ಆಗಸ್ಟ್ 25ಕ್ಕೆ 'ಮಾರ್ಚ್ 22'....!

Update: 2017-08-18 13:13 GMT

ಬೆಂಗಳೂರು, ಆ.18: 'ಆಗಸ್ಟ್ 25ಕ್ಕೆ ಮಾರ್ಚ್ 22!'...... ಇದೇನಪ್ಪ ಹೀಗೆ ಎಂದು ಚಿಂತಿಸದಿರಿ. 'ಮಾರ್ಚ್ 22' ಎನ್ನುವುದು ಚಿತ್ರದ ಹೆಸರು. ಕೋಡ್ಲು ರಾಮಕೃಷ್ಣ ನಿರ್ದೇಶನದ 'ಮಾರ್ಚ್ 22' ಚಿತ್ರವು ಮುಂದಿನ ಶುಕ್ರವಾರ ತೆರೆಗೆ ಬರುತ್ತಿದೆ.

ಮಂಗಳೂರಿನಲ್ಲಿ ನಡೆದ ಕ್ಯಾಸೆಟ್ ಬಿಡುಗಡೆ ಸಮಾರಂಭದ ಬಳಿಕ ಚಿತ್ರದ ಬಿಡುಗಡೆಯ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಗಾಂಧಿನಗರದ ಸಿಟಡೆಲ್ ನಲ್ಲಿ ವಿಶೇಷ ಪತ್ರಿಕಾಗೋಷ್ಠಿ ನಡೆಸಲಾಯಿತು.

ಮೂಲತಃ ಮಂಗಳೂರಿನವರಾದ ಹರೀಶ್ ಶೇರಿಗಾರ್ ಅವರು, ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ದುಬೈನಲ್ಲಿ‌ ಉದ್ಯಮ ನಡೆಸಿಕೊಂಡಿದ್ದಾರೆ. ಕೋಡ್ಲು ರಾಮಕೃಷ್ಣರೊಂದಿಗಿನ‌ ಏಳೆಂಟು‌ ವರ್ಷಗಳ ಸ್ನೇಹ, ಅವರಿಗೆ ಸಿನಿಮಾ ಮಾಡಲು  ಪ್ರೇರಣೆ ನೀಡಿತಂತೆ. ಆರಂಭದಿಂದಲೇ ಕಲೆಯ ಬಗ್ಗೆ ಒಲವು‌ ಮೂಡಿಸಿಕೊಂಡಿರುವ
ಹರೀಶ್ ಶೇರಿಗಾರ್, ದುಬೈನಲ್ಲಿ ಮೈಕ್ ಹಿಡಿದರೆ 'ಜ್ಯೂನಿಯರ್ ಎಸ್.ಪಿ. ಬಾಲಸುಬ್ರಹ್ಮಣ್ಯಂ' ಎಂಬ ಹೆಸರಿನಿಂದಲೂ ಕರೆಸಿಕೊಳ್ಳುತ್ತಾರಂತೆ. "ನನ್ನ ತಾಯಿ ಅನಂತ್ ನಾಗ್ ಅವರ ಅಭಿಮಾನಿಯಾಗಿದ್ದರು. ಪ್ರಥಮ ನಿರ್ಮಾಣದಲ್ಲೇ ಅವರು ನಟಿಸುತ್ತಿರುವುದು, ಸಹೋದರನಂತೆ ಬೆಂಬಲವಾಗಿರುವುದು ಹೆಮ್ಮೆ ತಂದಿದೆ" ಎಂದರು.

ವಿಶೇಷ ಪಾತ್ರದಲ್ಲಿ ಬಿ.ಆರ್. ಶೆಟ್ಟಿ: ಪದ್ಮಶ್ರೀ ಬಿ.ಆರ್. ಶೆಟ್ಟಿಯವರು ಕೂಡ ಕರಾವಳಿಯವರಾಗಿದ್ದು ಯಶಸ್ವಿ ಅನಿವಾಸಿ ಉದ್ಯಮಿಯಾಗಿ ಗುರುತಿಸಿಕೊಂಡವರು. ಅವರು ಸ್ನೇಹಿತರಾಗಿ ಬೆನ್ನೆಲುಬಾಗಿದ್ದರು ಎನ್ನುತ್ತಾರೆ ನಿರ್ಮಾಪಕ ಹರೀಶ್ ಶೇರಿಗಾರ್. ಅದೇ ಕಾರಣಕ್ಕೆ ಪ್ರಥಮ ಬಾರಿಗೆ ಶೆಟ್ಟರಿಂದ ಚಿತ್ರದಲ್ಲೊಂದು ವಿಶೇಷ ಪಾತ್ರವನ್ನು ಮಾಡಿಸುವಲ್ಲಿ ಗೆದ್ದಿದ್ದಾರೆ. 'ಮುತ್ತು ರತ್ನದಾ ಪ್ಯಾಟೆ..' ಎಂಬ ಕೈಲಾಶ್ ಖೇರ್ ಗೀತೆಗೆ ಬಿಆರ್ ಶೆಟ್ಟಿ ಹೆಜ್ಜೆ ಹಾಕಿದ್ದಾರೆ.

