×
Ad

ನನ್ನ ಪುತ್ರ 5 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ: ಕೇರಳ ಲೇಖಕಿ

Update: 2017-08-17 21:51 IST

ತಿರುವನಂತಪುರ, ಆ. 17: ಕೇರಳದಲ್ಲಿ ಸಾಯೋ ಆಟ ಬ್ಲೂವೇಲ್ ಚಾಲೆಂಜ್ ಅನ್ನು ಮಕ್ಕಳು ಹಿಂಬಾಲಿಸುತ್ತಿರುವುದು ಇತ್ತೀಚೆಗಿನ ಬೆಳವಣಿಗೆ ಏನೂ ಅಲ್ಲ. ಈ ಹಿಂದೆ ಕೇರಳದಲ್ಲಿ ಇಂಟರ್‌ನೆಟ್ ಅಷ್ಟು ಜನಪ್ರಿಯವಾಗಿರದಿದ್ದ ಸಂದರ್ಭದಲ್ಲೂ ಇತರ ಸಾಯೋ ಆಟಗಳನ್ನು ಮಕ್ಕಳು ಹಿಂಬಾಲಿಸುತ್ತಿದ್ದರು ಎಂದು ತನ್ನ ಪುತ್ರ ಅನೀಶ್ ಬಾಬುವನ್ನು ಕಳೆದುಕೊಂಡ ಮಲಯಾಳಂ ಲೇಖಕಿ ಎಸ್. ಸರೋಜಮ್ ಹೇಳಿದ್ದಾರೆ.

ಅನೀಶ್ ತನ್ನ 27ನೇ ವರ್ಷದಲ್ಲಿ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ. ಕೆಲವು ಕಂಪ್ಯೂಟರ್ ಗೇಮ್‌ನ ಸುಳಿಗೆ ಸಿಲುಕಿ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡ ಎಂದು ಕೇರಳ ಸರಕಾರದ ಮಾಜಿ ಉಪ ಕಾರ್ಯದರ್ಶಿ ಸರೋಜಮ್ ಹೇಳಿದ್ದಾರೆ.

 ಅನೀಶ್ 5 ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲನಾಗಿದ್ದ. ಆರನೇ ಬಾರಿ ಯಶಸ್ವಿಯಾಗಿದ್ದ. ಆತನಿಗೆ ಇಂಟರ್‌ನೆಟ್ ಮೂಲಕ ಯಾರೋ ನಿರ್ದೇಶನ ನೀಡುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಅನೀಶ್ ಸಣ್ಣ ಪ್ರಾಯದಲ್ಲೇ ಕಂಪ್ಯೂಟರ್ ಹುಳುವಾಗಿದ್ದ. ಆಗ ಇಂಟರ್‌ನೆಟ್ ಅಷ್ಟು ಜನಪ್ರಿಯವಾಗಿರಲಿಲ್ಲ. ಆದರೆ, ಆತನಿಗೆ ಸೈಬರ್ ಸ್ಪೇಸ್‌ನ ಎಳೆ ಎಳೆಯೂ ಗೊತ್ತಿತ್ತು. ಆರೇ ತಿಂಗಳಲ್ಲಿ ಆತ ಕಿಲ್ಲರ್ ಗೇಮ್‌ನ ಗೀಳು ಅಂಟಿಸಿಕೊಂಡ.

 ಆಟದಲ್ಲಿ ವಿಫಲವಾದಂತೆ ನಿರ್ವಹಣೆದಾರರು ಆತನಿಗೆ ಯಶಸ್ವಿಯಾಗಲು ಸಲಹೆ ನೀಡುತ್ತಿದ್ದರು. ಸಾಯೋ ಆಟದಿಂದ ನನ್ನ ಮಗನ ಬದುಕಿನಲ್ಲಿ ಉಂಟಾದ ಬದಲಾವಣೆ ನನಗೆ ಕೊನೆ ಹಂತದಲ್ಲಿ ಅರಿವಿಗೆ ಬಂತು. ಆಗ ಕಾಲ ಕಳೆದು ಹೋಗಿತ್ತು. ಒಂದು ದಿನ ಆತ ತನ್ನ ತಲೆಗೆ ಪ್ಲಾಸ್ಟಿಕ್ ಬ್ಯಾಗ್ ಹಾಕಿ ಅದನ್ನು ಕುತ್ತಿಗೆಗೆ ಸುತ್ತಿಕೊಂಡು ಉಸಿರಾಡಲು ಸಾಧ್ಯವಾಗದೆ ಸಾವನ್ನಪ್ಪಿದ ಎಂದು ಸರೋಜಮ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News