ಸುಶೀಲ್ ಮೋದಿ ಬೆಂಗಾವಲು ವಾಹನದ ಮೇಲೆ ದಾಳಿ ಪ್ರಕರಣ: ಆರು ಆರೋಪಿಗಳ ಬಂಧನ

Update: 2017-08-16 16:05 GMT

ಪಾಟ್ನ, ಆ.16: ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿಯವರ ಬೆಂಗಾವಲು ವಾಹನಪಡೆಯ ಮೇಲೆ ಆಕ್ರಮಣ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರ್‌ಜೆಡಿ ಕಾರ್ಯಕರ್ತರು ಎನ್ನಲಾದ ಆರು ಮಂದಿಯನ್ನು ಬಂಧಿಸಲಾಗಿದೆ.

 ವೈಶಾಲಿ ಜಿಲ್ಲೆಯಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಸಲಾದ ಎಫ್‌ಐಆರ್‌ನಲ್ಲಿ 9 ಮಂದಿಯನ್ನು ಹೆಸರಿಸಲಾಗಿದೆ. ಜೊತೆಗೆ 100 ಮಂದಿ ‘ಅಪರಿಚಿತರ’ ಹೆಸರನ್ನೂ ಹೆಸರಿಸಲಾಗಿದ್ದು ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ವೈಶಾಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಮಾಜಿ ಬಿಜೆಪಿ ಶಾಸಕ ಅಚ್ಯುತಾನಂದ ಸಿಂಗ್ ತಾಯಿಯ ತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸುಶೀಲ್ ಮೋದಿ ಬೆಂಗಾವಲು ವಾಹನಪಡೆಯ ಮೇಲೆ ಕಾಲಾಪಹಾರ್ ಎಂಬ ಗ್ರಾಮದಲ್ಲಿ ದಾಳಿ ಮಾಡಿ ಕಲ್ಲುತೂರಾಟ ನಡೆಸಲಾಗಿತ್ತು. ಈ ಗ್ರಾಮ ಲಾಲೂಪ್ರಸಾದ್ ನೇತೃತ್ವದ ಆರ್‌ಜೆಡಿ ಪಕ್ಷದ ಭದ್ರಕೋಟೆಯಾಗಿದ್ದು , ಘಟನೆಗೆ ಕೆಲವೇ ಕ್ಷಣಗಳ ಮೊದಲು ಇದೇ ರಸ್ತೆಯಲ್ಲಿ ಲಾಲೂಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಅವರಿದ್ದ ಕಾರು ಹಾದು ಹೋಗಿತ್ತು.

   ಆರ್‌ಜೆಡಿ ಕಾರ್ಯಕರ್ತರು ದಾಳಿ ನಡೆಸಿದ್ದು ಕಲ್ಲು ತೂರಾಟದಿಂದ ಮೂರು ಕಾರುಗಳ ಗಾಜು ಪುಡಿಯಾಗಿದೆ . ದಾಳಿಕೋರರಲ್ಲಿ ಹಲವರು ತನಗೆ ಮುತ್ತಿಗೆ ಹಾಕಲು ಪ್ರಯತ್ನಿಸಿ ತನ್ನ ವಿರುದ್ಧ ಘೋಷಣೆ ಕೂಗುತ್ತಿದ್ದರು . ಭದ್ರತಾ ಸಿಬ್ಬಂದಿಗಳು ಇರದಿದ್ದರೆ ಭಾರೀ ದೊಡ್ಡ ಅನಾಹುತ ಸಂಭವಿಸುತ್ತಿತ್ತು ಎಂದು ಸುಶೀಲ್ ಮೋದಿ ಆರೋಪಿಸಿದ್ದಾರೆ.

ಅಧಿಕಾರ ಕೈತಪ್ಪಿದ ಹತಾಶೆಯಿಂದ ಆರ್‌ಜೆಡಿ ಕಾರ್ಯಕರ್ತರು ಈ ರೀತಿ ವರ್ತಿಸಿದ್ದಾರೆ. ಆದರೆ ಇದರಿಂದ ತಾನು ಕಂಗೆಟ್ಟಿಲ್ಲ. ಲಾಲೂಪ್ರಸಾದ್ ಮತ್ತವರ ಕುಟುಂಬದವರು ಎಸಗಿರುವ ಭ್ರಷ್ಟಾಚಾರದ ಕುರಿತು ಇನ್ನಷ್ಟು ದಾಖಲೆಗಳನ್ನು ಬಹಿರಂಗಪಡಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News