ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಲು ಕೇಂದ್ರ ಸರಕಾರ ಸಿದ್ಧವಿದೆಯೇ?

Update: 2017-08-16 16:37 GMT

ಮುಂಬೈ, ಆ.16: ಕಾಶ್ಮೀರ ರಾಜ್ಯಕ್ಕೆ ನೀಡಲಾಗಿರುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದರೆ ದೇಶದಾದ್ಯಂತದ ಜನರು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿಯ ಜನರನ್ನು ಹಾರ್ದಿಕವಾಗಿ ಆಲಂಗಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಕೇಂದ್ರ ಸರಕಾರ ಮೊದಲು ಈ ಕಾರ್ಯ ಮಾಡಲು ಸಿದ್ಧವಿದೆಯೇ ಎಂದು ಶಿವಸೇನೆ ಸವಾಲು ಹಾಕಿದೆ.

 ದಿಲ್ಲಿಯ ಕೆಂಪುಕೋಟೆಯ ವೇದಿಕೆಯ ಮೇಲಿಂದ ಮಾಡಿದ ಸ್ವಾತಂತ್ರೋತ್ಸವ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ- ಕಾಶ್ಮೀರ ಸಮಸ್ಯೆಯನ್ನು ಗೋಲಿ(ಬುಲೆಟ್) ಅಥವಾ ಗಾಲಿ(ಪರಸ್ಪರ ನಿಂದನೆ) ಯಿಂದ ಪರಿಹರಿಸಲು ಸಾಧ್ಯವಿಲ್ಲ. ಕಾಶ್ಮೀರದ ಪ್ರತಿಯೊಬ್ಬ ನಾಗರಿಕನನ್ನೂ ಹಾರ್ದಿಕವಾಗಿ ಆಲಿಂಗಿಸಿಕೊಂಡು ಮಿತೃತ್ವದ ಸಂದೇಶ ನೀಡಿದಾಗ ಮಾತ್ರ ಈ ಸಮಸ್ಯೆ ಪರಿಹಾರವಾಗಬಹುದು ಎಂದು ಹೇಳಿದ್ದರು.

   ಈ ಹೇಳಿಕೆಯ ಬಗ್ಗೆ ಶಿವಸೇನೆಯ ಮುಖವಾಣಿ ‘ಸಾಮ್ನ’ದಲ್ಲಿ ಪ್ರತಿಕ್ರಿಯೆ ನೀಡಲಾಗಿದೆ. ಈ ಅದ್ಭುತ ಚಿಂತನೆ ಇದುವರೆಗೆ ಯಾರೊಬ್ಬರಿಗೂ ಯಾಕೆ ಹೊಳೆದಿಲ್ಲ ಎಂಬುದೇ ಅಚ್ಚರಿಯಾಗಿದೆ. ಈಗ ಈ ಚಿಂತನೆಯನ್ನು ಕಾರ್ಯರೂಪಕ್ಕೆ ತರಬೇಕಿದ್ದರೆ ಮೊದಲು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಬೇಕಿದೆ. ಆಗ ದೇಶದಾದ್ಯಂತದ ಜನಪ್ರವಾಹವೇ ಕಾಶ್ಮೀರದತ್ತ ನುಗ್ಗಿ ಅಲ್ಲಿಯ ಜನರನ್ನು ಸ್ನೇಹದಿಂದ ಆಲಿಂಗಿಸಿಕೊಳ್ಳಬಹುದು ಎಂದು ಸಂಪಾದಕೀಯ ಬರಹದಲ್ಲಿ ಹೇಳಲಾಗಿದೆ. ನಂಬಿಕೆಯ ಹೆಸರಲ್ಲಿ ದೇಶದಲ್ಲಿ ಹಿಂಸಾಚಾರ ನಡೆಯುತ್ತಿದ್ದು ಇದರಿಂದ ಮುಸ್ಲಿಮರಷ್ಟೇ ಅಲ್ಲ, ಹಿಂದೂಗಳೂ ಹೆದರಿದ್ದಾರೆ . ಗೋರಕ್ಷಣೆಯ ಹೆಸರಲ್ಲಿ ಹಿಂದೂ ಸಮುದಾಯದ ಕೆಲವು ಸಂಘಟನೆ ತೀವ್ರವಾದಿಗಳಾಗಿ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಅವರನ್ನು ಕೇವಲ ಎಚ್ಚರಿಸಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಬರೆಯಲಾಗಿದೆ.

ನೋಟು ಅಮಾನ್ಯೀಕರಣ ಪ್ರಕ್ರಿಯೆ ಹಾಗೂ ಜಿಎಸ್‌ಟಿ ಜಾರಿಯ ವಿಷಯದಲ್ಲಿ ಸರಕಾರ ಅತ್ಯಂತ ನಿಷ್ಟುರವಾಗಿ ನಡೆದುಕೊಂಡಿದೆ. ಆದರೆ ವಂದೇಮಾತರಂ ಹಾಡುವುದನ್ನು ನಿರಾಕರಿಸಿರುವವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಲು ಏಕೆ ಹಿಂಜರಿಯುತ್ತಿದೆ ಎಂದು ಪ್ರಶ್ನಿಸಿರುವ ಶಿವಸೇನೆ, ವಿದೇಶದ ಬ್ಯಾಂಕ್‌ಗಳಿಂದ ಕಪ್ಪುಹಣವನ್ನು ವಾಪಾಸು ತಂದು ಪ್ರತಿಯೊಬ್ಬ ಪ್ರಜೆಯ ಬ್ಯಾಂಕ್ ಖಾತೆಯಲ್ಲಿ ತಲಾ 15 ಲಕ್ಷ ರೂ. ಜಮೆ ಮಾಡುವ ಪ್ರಧಾನಿಯ ಘೋಷಣೆ ಮುಂದಿನ ಎರಡು ವರ್ಷದಲ್ಲಿ ಜಾರಿಗೆ ಬರಬಹುದು ಎಂದು ನಿರೀಕ್ಷಿಸುವುದಾಗಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News