ಅನಂತ್ ನಾಗ್ ಅನಿಸಿಕೆ

"ಇಂತಹ ಚಿತ್ರಗಳು ಬರುವುದು ತೀರ ಅಪರೂಪ" ಎಂದರು ಅನಂತನಾಗ್. "ಕೂಡ್ಲು ಜೊತೆಗಿನ ನನ್ನ ಸ್ನೇಹ 30 ವರ್ಷಗಳದ್ದು. ಈ ಚಿತ್ರದಲ್ಲಿ ನನ್ನದು ನೀರಿಗಾಗಿ ಹುಡುಕಾಟ ನಡೆಸುವ ಜಿಯೋಲಜಿಸ್ಟ್ ಪಾತ್ರ" ಎಂದು ವಿವರಿಸಿದರು.

ನಿರ್ದೇಶಕರ ಮಾತು

"ಇದು ನೀರಿನ ಸಮಸ್ಯೆ ಮತ್ತು ಧರ್ಮಗಳ ‌ನಡುವಿನ ಕೋಲಾಹಲದ ಕುರಿತಾದ ಕತೆ. ನನ್ನಲ್ಲಿ ಈ ರೀತಿಯ ಬೇಕಾದಷ್ಟು ಕತೆಗಳು ಇವೆ. ಆದರೆ ಇಂಥ ನಿರ್ಮಾಪಕರು ‌ಸಿಕ್ಕಿದ್ದು ಮಾತ್ರ ಇದೇ ಪ್ರಥಮ" ಎಂದರು ಕೋಡ್ಲು ರಾಮಕೃಷ್ಣ. ಚಿತ್ರಕ್ಕೆ ಅವರೇ ಕತೆ, ಚಿತ್ರಕತೆಯನ್ನೂ ಬರೆದಿದ್ದಾರೆ. ಚಿತ್ರಕ್ಕೆ ಯು ಸರ್ಟಿಫಿಕೇಟ್ ದೊರಕಿರುವುದಾಗಿ ಕೋಡ್ಲು ತಿಳಿಸಿದರು.

ಕಲಾವಿದರು ಕಂಡಂತೆ

ನಟಿ ವಿನಯಪ್ರಕಾಶ್ ಮಾತನಾಡಿ, "ನೀರು ಹೇಗೆ ಎಲ್ಲರ ಅವಶ್ಯಕತೆಯೋ, ಅದೇ ರೀತಿ ಇದು ಎಲ್ಲರೂ ನೋಡಬೇಕಾದ ಸಿನಿಮಾ. ಯಾಕೆಂದರೆ ನೀರಿನ ಕುರಿತಾದ ಚಿತ್ರ ಎಂದು ಹೇಳಿದರು. ನಟ ಜೈಜಗದೀಶ್ "ಚಿತ್ರದಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ಇತ್ತು" ಎಂದರು.

ಶರತ್ ಲೋಹಿತಾಶ್ವ ತಮ್ಮದು ರಾಜಕಾರಣಿಯ ಪಾತ್ರ. ಎಂದಿನಂತೆ ಖಳ ಛಾಯೆ ಇರುವುದಾಗಿ ತಿಳಿಸಿದರು. ಪದ್ಮಜಾ ರಾವ್ ಉಪಸ್ಥಿತರಿದ್ದರು. ಅಂದಹಾಗೆ ಹಿರಿಯನಟ ರಮೇಶ್ ಭಟ್ ಅವರಿಗೆ  ಇದು 500ನೇ ಚಿತ್ರವಂತೆ. ಚಿತ್ರದಲ್ಲಿ ಪ್ರಧಾನ ಪಾತ್ರವಹಿಸಿರುವ ಯುವ ಕಲಾವಿದರಾದ ನಟಿ ಮೇಘಶ್ರೀ, ಆರ್ಯವರ್ಧನ್ ಮತ್ತು ಕಿರಣ್ ರಾಜ್ ಉಪಸ್ಥಿತರಿದ್ದರು.

