ಗುಜರಾತ್ ವಿಧಾನಸಭೆಗೆ ವಘೇಲಾ ರಾಜೀನಾಮೆ
Update: 2017-08-17 22:07 IST
ಅಹಮ್ಮದಾಬಾದ್, ಆ. 17: ಉಚ್ಚಾಟಿತ ಕಾಂಗ್ರೆಸ್ ನಾಯಕ ಶಂಕರ್ ಸಿನ್ಹಾ ವಘೇಲಾ ಅವರು ಬುಧವಾರ ರಾಜ್ಯ ವಿಧಾನ ಸಭೆಗೆ ರಾಜೀನಾಮೆ ನೀಡಿದ್ದಾರೆ. ಅವರು ಸ್ವೀಕರ್‌ಗೆ ಅವರ ಕೊಠಡಿಯಲ್ಲಿ ರಾಜೀನಾಮೆ ಸಲ್ಲಿಸಿದರು. ಈ ಸಂದರ್ಭ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ನಿತೀನ್ ಪಟೇಲ್ ಹಾಗೂ ಇತರ ಸಚಿವರು ಅವರೊಂದಿಗೆ ಇದ್ದರು.
ಈ ಹಿಂದೆ ವೇಲಾ ಅವರು ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ತನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಬೇಕು ಎಂಬ ಆಗ್ರಹವನ್ನು ಕಾಂಗ್ರೆಸ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಅವರು ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇತ್ತೀಚೆಗೆ ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ಅಡ್ಡ ಮತ ಹಾಕಿದ ಬಳಿಕ ಶಂಕರ್‌ಸಿನ್ಹಾ ವೇಲಾ, ಅವರ ಪುತ್ರ ಮಹೇಂದ್ರ ಸಿನ್ಹಾ ವೇಲಾ ಹಾಗೂ ಇತರ ಏಳು ಮಂದಿ ಶಾಸಕರನ್ನು ಕಾಂಗ್ರೆಸ್ ಉಚ್ಚಾಟಿಸಿತ್ತು.