊಳಗೇ ಇರುವ ಹೆಂಗಸರ ವರ್ತನೆ ಮಾತ್ರವಾಗಿರದೆ, ಉದ್ಯೋಗಿ ಮಹಿಳೆಯರ; ಅವರ ಮನೆಯ ಚಿಕ್ಕ ಮಕ್ಕಳ ವರ್ತನೆಯೂ ಹಾಗಿದ್ದುದು ಈ ಊರು ಇನ್ನೂ ಸ್ವಾತಂತ್ರ ಪೂರ್ವ ಕಾಲದಲ್ಲಿದೆ ಎಂದು ಅನ್ನಿಸುತ್ತಿತ್ತು. ಹಾಗೆಯೇ ಸುಸಂಸ್ಕೃತರಾದ ವಿದ್ಯಾವಂತರ ಮನೆಯ ಚಿಕ್ಕ ಮಕ್ಕಳೂ ಅಬ್ರಾಹ್ಮಣರನ್ನು ಏಕವಚನದಲ್ಲೇ ಸಂಬೋಧಿಸುತ್ತಿದ್ದರು.

ಇನ್ನು ಅಬ್ರಾಹ್ಮಣರ ಅಥವಾ ಶೂದ್ರರ ವಿಷಯಕ್ಕೆ ಬಂದಾಗ ಇಲ್ಲಿ ಹೆಣ್ಣುಗಳೇ ಹೆಚ್ಚು ಧೈರ್ಯವಂತರು ಅನ್ನಿಸುತ್ತಿತ್ತು. ಇದಕ್ಕೆ ಬಹು ಮುಖ್ಯ ಕಾರಣ ಈ ಶೂದ್ರರೆನ್ನುವವರು ತುಳು ಸಂಸ್ಕೃತಿಯ ಅಳಿಯಕಟ್ಟಿನ, ಮಾತೃ ಪ್ರಧಾನ ವ್ಯವಸ್ಥೆಯವರಾಗಿದ್ದುದೇ ಕಾರಣವಾಗಿರಬಹುದು. ಯಾವುದೇ ಕಾರಣಗಳಿರಬಹುದು. ಗಂಡನನ್ನು ಒಲ್ಲದೆ ಅಥವಾ ಗಂಡನ ಮನೆಯವರಿಗೆ ಒಗ್ಗಿಕೊಳ್ಳಲಾಗದೆ ಮಕ್ಕಳೊಂದಿಗೆ ತವರು ಸೇರಿದ ಹೆಂಗಸರು ಇದ್ದರು. ಇವರನ್ನು ಯಾವುದೇ ಕಾರಣಕ್ಕೆ ತಾಯಿ ತಂದೆಯರಾಗಲೀ, ಅಣ್ಣ ತಮ್ಮಂದಿರಾಗಲೀ ಬಿಟ್ಟು ಹಾಕುವ ಸಂದರ್ಭಗಳು ಇರಲಿಲ್ಲ. ಆ ಹೆಂಗಸರು ತಾವು ದುಡಿಯುತ್ತಿರುವುದು ಅನಿವಾರ್ಯವಾದರೂ ತವರಿನ ಆಶ್ರಯ ಅವರಿಗೆ ನೆಮ್ಮದಿ ನೀಡಿತ್ತು. ಇನ್ನು ಕೆಲವು ಹೆಂಗಸರು ಮೊದಲ ಗಂಡನನ್ನು ಕಳಕೊಂಡು ಎರಡನೆ ವಿವಾಹದ ಬಂಧನ ಇದ್ದೋ ಅಥವಾ ಇಲ್ಲದೆಯೋ ಪುರುಷ ಸಂಗಾತಿಯ ಜೊತೆಗೆ ಯಾವುದೇ ಕೀಳರಿಮೆ ಇಲ್ಲದೆ ಬದುಕುತ್ತಿದ್ದುದು, ತನ್ನ ಮೊದಲ ಗಂಡನ ಮಕ್ಕಳನ್ನೂ ಪೋಷಿಸುತ್ತಿದ್ದುದು ಕೂಡಾ ತಾಯ್ತನದ ಗುಣವೇ ಆಗಿತ್ತು. ಹಾಗೆಯೇ ತಾನು ಎರಡನೆ ವಿವಾಹವಾಗಿ ಅಥವಾ ಎರಡನೆ ಪುರುಷ ಸಂಗಾತಿಯೊಂದಿಗೆ ಇದ್ದು ಮಕ್ಕಳನ್ನು ಪಡೆದ ಹಿರಿಯ ವಯಸ್ಸಾದ ಮಹಿಳೆಯರು ತಮ್ಮ ಮೊದಲ ಗಂಡನ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳು ತನ್ನಂತೆಯೇ ಮೊದಲ ಗಂಡನನ್ನು ತ್ಯಜಿಸಿದಾಗ ಅವರನ್ನು ಕ್ಷಮಿಸದೆ ಇದ್ದುದು ಕೂಡಾ ಇತ್ತು. ಇವೆಲ್ಲವುಗಳ ಜೊತೆಗೆ ಶೂದ್ರ ಜಾತಿಯೊಳಗೆ ಪರಸ್ಪರ ಜಾತಿ ಕಟ್ಟು ಮೀರಿ ಮದುವೆಯಾದ ಕುಟುಂಬಗಳೂ ಇದ್ದುವು. ಇಂತಹ ಎಲ್ಲಾ ಹಿನ್ನೆಲೆಗಳ ಜನರು ಕೂಡಾ ತಮ್ಮ ತಮ್ಮೆಳಗೆ ಜಾತೀಯತೆಯ ಆಚರಣೆಗಳನ್ನು ನಂಬುತ್ತಿದ್ದರು. ಜಾತೀಯತೆ ಇಲ್ಲದಿದ್ದುದು ನಶ್ಯ ಬೇಡಿ ಪಡೆವಾಗ ಮತ್ತು ವೀಳೆಯದೆಲೆ ಅಡಿಕೆ ಮೆಲ್ಲುವಾಗ ಮಾತ್ರ. ಈ ಸಂದರ್ಭಗಳಲ್ಲಿ ಜಾತಿ ಭೇದ ಮಾತ್ರವಲ್ಲ, ಲಿಂಗಭೇದವೂ ಇರುತ್ತಿರಲಿಲ್ಲ. ಆದ್ದರಿಂದ ಇವೆರಡೂ ದುಶ್ಚಟಗಳಾದರೂ ಜನರನ್ನು ಬೆಸೆಯುವಲ್ಲಿ ಮಾಡಿದ ಸಾಧನೆ ವಿಶೇಷವಾದುದೇ.

ಬಹಳಷ್ಟು ಸಂಖ್ಯೆಯಲ್ಲಿ ಜಾತಿ ಸಂಕರಗಳ ಕುಟುಂಬಗಳನ್ನು ನಾನು ಇಲ್ಲಿ ಕಂಡಂತೆ ಈ ಹಿಂದೆ ಕಂಡಿರಲಿಲ್ಲ. ಇಲ್ಲಿ ವಿದ್ಯಾವಂತ ಮುಸ್ಲಿಮರು ವಿದ್ಯಾವಂತ ಹಿಂದೂ ಉದ್ಯೋಗಿ ಮಹಿಳೆಯರನ್ನು ಮದುವೆಯಾಗಿದ್ದವರೂ ಇದ್ದರು. ಮುಸ್ಲಿಮರಿಗೆ ಬಹುಪತ್ನಿತ್ವ ಅವರ ನಂಬಿಕೆಯ ಆಚರಣೆ ಎನ್ನುವುದು ಕಡ್ಡಾಯ ಅಲ್ಲ ಎಂದು ಇದ್ದಂತೆಯೇ ಪತ್ನಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಸಮಾನರಾಗಿ ಕಾಣಬೇಕು ಎಂಬ ನಿಯಮವೂ ಇದೆ ಎಂದು ತಿಳಿದಿದ್ದೇನೆ. ಹಾಗೆಯೇ ಈ ಉದ್ಯೋಗಿ ಮಹಿಳೆಯರು ನನ್ನ ಬಸ್ಸು ಪ್ರಯಾಣದ ಜೊತೆಗಾತಿಯರು. ಮಂಗಳೂರಿಗೆ ಬರುತ್ತಿದ್ದವರು. ವಿಧವೆಯಾಗಿ ಅನಾಥಳಾಗಿದ್ದ ಹಿಂದೂ ಮಹಿಳೆಯೂ ಮುಸ್ಲಿಂ ಮನೆಯ ಆಶ್ರಯದಲ್ಲಿದ್ದುದನ್ನು ತಿಳಿದಿದ್ದೇನೆ. ಆಕೆಯೂ ತನಗೆ ತಿಳಿದಿದ್ದ ಅಡುಗೆ ಕೆಲಸ ಮಾಡಲು ಯಾರ ಅಡ್ಡಿಯೂ ಇರಲಿಲ್ಲ. ರಾಜಕೀಯದಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದ ಮುಸ್ಲಿಂ ಪುರುಷನಿಗೆ ಸ್ವಧರ್ಮದ ಪತ್ನಿಯಲ್ಲದೆ ಕ್ರಿಶ್ಚಿಯನ್ ಧರ್ಮದ ಪತ್ನಿ ಇದ್ದು ಆಕೆ ಚರ್ಚ್‌ಗೆ ಪ್ರಾರ್ಥನೆಗೆ ಹೋಗುತ್ತಿದ್ದುದನ್ನು ಯಾರೂ ತಡೆಯುತ್ತಿರಲಿಲ್ಲ. ಹೀಗೆ ಒಂದರ್ಥದಲ್ಲಿ ಸಾಮಾಜಿಕವಾದ ಸಹಬಾಳ್ವೆಗೆ ಯಾರ ಅಡ್ಡಿಯೂ ಮೇಲ್ನೋಟಕ್ಕೆ ಕಾಣುತ್ತಿರಲಿಲ್ಲ. ಆದರೆ ಆಡಿಕೊಳ್ಳುವ ಹೆಂಗಸರ ಚಪಲ ನಾಲಗೆಗಳು ಗುಸುಗುಸು ಪಿಸುಪಿಸು ಮಾತಾಡಿಕೊಂಡದ್ದರಿಂದಲೇ ಇಂತಹ ವಿಷಯಗಳು ನನ್ನ ಗಮನಕ್ಕೆ ಬಂದವುಗಳು. ಆದರೆ ಇವೆಲ್ಲವುಗಳು ನನಗೆ ವಿಚಿತ್ರವೆಂದೂ, ಇಂತಹ ಕಾರಣಗಳಿಂದ ಅಂತಹ ವ್ಯಕ್ತಿಗಳಿಂದ ದೂರವಿರಬೇಕೆನ್ನುವ ಚಿಂತನೆಗಳೂ ನನ್ನಲ್ಲಿ ಇಲ್ಲದೆ ಇದ್ದುದರಿಂದ ಸಾಂದರ್ಭಿಕವಾಗಿ ನನ್ನ ಅವರ ಪರಿಚಯ, ಸ್ನೇಹ, ಮಾತುಕತೆಗಳಿಗೆ ಯಾವ ಅಡ್ಡಿಯೂ ಇರಲಿಲ್ಲ. ಮಾತ್ರವಲ್ಲ ಈ ವಿಷಯಗಳ ಬಗ್ಗೆ, ಈ ವ್ಯಕ್ತಿಗಳ ಬಗ್ಗೆ ಎಲ್ಲೂ ನಕಾರಾತ್ಮಕವಾದ ಮಾತುಗಳನ್ನು ಕೂಡಾ ನಾನು ಯಾರ ಬಳಿಯೂ ಮಾತನಾಡುತ್ತಿರಲಿಲ್ಲ ಎನ್ನುವುದು ಕೆಲವರಲ್ಲಿ ನಮ್ಮ ಕುಟುಂಬದ ಬಗ್ಗೆಯೇ ಗುಮಾನಿ ಹುಟ್ಟುವುದಕ್ಕೂ, ಆ ಗುಮಾನಿ ಸುದ್ದಿಯಾಗಿ ಹರಡುವುದಕ್ಕೂ ಕಾರಣವಾಗಿರಬೇಕು ಎಂದು ಈಗ ಅನ್ನಿಸುತ್ತಿದೆ.

ಪಣಂಬೂರಿನಲ್ಲಿದ್ದು ಕಾಟಿಪಳ್ಳಕ್ಕೆ ವಲಸೆ ಬಂದ ಹಲವು ಕುಟುಂಬಗಳಲ್ಲಿ ನನ್ನ ಸಮುದಾಯದವರು, ದೂರದ ಸಂಬಂಧಿಗಳೂ ಕೆಲವರು ಇದ್ದರು. ಅಂತಹವರಲ್ಲಿ ಸ್ವಲ್ಪ ಅನುಕೂಲಸ್ಥರಾದ ಕುಟುಂಬವೊಂದು ಪುನರ್ವಸತಿ ವಲಯದಿಂದ ಹೊರಗೆ ಕಾನ ರಸ್ತೆಯಲ್ಲಿ ಸ್ವಂತ ಮನೆ ಮಾಡಿಕೊಂಡಿದ್ದರು. ಇಲ್ಲಿ ಅಣ್ಣ, ತಂಗಿಯರು ಅಕ್ಕ್ಕ, ತಮ್ಮಂದಿರೊಳಗೆ ವಿವಾಹವಾಗಿ ಎರಡೂ ಕುಟುಂಬಗಳು ಪ್ರತ್ಯೇಕವಾಗಿ ಮನೆ ಮಾಡಿಕೊಂಡು ಅಕ್ಕ ಪಕ್ಕದಲ್ಲೇ ಇದ್ದರು. ಈ ಎರಡೂ ಕುಟುಂಬದ ಮಹಿಳೆಯರು ಶಿಕ್ಷಕಿಯರಾಗಿದ್ದರು. ಇವರಲ್ಲಿ ಒಬ್ಬರಿಗೆ ಸಾಹಿತ್ಯಾಸಕ್ತಿ ಇತ್ತು. ಈ ಕಾರಣದಿಂದ ಗೋವಿಂದ ದಾಸ ಕಾಲೇಜಿನಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಭೇಟಿಯಾದವರು ನಮ್ಮ ಮನೆ ವಿಳಾಸ ಪಡಕೊಂಡು ನಮ್ಮ ಮನೆಗೆ ಬಂದವರು ಮುಂದೆ ಸಾಹಿತ್ಯದ ಕಾರಣದಿಂದಲೇ ಮತ್ತೆ ಮತ್ತೆ ಬರುವಂತಾಯಿತು. ಹೀಗೆ ಬಂದಾಗ ನಮ್ಮ ಮನೆಯ ದಾರಿಯಲ್ಲಿ ಅವರ ಹಳೆಯ ಗೆಳತಿಯೊಬ್ಬರ ಮನೆಯಿದ್ದುದು ತಿಳಿಯಿತು. ಆಕೆಯೂ ಇವರನ್ನು ನೋಡಿ ತನ್ನ ಮನೆಗೆ ಆಹ್ವಾನಿಸಿದಳು. ನಮ್ಮ ಮನೆಗೆ ಬರುವ ಶಿಕ್ಷಕಿ ನಮ್ಮ ಸಂಬಂಧಿಯೆಂದು ತಿಳಿದ ಆಕೆ ಇಷ್ಟು ದಿನಗಳಲ್ಲಿ ಮುಚ್ಚಿಟ್ಟುಕೊಂಡ ಕುತೂಹಲದ ಪ್ರಶ್ನೆಯೊಂದನ್ನು ಕೇಳಿಯೇ ಬಿಟ್ಟಳು. ಈ ನಂದಾವರ ದಂಪತಿಯದ್ದು ‘‘ಲವ್ ಮ್ಯಾರೇಜೇ? ಅಂತರ್ಜಾತಿ ವಿವಾಹವೇ?’’ ಎಂದು. ಯಾಕೆಂದರೆ ನಮ್ಮ ಸಮುದಾಯದಲ್ಲಿ ಇಬ್ಬರೂ ಸ್ನಾತಕೋತ್ತರ ಪದವೀಧರರಾಗಿರುವುದು, ಸಾಹಿತಿಗಳಾಗಿರುವುದು, ಊಹಿಸಲೂ ಆಗದ ಸತ್ಯವಾಗಿತ್ತು ಆಕೆಗೆ. ಆದ್ದರಿಂದ ಇವರಲ್ಲಿ ನಿನ್ನ ಸಂಬಂಧಿ ಯಾರು? ಗಂಡನೋ, ಹೆಂಡತಿಯೋ? ಎಂದು ಕೇಳಿದಾಗ ಆಶ್ಚರ್ಯ ಪಡುವ ಸಂದರ್ಭ ಈ ಶಿಕ್ಷಕಿಯದ್ದು. ‘‘ಅಂತರ್ಜಾತಿ ವಿವಾಹವಲ್ಲ. ಒಂದು ವೇಳೆ ಆಗಿದ್ದರೂ ಏನಂತೆ? ನನ್ನ ಅಪ್ಪ ಅಮ್ಮ, ನಿನ್ನ ಅಪ್ಪ ಅಮ್ಮ ಅಂತರ್ಜಾತಿ ವಿವಾಹವಾಗಿ ಏನು ಸಾಧಿಸಿದ್ದಾರೆ? ನಿನಗೋ ನಿನ್ನ ಅಪ್ಪನ ಮೇಲ್ಜಾತಿಯ ಹಕ್ಕು ಇಲ್ಲ. ನನಗೋ ನನ್ನ ಅಮ್ಮನ ಮೇಲ್ಜಾತಿಯ ಹಿರಿಮೆ ಇಲ್ಲ. ನಮ್ಮಂತಹವರು ಇಂತಹ ಮಾತುಗಳನ್ನಾಡಲು ಯೋಗ್ಯರೇ?’’ ಎಂದು ಖಾರವಾಗಿಯೇ ಉತ್ತರಿಸಿದೆ ಎಂಬುದನ್ನು ಅವರೇ ನನ್ನಲ್ಲಿ ಹೇಳಿದಾಗ ಅವರ ಹಿರಿಯರ ಬಗ್ಗೆ ಗೊತ್ತಿಲ್ಲದ ನನಗೆ ಹೊಸ ವಿಷಯವೊಂದು ಗೊತ್ತಾಯಿತು. ಹೀಗೆ ಹೆಣ್ಣು ಗಂಡಿನ ಸಂಬಂಧಗಳಲ್ಲಿ ಉಂಟಾಗುವ ಪ್ರಕೃತಿ ಸಹಜತೆಗೆ ಈ ಊರಿನಲ್ಲಿ ಹಲವು ಉದಾಹರಣೆಗಳು ಸಿಕ್ಕವು.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News