ಜನವರಿ 13ರಿಂದ ನ್ಯೂಝಿಲೆಂಡ್‌ನಲ್ಲಿ ಅಂಡರ್-19ವಿಶ್ವಕಪ್‌ ಕ್ರಿಕೆಟ್

Update: 2017-08-17 18:32 GMT

   ವೆಲ್ಲಿಂಗ್ಟನ್, ಆ.17: ಐಸಿಸಿ ಅಂಡರ್-19 ವಿಶ್ವಕಪ್ 2018ರ ಜ.13ರಿಂದ 19ರ ತನಕ ನ್ಯೂಝಿಲೆಂಡ್‌ನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್‌ಇಂಡೀಸ್ ತಂಡವನ್ನು ಆತಿಥೇಯ ನ್ಯೂಝಿಲೆಂಡ್ ಎದುರಿಸಲಿದೆ. ನ್ಯೂಝಿಲೆಂಡ್ ಮೂರನೆ ಬಾರಿ ವಿಶ್ವಕಪ್ ಆತಿಥ್ಯ ವಹಿಸಿಕೊಂಡಿದೆ. 2002 ಮತ್ತು 2010ರಲ್ಲಿ ನ್ಯೂಝಿಲೆಂಡ್‌ನಲ್ಲಿ ವಿಶ್ವಕಪ್ ಟೂರ್ನಮೆಂಟ್ ನಡೆದಿತ್ತು.

  ಆ.17ರಂದು ಟೌರಂಗಾದಲ್ಲಿ ಮಾಜಿ ಚಾಂಪಿಯನ್ ಭಾರತಕ್ಕೆ ಆಸ್ಟ್ರೇಲಿಯದ ಸವಾಲು ಎದುರಾಗಲಿದೆ.

 ಭಾರತ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಭಾರತ, ಆಸ್ಟ್ರೇಲಿಯ, ಝಿಂಬಾಬ್ವೆ ಮತ್ತು ಪಪುವಾ ನ್ಯೂ ಗುನಿಯಾ(ಪಿಎನ್‌ಜಿ) ‘ಬಿ’ ಗುಂಪಿನಲ್ಲಿರುವ ತಂಡಗಳು.

  ಅಂಡರ್-19 ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು 4 ಗುಂಪುಗಳಲ್ಲಿ ಹಣಾಹಣಿ ನಡೆಸಲಿವೆೆ. ನಾಲ್ಕು ನಗರಗಳಾದ ಕ್ರೈಸ್ಟ್‌ಚರ್ಚ್, ಕ್ವೀನ್ಸ್‌ಟೌನ್, ಟೌರಂಗಾ ಮತ್ತು ವಂಗೇರಿಯ 7 ಕ್ರೀಡಾಂಗಣಗಳಲ್ಲಿ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯ ಜನವರಿ 28ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.

10 ಅಗ್ರ ತಂಡಗಳು ನೇರವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆದಿವೆ. ಆದರೆ ನಮೀಬಿಯ 2016 ಅವೃತ್ತಿಯಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ವಿಶ್ವಕಪ್‌ನಲ್ಲಿ ಸ್ಥಾನ ಪಡೆದಿದೆ.

 ಕೀನ್ಯ, ಪಿಎನ್‌ಜಿ, ಕೆನಡಾ, ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ತಂಡಗಳು ಅರ್ಹತಾ ಸುತ್ತಿನ ಮೂಲಕ ತೇರ್ಗಡೆಯಾದ ತಂಡಗಳು. 2016ರಲ್ಲಿ ಬಾಂಗ್ಲಾದಲ್ಲಿ ನಡೆದ ಕಳೆದ ಆವೃತ್ತಿಯಲ್ಲಿ ಭದ್ರತಾ ಕಾರಣದಿಂದಾಗಿ ಆಸ್ಟ್ರೇಲಿಯ ಭಾಗವಹಿಸಿರಲಿಲ್ಲ. 2016ರಲ್ಲಿ ಸೆಮಿಫೈನಲ್ ತಲುಪಿದ್ದ ಬಾಂಗ್ಲಾ ತಂಡ ಸಿ’ ಗುಂಪಿನಲ್ಲಿ ಇಂಗ್ಲೆಂಡ್, ನಮೀಬಿಯ ಮತ್ತು ಕೆನಡಾ ತಂಡದೊಂದಿಗೆ ಸ್ಥಾನ ಪಡೆದಿದೆ. ಎರಡು ಬಾರಿ ಚಾಂಪಿಯನ್ ಆಗಿದ್ದ ಪಾಕಿಸ್ತಾನ ಮತ್ತು 2016ರಲ್ಲಿ ಸೆಮಿಫೈನಲ್‌ನಲ್ಲಿ ನಿರ್ಗಮಿಸಿದ್ದ ಶ್ರೀಲಂಕಾ ಗ್ರೂಪ್ ‘ಡಿ’ಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

ಪ್ರತಿಯೊಂದು ಗುಂಪಿನಿಂದಲೂ ಅಗ್ರಸ್ಥಾನ ಪಡೆದ 2 ತಂಡಗಳು ಸೂಪರ್ ಲೀಗ್ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾಗಲಿವೆೆ. ಸೂಪರ್‌ಲೀಗ್ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ಒಟ್ಟು 20 ಪಂದ್ಯಗಳು ನಿಗದಿಯಾಗಿವೆ.

2018 ಅಂಡರ್ -19 ವಿಶ್ವಕಪ್

ಎ ಗುಂಪು: ವೆಸ್ಟ್‌ಇಂಡೀಸ್, ದಕ್ಷಿಣ ಆಫ್ರಿಕ, ನ್ಯೂಝಿಲೆಂಡ್, ಕೀನ್ಯ.

ಬಿ ಗುಂಪು: ಭಾರತ, ಝಿಂಬಾಬ್ವೆ, ಆಸ್ಟ್ರೇಲಿಯ, ಪಿಎನ್‌ಜಿ.

ಸಿ ಗುಂಪು: ಬಾಂಗ್ಲಾದೇಶ, ಇಂಗ್ಲೆಂಡ್, ನಮೀಬಿಯಾ, ಕೆನಡಾ.

ಡಿ ಗುಂಪು: ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಐರ್ಲೆಂಡ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News