ಸೋನಿಯಾ ಗಾಂಧಿ ಕಾಣೆಯಾಗಿದ್ದಾರೆ.. ಪತ್ತೆಹಚ್ಚಿದವರಿಗೆ ಬಹುಮಾನವಿದೆ...!

Update: 2017-08-16 16:55 GMT

ಲಕ್ನೊ, ಆ.16: ಕ್ಷೇತ್ರದ ಪ್ರತಿನಿಧಿಯಾಗಿರುವ ಸಂಸದೆ ಸೋನಿಯಾ ಗಾಂಧಿ ನಾಪತ್ತೆಯಾಗಿದ್ದು ಅವರನ್ನು ಪತ್ತೆಹಚ್ಚಿದವರಿಗೆ ಸೂಕ್ತ ಪುರಸ್ಕಾರ ನೀಡಲಾಗುತ್ತದೆ- ಹೀಗೆ ಬರೆಯಲಾಗಿರುವ ಪೋಸ್ಟರ್‌ಗಳು ಉತ್ತರಪ್ರದೇಶದ ರಾಯ್‌ಬರೇಲಿ ಸಂಸದೀಯ ಕ್ಷೇತ್ರ ವ್ಯಾಪ್ತಿಯ ಗೋರ ಬಝಾರ್, ಮಹಾನಂದಪುರ ಮತ್ತು ಸರಕಾರಿ ಕಾಲೊನಿ ಪ್ರದೇಶಗಳಲ್ಲಿ ಮಂಗಳವಾರ ರಾತ್ರೋರಾತ್ರಿ ಪ್ರತ್ಯಕ್ಷವಾಗಿವೆ.

ಈ ವಿಷಯ ಎಲ್ಲೆಡೆ ಪ್ರಸಾರವಾಗುತ್ತಿದ್ದಂತೆ ಕಾರ್ಯೋನ್ಮುಖರಾದ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್‌ಗಳನ್ನು ಕಿತ್ತುಹಾಕಿದರು. ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದೆಯ ಅನುಪಸ್ಥಿತಿಯಲ್ಲಿ ಇಲ್ಲಿಯ ಜನರನ್ನು ಸರಕಾರ ಮೋಸ ಮಾಡುತ್ತಿದೆ ಎಂಬ ಅರ್ಥದಲ್ಲಿ ಈ ಪೋಸ್ಟರ್‌ಗಳನ್ನು ರಾಯ್‌ಬರೇಲಿ ಕ್ಷೇತ್ರದ ಜನರು ಅಂಟಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ವಿಶ್ಲೇಷಿಸಿದ್ದಾರೆ.

ಈ ರೀತಿಯ ಆಧಾರರಹಿತ ಪೋಸ್ಟರ್ ಅಂಟಿಸಿರುವ ಘಟನೆಯ ಹಿಂದೆ ಆರೆಸ್ಸೆಸ್ ಮತ್ತು ಬಿಜೆಪಿಯ ಕೈವಾಡವಿದೆ ಎಂದು ಅಮೇಥಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಯೋಗೇಂದ್ರ ಮಿಶ್ರಾ ಟೀಕಿಸಿದ್ದಾರೆ.

ಇದಕ್ಕೂ ಮುನ್ನ ಅಮೇಥಿ ಕ್ಷೇತ್ರ ವ್ಯಾಪ್ತಿಯಲ್ಲೂ ಈ ರೀತಿಯ ‘ಕಾಣೆಯಾಗಿದ್ದಾರೆ’ ಪೋಸ್ಟರ್ ಕಂಡುಬಂದಿತ್ತು. ಈ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದ ರಾಹುಲ್ ಗಾಂಧಿ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ಎಲ್ಲೆಡೆ ಕಂಡುಬಂದಿತ್ತು. ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಪ್ರಚಾರ ಕಾರ್ಯದ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ ರಾಹುಲ್ ಅಮೇಥಿಗೆ ಭೇಟಿ ಕೊಟ್ಟ ಬಳಿಕ ಮತ್ತೆ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಸೋನಿಯಾ ಈ ವರ್ಷಾರಂಭದಿಂದ ಇದುವರೆಗೆ ಒಮ್ಮೆಯೂ ರಾಯ್‌ಬರೇಲಿಗೆ ಭೇಟಿ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News