ಉ.ಪ್ರ. ಮಾಜಿ ಸಿಎಂ ಅಖಿಲೇಶ್ ಯಾದವ್ ಬಂಧನ, ಬಿಡುಗಡೆ
Update: 2017-08-17 22:26 IST
ಉನ್ನಾವೊ, ಆ. 17: ಮಾಜಿ ಶಾಸಕ ಹಾಗೂ ಸಮಾಜವಾದಿ ಪಕ್ಷದ ನಾಯಕ ಪ್ರದೀಪ್ ಯಾದವ್ ಅವರನ್ನು ಭೇಟಿಯಾಗಲು ತೆರಳುತ್ತಿದ್ದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಆಗ್ರಾ ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಗುರುವಾರ ವಶಕ್ಕೆ ತೆಗೆದು ಕೊಳ್ಳಲಾಯಿತು.
ಔರೆಯ್ಯದಲ್ಲಿ ನಡೆದ ಜಿಲ್ಲಾ ಪಂಚಾಯತ್ ಚುನಾವಣೆ ವೇಳೆ ನಡೆದ ಘರ್ಷಣೆಯಲ್ಲಿ ಪ್ರದೀಪ್ ಯಾದವ್ ಅವರಿಗೆ ಥಳಿಸಲಾಗಿತ್ತು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅಭ್ಯರ್ಥಿಯೊಂದಿಗೆ ಔರೆಯ್ಯೆದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ನಾಮಪತ್ರ ಸಲ್ಲಿಸುವ ಕೊಠಡಿಗೆ ತೆರಳಲು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಬೆಂಬಲಿಗರು ಹಿಂಸಾಚಾರದಲ್ಲಿ ತೊಡಗಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಪೊಲೀಸರು ಕೆಲವು ಎಸ್ಪಿ ನಾಯಕರನ್ನು ಬಂಧಿಸಿದ್ದರು.
ನಿನ್ನೆ ಸಂಜೆ ವರೆಗೆ ಎಂಎಲ್‌ಸಿ ರಾಜ್‌ಪಾಲ್ ಕಶ್ಯಪ್, ಪ್ರದೀಪ್ ಯಾದವ್ ಹಾಗೂ ಇತರ ಹಲವು ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.