ಅದ್ಧೂರಿ ಚಿತ್ರ

ದೊಡ್ಡ ಸ್ಟಾರ್ ಕಲಾವಿದರು ಇಲ್ಲವಾದರೂ, ಕನ್ನಡದ ಮಟ್ಟಿಗೆ ಇದು ಹೈ ಬಜೆಟ್ ಚಿತ್ರ. ಜ್ಯೂನಿಯರ್  ಆರ್ಟಿಸ್ಟ್ ಗಳ ದಂಡೇ ದಿನಕ್ಕೆ150ರಿಂದ 200 ಮಂದಿಯನ್ನೊಳಗೊಂಡಿತ್ತು. ನನ್ನ ಮದುವೆಯೂ ಇಷ್ಟು ಅದ್ಧೂರಿಯಾಗಿರಲಿಲ್ಲ  ಎಂದು ತಮ್ಮ ಸ್ನೇಹಿತರು ಹೇಳುತ್ತಿದ್ದ ಮಾತನ್ನು ನಿರ್ಮಾಪಕರು ಹಂಚಿಕೊಂಡರು. ಚಿತ್ರಕ್ಕಾಗಿ ಹಾಕಲಾದ ಮಸೀದಿಯ ಸೆಟ್ ಸೇರಿದಂತೆ ಒಟ್ಟು ವೆಚ್ಚ 6 ಕೋಟಿ ಮೀರಿದೆಯಂತೆ. ಗಣೇಶ ಚತುರ್ಥಿಗೆ ಚಿತ್ರ ಬಿಡುಗಡೆಯಾಗಲಿದ್ದು, ನೂರಕ್ಕೂ‌ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣಿಸಲು ಸಿದ್ಧತೆ ನಡೆಸಿರುವುದಾಗಿ ವಿತರಕ ಮೈಸೂರು ಟಾಕೀಸ್ ನ ಜಾಕ್ ಮಂಜು ಹೇಳಿದರು. ಸೆಪ್ಟೆಂಬರ್ ಬಳಿಕ ದುಬೈ, ಮುಂಬೈ, ಯುರೋಪ್ ಗಳಲ್ಲಿಯೂ ಬಿಡುಗಡೆಗೊಳಿಸಲು ನಿರ್ಮಾಪಕರು ಯೋಜನೆ ಹಾಕಿದ್ದಾರೆ.

ತಂತ್ರಜ್ಞರ ಮಾತು

ಖ್ಯಾತ ಸಂಕಲನಕಾರ ಬಸವರಾಜ್ ಚಿತ್ರದ ಎಡಿಟಿಂಗ್ ನಿರ್ವಹಿಸಿದ್ದು, ಒಟ್ಟು 6 ಗಂಟೆಗಳ ಫುಟೇಜ್ ನಿಂದ 2 ಗಂಟೆ 30 ನಿಮಿಷಕ್ಕೆ ತಂದು ನಿಲ್ಲಿಸಲು ಪಾಡು ಪಟ್ಟಿದ್ದಾಗಿ ಹೇಳಿದರು. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಚಿತ್ರಕ್ಕೆ ಮೂರು ಹಾಡುಗಳು ಮತ್ತು ರಿ ರೆಕಾರ್ಡಿಂಗ್ ನಿರ್ವಹಿಸಿರುವುದಾಗಿ ಹೇಳಿದರು. ಮತ್ತೋರ್ವ ಸಂಗೀತ ನಿರ್ದೇಶಕರಾಗಿ ರವಿಶೇಖರ್  ಎಂಬ ಹಂಸಲೇಖರ  ಶಿಷ್ಯ ರಂಗ ಪ್ರವೇಶ ಮಾಡಿದ್ದು, ಮೂರು ಗೀತೆಗಳನ್ನು ರಚಿಸಿ ಒಂದನ್ನು ಗೀತೆಯನ್ನು ಹಾಡಿರುವುದಾಗಿ ತಿಳಿಸಿದರು. ಚಿತ್ರದಲ್ಲಿ‌ ಪೋಷಕ ಪಾತ್ರ ನಿರ್ವಹಿಸಿರುವ ರವೀಂದ್ರನಾಥ ಸುದ್ದಿಗೋಷ್ಠಿಯನ್ನು ನಿರೂಪಿಸಿದರು.

ವಿಶೇಷ ಸ್ಪರ್ಧೆ

ಚಿತ್ರದ ಕುರಿತಾದ ಸ್ಪರ್ಧೆಯೊಂದನ್ನು ನಿಗದಿ ಪಡಿಸಲಾಗಿದ್ದು, ಅದರ ಪ್ರಕಾರ acme movies.comನಲ್ಲಿ 15 ದಿನಗಳ ಕಾಲ‌ ಕೇಳಲಾಗುವ ಪ್ರಶ್ನೆಗಳಿಗೆ ಹೆಚ್ಚು ಸರಿ ಉತ್ತರಗಳನ್ನು ನೀಡಿದವರಿಗೆ ವಿಶೇಷ ಅವಕಾಶವೊಂದನ್ನು ನೀಡಲಾಗುತ್ತಿದೆ. ಉತ್ತರ ನೀಡಿದ ಒಬ್ಬರನ್ನು ಆಯ್ಕೆ ಮಾಡಿ ಅವರು ಜೊತೆಗೊಬ್ಬರು ಆಪ್ತರನ್ನು ಸೇರಿಸಿಕೊಂಡು ಮೂರು ದಿನ ಉಚಿತ ದುಬೈ ಪ್ರವಾಸ ಕೈಗೊಳ್ಳುವ ಅವಕಾಶವನ್ನು ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News