ಮಕ್ಕಳ ಸಾವು ಆಮ್ಲಜನಕ ಕೊರತೆಯಿಂದ ಸಂಭವಿಸಿಲ್ಲ: ಕೇಂದ್ರ ಸರಕಾರದ ತನಿಖಾ ತಂಡದ ಹೇಳಿಕೆ

Update: 2017-08-16 15:12 GMT

ಹೊಸದಿಲ್ಲಿ, ಆ. 16: ಗೋರಖ್‌ಪುರದ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳು ಹಾಗೂ ಇತರರು ಸಾವನ್ನಪ್ಪಲು ಆಮ್ಲಜನಕ ಪೂರೈಕೆಯ ಕೊರತೆ ಕಾರಣ ಅಲ್ಲ ಎಂದು ಕೇಂದ್ರ ಸರಕಾರದ ಮೂವರು ಸದಸ್ಯರ ಸಮಿತಿ ಬುಧವಾರ ತಿಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಸಮಿತಿ ಭಾಗವಾಗಿರುವ ಸಫ್ದರ್‌ಜಂಗ್ ಆಸ್ಪತ್ರೆಯ ಮಕ್ಕಳ ವಿಭಾಗದ ವೈದ್ಯರಾಗಿರುವ ಡಾ. ಹರೀಶ್ ಚೆಲ್ಲಾನಿ ತಿಳಿಸಿದ್ದಾರೆ. ಖಾಸಗಿ ಗುತ್ತಿಗೆದಾರರು ಆಮ್ಲಜನಕ ಪೂರೈಸದೇ ಇರುವುದರಿಂದ ಮಕ್ಕಳು ಹಾಗೂ ಇತರರ ಸಾವು ಸಂಭವಿಸಿದೆ ಎಂಬ ಆರೋಪದ ನಡುವೆ ಶನಿವಾರ ತಂಡ ಆಸ್ಪತ್ರೆಗೆ ಭೇಟಿ ನೀಡಿದೆ.

ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಮಧ್ಯಂತರ ವರದಿಯನ್ನು ಸಮಿತಿ ಸೋಮವಾರ ಸಲ್ಲಿಸಿದೆ. ಅಂತಿಮ ವರದಿಯನ್ನು ಬುಧವಾರ ಸಲ್ಲಿಸಿದೆ ಎಂದು ಡಾ. ಚೆಲ್ಲಾನಿ ತಿಳಿಸಿದ್ದಾರೆ. ನಮಗೆ ಒದಗಿಸಲಾದ ಅಂಕಿ-ಅಂಶ ಹಾಗೂ ಮಾಹಿತಿ ಪರಿಶೀಲಿಸಿ ಹೇಳುವುದಾದರೆ ಮಕ್ಕಳು ಹಾಗೂ ಇತರರ ಸಾವು ಸಂಭವಿಸಿರುವುದು ಆಮ್ಲಜನಕದ ಕೊರತೆಯಿಂದ ಅಲ್ಲ. ಕಳೆದ ವರ್ಷ ಇದೇ ಸಂದರ್ಭ ಸಂಭವಿಸಿದ ಸಾವಿಗೆ ಹೋಲಿಸಿದರೆ, ಈ ವರ್ಷ ತುಂಬಾ ಕಡಿಮೆ. ಈ ಪ್ರಕರಣದ ತನಿಖಾ ತಂಡದಲ್ಲಿ ಲೇಡಿ ಹಾರ್ಡಿಂಜೆ ವೈದ್ಯಕೀಯ ಕಾಲೇಜು, ಸಫ್ದರ್‌ಜಂಗ್ ಆಸ್ಪತ್ರೆ ಹಾಗೂ ಸಚಿವಾಲಯದ ಪ್ರತಿರಕ್ಷಣೆ ವಿಭಾಗದ ತಜ್ಞರು ಇದ್ದಾರೆ. ಈ ನಡುವೆ ಪ್ರಕರಣದ ತನಿಖೆ ನಡೆಸಲು ಭಾರತೀಯ ವೈದ್ಯಕೀಯ ಅಸೋಶಿಯೇಷನ್ ಕೂಡ ತ್ರಿಸದಸ್ಯರ ತಂಡವೊಂದನ್ನು ಕಳುಹಿಸಿದೆ ಹಾಗೂ ಗುರುವಾರದ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News