'ಮಿನಾ'ಳ ಮೈಯನ್ನು ದಿನಪತ್ರಿಕೆಯೊಂದರಲ್ಲಿ ಸುತ್ತಲಾಗಿತ್ತು ಹಾಗೂ ಮೈತುಂಬಾ ಇರುವೆಗಳಿದ್ದವು : ಕೊಹಿನೂರ್

Update: 2017-08-18 06:43 GMT

ನಾನು ಒಂದು ದಿನ ನನ್ನ ಕೆಲಸದ ಸ್ಥಳಕ್ಕೆ ಹೋಗುವಾಗ ಕಸದ ತೊಟ್ಟಿಯಲ್ಲಿ ಮಿನಾಳನ್ನು ನೋಡಿದಾಗ ಆಕೆ ಹುಟ್ಟಿ ಕೇವಲ ಒಂದು ದಿನವಾಗಿತ್ತು. ಕಸದ ತೊಟ್ಟಿಯಿಂದ ಸಣ್ಣದಾಗಿ ಅಳುವ ಸದ್ದು ಕೇಳಿಸುತ್ತಿತ್ತು. ಆಕೆಯ ಮೈಯನ್ನು ದಿನಪತ್ರಿಕೆಯೊಂದರಲ್ಲಿ ಸುತ್ತಲಾಗಿತ್ತು ಹಾಗೂ ಮೈತುಂಬಾ ಇರುವೆಗಳಿದ್ದವು. ಆಕೆ ಅದೆಷ್ಟು ಪುಟ್ಟದ್ದಾಗಿದ್ದಳೆಂದರೆ ಆಕೆಯನ್ನು ಕರೆದುಕೊಂಡು ಹೋಗಲು ಯಾರಿಗೂ ಮನಸ್ಸಿರಲಿಲ್ಲ. ಅಲ್ಲಿದ್ದ ಎಲ್ಲರನ್ನು ಕೂಗಿ ಕರೆದರೂ ಯಾರಿಗೂ ಈ ಮಗು ಬದುಕಿದೆಯಾ ಅಥವಾ ಸತ್ತಿದೆಯಾ ಎಂದು ನೋಡುವ ಆಸಕ್ತಿಯಿರಲಿಲ್ಲ. ನಂತರ ಆ ಮಗುವನ್ನು ನಾನು ಎತ್ತಿಕೊಂಡು ಬಂದೆ. ಕಳೆದ ಆರು ವರ್ಷಗಳಿಂದ ಆಕೆಯನ್ನು ನಾನು ಸಾಕುತ್ತಿದ್ದೇನೆ.

ನಾನು ನನ್ನ ಮಗುವನ್ನು ಅದು ಗರ್ಭದಲ್ಲಿರುವಾಗಲೇ ಕಳೆದುಕೊಂಡೆ. ನನ್ನ ಮಗು ತೀರಿಕೊಂಡ ಮೇಲೆ ನನ್ನ ಪತಿ ನನ್ನನ್ನು ಒಬ್ಬಳೇ ಬಿಟ್ಟು ಹೊರಟು ಹೋದರು. ನನಗೆ ಯಾರೂ ಇರಲಿಲ್ಲ. ರಸ್ತೆಯಲ್ಲಿ ಭಿಕ್ಷೆಯೆತ್ತಲು ಆರಂಭಿಸಿದೆ. ಮಿನಾಳನ್ನು ಬದುಕಿಸಲು ನನ್ನಿಂದ ಸಾಧ್ಯವಿರುವುದನ್ನೆಲ್ಲಾ ಮಾಡಿದೆ. ಜನರ ಮನೆಗೆಲಸವನ್ನೂ ಮಾಡುತ್ತಿದ್ದೆ. ನಾವು ಮಳೆಯಲ್ಲಿ ಒದ್ದೆಯಾಗುತ್ತಿದ್ದೆವು ಹಾಗೂ ಬಿಸಿಲಲ್ಲಿ ಒಣಗುತ್ತಿದ್ದೆವು. ನಾವು ಅದೇ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದೆವು ಆದರೆ ಮಿನಾಳನ್ನು ಖಾಲಿ ಹೊಟ್ಟೆಯಲ್ಲಿ ಮಲಗಲು ನಾನು ಯಾವತ್ತೂ ಬಿಡುತ್ತಿರಲಿಲ್ಲ. ಮಿನಾ ನನ್ನ ಜಗತ್ತೇ ಆಗಿದ್ದಳು. ಮಿನಾ ಬೆಳೆದು ದೊಡ್ಡವಳಾಗಿ ನನ್ನನ್ನು ಅಮ್ಮಾ ಎಂದು ಹೇಳುವ ಸಮಯಕ್ಕಾಗಿ ನಾನು ಸದಾ ಕಾಯುತ್ತಿದ್ದೆ.

ನನ್ನ ಇಡೀ ಬಾಳು ದುಃಖದಿಂದ ಕೂಡಿತ್ತು. ನಾನು ನನ್ನ ತಾಯಿಯ ಹೊಟ್ಟೆಯಲ್ಲಿರುವಾಗಲೇ ನನ್ನ ತಂದೆ ತೀರಿ ಹೋದರು. ನಾನು ನನ್ನ ತಂದೆಯನ್ನು ನೋಡಿಯೇ ಇಲ್ಲ. ಮಿನಾ ನಾಲ್ಕು ವರ್ಷದವಳಾದಾಗ ಆಕೆಗೆ ನಡೆಯಲು ಸಾಧ್ಯವಿಲ್ಲ ಎಂದು ನನಗೆ ತಿಳಿದು ಬಂತು. ಆಕೆ ಭಿನ್ನ ಸಾಮರ್ಥ್ಯದ ಮಗುವಾಗಿದ್ದಳು. ಆದರೆ ನಾನು ಆಶಾವಾದ ಕೈಬಿಡಲಿಲ್ಲ. ನನ್ನ ಮಗು ನನ್ನನ್ನು ನೋಡಿ ನಕ್ಕಾಗ ನಾನು ಎಲ್ಲಾ ದುಃಖ ದುಮ್ಮಾನಗಳನ್ನೂ ಮರೆತು ಬಿಡುತ್ತೇನೆ.

- ಕೊಹಿನೂರ್ (35)

Full View

Writer - ಜಿ ಎಂ ಬಿ ಆಕಾಶ್

contributor

Editor - ಜಿ ಎಂ ಬಿ ಆಕಾಶ್

contributor

Similar News