ಈ ವಾರ ತೆರೆಗೆ 'ಮಾರಿಕೊಂಡವರು'

Update: 2017-08-16 18:36 GMT

ಸಾಮಾಜಿಕ‌ ಸಂದೇಶಗಳುಳ್ಳ‌ ಚಿತ್ರಗಳ ಮೂಲಕ ಗುರುತಿಸಿಕೊಂಡವರು ನಿರ್ದೇಶಕ ಶಿವರುದ್ರಯ್ಯ. ಅವರ ನಿರ್ದೇಶನದ 'ಮಾರಿಕೊಂಡವರು' ಈ ವಾರ ತೆರೆಗೆ ಬರಲಿದೆ.

ಚಿತ್ರದ ಬಿಡುಗಡೆಯ ಪೂರ್ವಭಾವಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವರುದ್ರಯ್ಯನವರು ''ಇದು ದಲಿತ ಕಾದಂಬರಿಕಾರ ದೇವನೂರು ಮಹಾದೇವ ಅವರ 'ಮಾರಿಕೊಂಡವರು', 'ಡಾಂಬರು ಬಂದದು' ಮತ್ತು 'ಗ್ರಸ್ತರು' ಎಂಬ ಮೂರು ಕತೆಗಳನ್ನು ಸಂಯೋಜಿಸಿ ಚಿತ್ರಕತೆ ಸಿದ್ಧಪಡಿಸಲಾದ ಸಿನಿಮಾ" ಎಂದರು. ಚಿತ್ರದಲ್ಲಿ ಎಪ್ಪತ್ತು ಎಂಬತ್ತರ ಕಾಲಘಟ್ಟವನ್ನು ತೋರಿಸಬೇಕಾದ ಕಾರಣ ಮೈಸೂರು, ಚಾಮರಾಜನಗರ ಮತ್ತು ಕೆಂಗೇರಿಯ ಒಳಭಾಗಗಳಲ್ಲಿ‌ ಚಿತ್ರೀಕರಿಸಲಾಗಿದೆ ಎಂದು ಅವರು ತಿಳಿಸಿದರು. 

ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಸರ್ದಾರ್ ಸತ್ಯ ಮಾತನಾಡಿ, ಇಂಥ ಪಾತ್ರಗಳು‌ ಅಪರೂಪಕ್ಕೆ ಮಾತ್ರ ದೊರಕುತ್ತವೆ ಎಂದರು. ಚಿತ್ರದ ನಾಯಕಿ‌ ಸಂಯುಕ್ತಾ ಹೊರನಾಡು "ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಲಕ್ಷ್ಮೀ ಎಂದು. ಚಿತ್ರ ಪೂರ್ತಿ ಚಪ್ಪಲಿ ಹಾಕದೆ ಓಡಾಡಿದ್ದೇನೆ" ಎಂದರು.

ಸಾಮಾನ್ಯವಾಗಿ ಮಹಿಳಾ ಪ್ರಧಾನ ಚಿತ್ರ ತೆಗೆಯುವವರೇ ಸೆಟ್ ನಲ್ಲಿ ಮಹಿಳೆಗೆ ಪ್ರಾಧಾನ್ಯತೆ ನೀಡುವುದಿಲ್ಲ. ಆದರೆ ಶಿವರುದ್ರಯ್ಯನವರು ಪರದೆಯ ಮೇಲೆ ತೋರಿಸುವಂಥ ಗೌರವವನ್ನೇ ಸೆಟ್ ನಲ್ಲಿಯೂ ತೋರಿಸುವಂಥ ಶ್ರೇಷ್ಠರು ಎಂದರು. ಚಿತ್ರದ ಮತ್ತೋರ್ವ ನಾಯಕಿ‌ ಸೋನು ಮಾತನಾಡಿ ಶಿಶಿರ ಎಂಬ ಪಾತ್ರ ಮಾಡಿರುವುದಾಗಿ ಹೇಳಿದರು. ಬಾಲನಟ ಮಧುಸೂದನ್ ಚಿತ್ರದಲ್ಲಿ ತಮಗಿರುವ ಸಂಭಾಷಣೆಯ ಒಂದೆರಡು ಜಲಕ್ ನೀಡಿದರು. ನಿರ್ಮಾಪಕರಾದ ಗುರುರಾಜ್ ಶೇಟ್, ವೆಂಕಟೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಐಸಾಕ್ ಥಾಮಸ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News