ಹರ್ಯಾಣದಲ್ಲಿ ಮಿತಿಮೀರಿದ ಬೀದಿ ದನಗಳ ಕಾಟ

Update: 2017-08-16 17:18 GMT

ಹರ್ಯಾಣ, ಆ.16: ಆಗಸ್ಟ್ 15ರೊಳಗೆ ಹರ್ಯಾಣ ರಾಜ್ಯವನ್ನು ಬೀದಿ ದನಗಳಿಂದ (ಬೀದಿಯಲ್ಲಿ ಅಂಡಲೆಯುವ ದನಗಳು) ಮುಕ್ತಗೊಳಿಸುವುದಾಗಿ ರಾಜ್ಯದ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಹಾಗೂ ‘ಗೋಸೇವಾ ಆಯೋಗ’ದ ಅಧ್ಯಕ್ಷ ಭನಿರಾಮ್ ಮಂಗ್ಲ ಘೋಷಿಸಿದ್ದರು. ಆದರೆ ಗಡುವು ಮುಗಿದಿದೆ. ಘೋಷಣೆ ಮಾತ್ರ ಇನ್ನೂ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿಲ್ಲ.

 ಸುಮಾರು 15,000 ದನಗಳು ಇನ್ನೂ ರಸ್ತೆಯಲ್ಲೇ ಅಂಡಲೆಯುತ್ತಿವೆ. ಶೇ.30ರಷ್ಟು ಕಾರ್ಯ ಮಾತ್ರ ಮುಗಿಸಲು ಸಾಧ್ಯವಾಗಿದೆ ಎಂದು ಮಂಗ್ಲ ಈಗ ಹೇಳುತ್ತಿದ್ದಾರೆ. ಒಂದು ವರ್ಷದ ಅಭಿಯಾನದ ಅವಧಿಯಲ್ಲಿ ಗೋಶಾಲೆಗೆ ಸ್ಥಳಾಂತರಿಸಲಾಗಿರುವ ಸಾವಿರಾರು ಹಸುಗಳ ಪರಿಸ್ಥಿತಿಯ ಬಗ್ಗೆ ತಮಗೆ ಬೇಸರವಿದೆ ಎನ್ನುತ್ತಾರವರು.

 ಗೋಶಾಲೆಯಲ್ಲಿ ಸ್ಥಳಾವಕಾಶದ ಕೊರತೆಯಿರುವ ಕಾರಣ ನಮ್ಮ ಕಾರ್ಯವನ್ನು ಸ್ಥಗಿತಗೊಳಿಸಬೇಕಾಗಿದೆ. ಗೋಶಾಲೆ ಈಗಾಗಲೇ ತುಂಬಿ ತುಳುಕುತ್ತಿದ್ದು, ಈ ಪರಿಸ್ಥಿತಿಯಲ್ಲಿ ಇನ್ನಷ್ಟು ಹಸುಗಳನ್ನು ಅಲ್ಲಿಗೆ ಸ್ಥಳಾಂತರಿಸಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ಆದ್ದರಿಂದ ಗುರಿಸಾಧನೆಗೆ ಹಿನ್ನಡೆಯಾಗಿದೆ ಎಂದೂ ಅವರು ಸೇರಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಮೊದಲು ಸಾಕಷ್ಟು ಗೋಶಾಲೆ ಮತ್ತು ‘ನಂದಿ ಶಾಲೆ’ಗಳನ್ನು ರಾಜ್ಯಾದ್ಯಂತ ಆರಂಭಿಸಿ ಅಲೆಮಾರಿ ದನಗಳಿಗೆ ಸಾಕಷ್ಟು ಸ್ಥಳಾವಕಾಶ ಸೃಷ್ಟಿಸಿದ ಬಳಿಕ ಅಭಿಯಾನ ಮುಂದುವರಿಸಲು ನಿರ್ಧರಿಸಲಾಗಿದೆ ಎಂದವರು ಹೇಳಿದ್ದಾರೆ.

ಗೋಹತ್ಯೆಯನ್ನು ನಿಷೇಧಿಸಿ ಮತ್ತು ಗೋಹತ್ಯೆ ನಡೆಸಿದವರಿಗೆ ಕಠಿಣ ಶಿಕ್ಷೆ ಘೋಷಿಸಿದ ಬಳಿಕ ಹರ್ಯಾಣದಲ್ಲಿ ಅಲೆಮಾರಿ ಬೀದಿ ದನಗಳ ಹಾವಳಿ ಹೆಚ್ಚಿದೆ. ಸಾವಿರಾರು ಹಸು ಮತ್ತು ಎತ್ತುಗಳು ರಸ್ತೆಯಲ್ಲೇ ಠಿಕಾಣಿ ಹೂಡಿ ವಾಹನ ಮತ್ತು ಜನರ ಸುಗಮ ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ. ಹಾಲು ಕರೆಯದ ದನಗಳು ಹಾಗೂ ಎತ್ತುಗಳನ್ನು ಮಾರಾಟ ಮಾಡಲು ಕಾನೂನಿನ ಅಡ್ಡಿ ಇರುವ ಹಿನ್ನೆಲೆಯಲ್ಲಿ ಇಂತಹ ಜಾನುವಾರುಗಳನ್ನು ಜನರು ರಸ್ತೆಗೆ ತಂದು ಬಿಡುತ್ತಿದ್ದಾರೆ.

 ರೋಹ್ಟಕ್‌ನಲ್ಲಿ ಈ ರೀತಿಯ ಕೃತ್ಯದಲ್ಲಿ ತೊಡಗಿರುವವರಿಗೆ 10,000 ರೂ. ದಂಡ ವಿಧಿಸಿದ್ದೇವೆ. ಇಂತವರನ್ನು ಪತ್ತೆಹಚ್ಚಲು ಸಾರ್ವಜನಿಕರು ನೆರವಾಗಬೇಕು ಎಂದು ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ ಸೂರ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News