ಮಾಲೆಗಾಂವ್ ಸ್ಫೋಟ ಪ್ರಕರಣ: ಪುರೋಹಿತ್ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂ

Update: 2017-08-17 12:53 GMT

ಹೊಸದಿಲ್ಲಿ, ಆ.17: 2008ರಲ್ಲಿ ನಡೆದ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಲೆಕ ಎಸ್.ಪಿ.ಪುರೋಹಿತ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ಕಾದಿರಿಸಿದೆ.

   ಪುರೋಹಿತ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ, ತನ್ನ ಕಕ್ಷಿದಾರರು 9 ವರ್ಷಗಳಿಂದ ಜೈಲಿನಲ್ಲಿದ್ದರೂ ಅವರ ವಿರುದ್ಧ ಇನ್ನೂ ದೋಷಾರೋಪ ಪಟ್ಟಿ ದಾಖಲಿಸಲಾಗಿಲ್ಲ . ಪುರೋಹಿತ್ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ಕಾಯ್ದೆ(ಮೋಕಾ)ದಡಿ ದಾಖಲಿಸಲಾಗಿದ್ದ ಆರೋಪವನ್ನು ಕೈಬಿಟ್ಟಿರುವ ಕಾರಣ ಅವರು ಮಧ್ಯಂತರ ಜಾಮೀನು ಪಡೆಯಲು ಅರ್ಹರು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್.ಕೆ.ಅಗ್ರವಾಲ್ ಮತ್ತು ಎ.ಎಂ.ಸಪ್ರೆ ತೀರ್ಪನ್ನು ಕಾಯ್ದಿರಿಸಿರುವುದಾಗಿ ತಿಳಿಸಿದರು.

 ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ಮಾಲೆಗಾಂವ್‌ನಲ್ಲಿ 2008ರ ಸೆಪ್ಟೆಂಬರ್ 29ರಂದು ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಏಳು ಮಂದಿ ಮೃತಪಟ್ಟಿದ್ದರು. ಪ್ರಕರಣದಲ್ಲಿ ಪುರೋಹಿತ್ ಪಾತ್ರ ಇರುವ ಬಗ್ಗೆ ಸಾಕ್ಷಿಗಳಿದ್ದು ಇವು ಆರೋಪಪಟ್ಟಿ ರೂಪಿಸಲು ನೆರವಾಗಬಲ್ಲದು ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಣೀಂದರ್ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು.

   ಈ ಮಧ್ಯೆ, ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್‌ಗೆ ಜಾಮೀನು ಮಂಜೂರುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಅಕ್ಟೋಬರ್ 10ಕ್ಕೆ ಮುಂದೂಡಿತು. ಪ್ರಜ್ಞಾಗೆ ಜಾಮೀನು ಮಂಜೂರುಗೊಳಿಸಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ನಿಸಾರ್ ಹಾಜಿ ಸಯ್ಯದ್ ಬಿಲಾಲ್ (ಪ್ರಕರಣದಲ್ಲಿ ಬಲಿಯಾದವರಲ್ಲಿ ಓರ್ವರ ತಂದೆ) , ಪ್ರಜ್ಞಾ ಪ್ರಬಲ ವ್ಯಕ್ತಿಯಾಗಿರುವ ಕಾರಣ ಆಕೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಹೇಳಿದ್ದರು ಹಾಗೂ ಜಾಮೀನು ಮಂಜೂರು ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದರು. ಪ್ರಜ್ಞಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ಉತ್ತರಿಸುವಂತೆ ಸುಪ್ರೀಂಕೋರ್ಟ್ ಜುಲೈ 28ರಂದು ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿತ್ತು.

   ಇದಕ್ಕೂ ಮುನ್ನ, ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯವು ಈ ಪ್ರಕರಣವನ್ನು ‘ಮೋಕಾ’ದಡಿ ದಾಖಲಿಸಿರುವುದು ಸರಿಯಾದ ಕ್ರಮವಲ್ಲ ಎಂದು ತೀರ್ಪು ನೀಡಿತ್ತು. ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಲ್ಲಿಸಲಾಗಿದ್ದ 4000 ಪುಟಗಳ ಆರೋಪಪಟ್ಟಿಯಲ್ಲಿ , ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿರುವ ಕಾರಣ ಮಾಲೆಗಾಂವ್ ನಗರವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು ಮತ್ತು ಈ ಪ್ರಕರಣದಲ್ಲಿ ದಯಾನಂದ ಪಾಂಡೆ ಪ್ರಮುಖ ಆರೋಪಿ, ಪುರೋಹಿತ್ ಮತ್ತು ಪ್ರಜ್ಞಾ ಠಾಕೂರ್ ಸಹ ಆರೋಪಿಗಳು ಎಂದು ತಿಳಿಸಲಾಗಿತ್ತು. ಸ್ಫೋಟಕಗಳನ್ನು ವ್ಯವಸ್ಥೆಗೊಳಿಸುವಂತೆ ಪುರೋಹಿತ್‌ಗೆ ಪಾಂಡೆ ಸೂಚಿಸಿದ್ದ . ಅಲ್ಲದೆ ಪ್ರಜ್ಞಾರಿಗೆ ಸೇರಿದ್ದ ಮೋಟಾರ್‌ಬೈಕನ್ನು ಸ್ಫೋಟದ ವೇಳೆ ಬಳಸಲಾಗಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News