ಕಾರ್ಪೊರೇಟ್ ಸಂಸ್ಥೆಗಳಿಂದ ದೇಣಿಗೆ: ಬಿಜೆಪಿಗೆ ಸಿಂಹಪಾಲು; ಎಡಿಆರ್ ವರದಿ

Update: 2017-08-17 17:44 GMT

ಹೊಸದಿಲ್ಲಿ, ಆ.17: ಕಳೆದ ನಾಲ್ಕು ವರ್ಷದ ಅವಧಿಯಲ್ಲಿ (2012ರಿಂದ 2016ರವರೆಗೆ) ಕಾರ್ಪೊರೇಟ್ ಸಂಸ್ಥೆಗಳು ರಾಷ್ಟ್ರೀಯ ಪಕ್ಷಗಳಿಗೆ ಒಟ್ಟು 956.77 ಕೋಟಿ ರೂ. ದೇಣಿಗೆ ನೀಡಿದ್ದು ಇದರಲ್ಲಿ ಬಿಜೆಪಿ 705.81 ಕೋಟಿ ರೂ. ಪಡೆದಿದೆ ಎಂದು ವರದಿಯೊಂದರಲ್ಲಿ ತಿಳಿಸಲಾಗಿದೆ.

    ಬಿಜೆಪಿಗೆ 2,987 ಕಾರ್ಪೊರೇಟ್ ಸಂಸ್ಥೆಗಳು ದೇಣಿಗೆ ನೀಡಿದ್ದರೆ, ಕಾಂಗ್ರೆಸ್ ಪಕ್ಷ 167 ಕಾರ್ಪೊರೇಟ್ ಸಂಸ್ಥೆಗಳಿಂದ 198.16 ಕೋಟಿ ರೂ. ಪಡೆದು ದ್ವಿತೀಯ ಸ್ಥಾನದಲ್ಲಿದೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ವರದಿಯಲ್ಲಿ ತಿಳಿಸಲಾಗಿದೆ. ರಾಷ್ಟ್ರೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಘೋಷಣಾ ಪತ್ರದ ಮಾಹಿತಿಯನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.

 ಎನ್‌ಸಿಪಿ 50.73 ಕೋಟಿ ರೂ, ಸಿಪಿಎಂ 1.89 ಕೋಟಿ ರೂ, ಸಿಪಿಐ 18 ಲಕ್ಷ ರೂ. ದೇಣಿಗೆ ಪಡೆದಿದೆ. 2012ರಿಂದ 2016ರವರೆಗಿನ ಅವಧಿಯಲ್ಲಿ ಪಕ್ಷವು 20,000 ರೂ.ಗಿಂತ ಹೆಚ್ಚಿನ ಸ್ವಯಂಪ್ರೇರಿತ ದೇಣಿಗೆಯನ್ನು ಪಡೆದಿಲ್ಲ ಎಂದು ಬಿಎಸ್ಪಿ ಚುನಾವಣಾ ಆಯೋಗಕ್ಕೆ ತಿಳಿಸಿರುವ ಕಾರಣ ಈ ಪಟ್ಟಿಯಲ್ಲಿ ಬಿಎಸ್ಪಿ ಹೆಸರನ್ನು ಪರಿಗಣಿಸಲಾಗಿಲ್ಲ.

  ಈ ಅವಧಿಯಲ್ಲಿ ಐದು ರಾಷ್ಟ್ರೀಯ ಪಕ್ಷಗಳು ಪಡೆದಿರುವ 20,000 ರೂ.ಗಿಂತ ಅಧಿಕ ಮೊತ್ತದ ಸ್ವಯಂಪ್ರೇರಿತ ದೇಣಿಗೆಯ ಒಟ್ಟು ಮೊತ್ತ 1,070.68 ಕೋಟಿ ರೂ.ಆಗಿದ್ದು ಇದರಲ್ಲಿ ಶೇ.89ರಷ್ಟು ಅಂದರೆ 956.77 ಕೋಟಿ ರೂ. ಮೊತ್ತ ಕಾರ್ಪೊರೇಟ್ ಸಂಸ್ಥೆಗಳು, ವ್ಯವಹಾರ ಸಂಸ್ಥೆಗಳಿಂದ ಬಂದಿದೆ.

 2014-15ರಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭ ರಾಷ್ಟ್ರೀಯ ಪಕ್ಷಗಳು ಗರಿಷ್ಠ ಕಾರ್ಪೊರೇಟ್ ದೇಣಿಗೆ (ಒಟ್ಟು ದೇಣಿಗೆಯ ಶೇ.60ರಷ್ಟು) ಪಡೆದಿವೆ. 2012-13ರಲ್ಲಿ ದೇಣಿಗೆ ನೀಡಿಲ್ಲವಾದರೂ, ಸತ್ಯ ಎಲೆಕ್ಟೋರಲ್ ಟ್ರಸ್ಟ್ ಸಂಸ್ಥೆಯು 2012ರಿಂದ 2016ರವರೆಗಿನ ಅವಧಿಯಲ್ಲಿ ಮೂರು ರಾಷ್ಟ್ರೀಯ ಪಕ್ಷಗಳಿಗೆ ಅತ್ಯಧಿಕ ದೇಣಿಗೆ ನೀಡಿದೆ. ಈ ಸಂಸ್ಥೆ ಮೂರು ವರ್ಷದ ಅವಧಿಯಲ್ಲಿ 35 ಬಾರಿ ನೀಡಿದ ದೇಣಿಗೆಯ ಒಟ್ಟು ಮೊತ್ತ 260.87 ಕೋಟಿ ರೂ. ಆಗಿದ್ದು ಇದರಲ್ಲಿ ಬಿಜೆಪಿಗೆ 193.62 ಕೋಟಿ ರೂ, ಕಾಂಗ್ರೆಸ್‌ಗೆ 57.25 ಕೋಟಿ ರೂ. ದೇಣಿಗೆ ಸಂದಾಯವಾಗಿದೆ.

ದೇಣಿಗೆ ನೀಡಿದ ಕಾರ್ಪೊರೇಟ್ ಸಂಸ್ಥೆಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಜನರಲ್ ಇಲೆಕ್ಟೋರಲ್ ಟ್ರಸ್ಟ್ 2012ರಿಂದ 2016ರ ಅವಧಿಯಲ್ಲಿ ಬಿಜೆಪಿಗೆ 70.7 ಕೋಟಿ ರೂ. ಮತ್ತು ಕಾಂಗ್ರೆಸ್‌ಗೆ 54.1 ಕೋಟಿ ರೂ. ನೀಡಿದೆ. ಕಮ್ಯುನಿಸ್ಟ್ ಪಕ್ಷಗಳಿಗೆ ಹೆಚ್ಚಿನ ದೇಣಿಗೆ ‘ಸಂಘಟನೆ’ ಅಥವಾ ಯೂನಿಯನ್‌ಗಳಿಂದ ಸಂದಾಯವಾಗಿದೆ. ಸಿಪಿಐ ಪಕ್ಷಕ್ಕೆ 15 ವಿವಿಧ ಸಂಘಟನೆ/ಯೂನಿಯನ್‌ಗಳಿಂದ ಒಟ್ಟು 14.64 ಲಕ್ಷ ರೂ. ದೇಣಿಗೆ ಸಂದಾಯವಾಗಿದ್ದರೆ, ಸಿಪಿಐಎಂ ಪಕ್ಷ 7 ವಿವಿಧ ಸಂಘಟನೆ/ಯೂನಿಯನ್‌ಗಳಿಂದ 1.09 ಕೋಟಿ ರೂ. ಪಡೆದಿದೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿರುವ ಪ್ರಮಾಣಪತ್ರದ ಆಧಾರದಲ್ಲಿ ಕಾರ್ಪೊರೇಟ್, ಉದ್ದಿಮೆಗಳನ್ನು 14 ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಇದರಲ್ಲಿ ರಿಯಲ್ ಎಸ್ಟೇಟ್ ವಿಭಾಗದಿಂದ ಒಟ್ಟು 16.95 ಕೋಟಿ ರೂ. ದೇಣಿಗೆ ಸಂದಾಯವಾಗಿದ್ದರೆ, ಗಣಿಗಾರಿಕೆ, ರಿಯಲ್ ಎಸ್ಟೇಟ್, ಇಂಧನ, ಸುದ್ದಿಪತ್ರಿಕೆಗಳ ವಿಭಾಗದಿಂದ ಒಟ್ಟು 419.69 ಕೋಟಿ ರೂ. ದೇಣಿಗೆ ಸಂದಾಯವಾಗಿದೆ.

   ರಾಷ್ಟ್ರೀಯ ಪಕ್ಷಗಳು ಪಡೆದಿರುವ 1,546 ದೇಣಿಗೆಗಳು(ಒಟ್ಟು ಮೊತ್ತ 355.08 ಕೋಟಿ ರೂ) ದೇಣಿಗೆ ಪತ್ರದಲ್ಲಿ ವಿಳಾಸ, ‘ಪಾನ್’ ಕಾರ್ಡ್ ನಂಬರ್ ಮತ್ತಿತರ ಯಾವುದೇ ವಿವರವನ್ನು ಹೊಂದಿಲ್ಲ. ಬಿಜೆಪಿ 159.59 ಕೋಟಿ ರೂ. ದೇಣಿಗೆಯನ್ನು ಈ ರೀತಿಯಲ್ಲಿ ಪಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News